

ಗಣೇಶ ಚತುರ್ಥಿ ಬಂತೆಂದರೆ ಮನೆಯಲ್ಲಿ ಮಾತ್ರವಲ್ಲದೇ ಇಡೀ ಊರಿನಲ್ಲಿ ಹಬ್ಬದ ಕಳೆ ದುಪ್ಪಟ್ಟಾಗಿರುತ್ತದೆ. ಮನೆಯಲ್ಲಿ ಗಣಪನ ಪೂಜೆ ಮುಗಿಸಿ ಪೆಂಡಾಲ್ಗಳಲ್ಲಿ ವಿಭಿನ್ನವಾದ ದೊಡ್ಡ ಗಣೇಶನ ಮೂರ್ತಿಗಳನ್ನು ನೋಡಿದರೆ ಅದೇನೋ ನೆಮ್ಮದಿ.
ಬೆಂಗಳೂರಿಗರಿಗೆ ಗಣಪತಿ ಹಬ್ಬ ಬಹಳ ವಿಶೇಷ. ಏಕೆಂದರೆ ಈ ಮಹಾನಗರದಲ್ಲಿ ಗಣಪತಿಯ ಅಸಂಖ್ಯ ರೂಪಗಳನ್ನು ಪೆಂಡಾಲ್ಗಳಲ್ಲಿ ಕಣ್ತುಂಬಿಕೊಳ್ಳಬಹುದು. ಬೆಂಗಳೂರಿನಲ್ಲಿ ನೀವು ದರ್ಶಿಸಲೇ ಬೇಕಾದ ಟಾಪ್ 5 ಗಣೇಶ ಪೆಂಡಾಲ್ಗಳ ಮಾಹಿತಿ ತಿಳಿದುಕೊಳ್ಳಿ.
ಬೆಂಗಳೂರು ಗಣೇಶ ಉತ್ಸವ: ಸುಮಾರು 60 ವರ್ಷಗಳಿಂದ ಅದ್ದೂರಿಯಾಗಿ ನಡೆಯುತ್ತಿರುವ ಬೆಂಗಳೂರು ಗಣೇಶ ಉತ್ಸವವನ್ನು ಕಣ್ತುಂಬಿಕೊಳ್ಳಬೇಕೆಂದರೆ ಬಸವನಗುಡಿಗೆ ಹೋಗಲೇಬೇಕು. ಎಪಿಎಸ್ ಕಾಲೇಜು ಮೈದಾನದಲ್ಲಿ, ಶ್ರೀ ವಿದ್ಯಾರಣ್ಯ ಯುವಕ ಸಂಘದ ನೇತೃತ್ವದಲ್ಲಿ ಗಣೇಶನನ್ನು ಕೂರಿಸಿ ಪೂಜೆ ಮಾಡಲಾಗುತ್ತದೆ. ಗಣೇಶನ ವಿಸರ್ಜನೆ ಆಗುವವರೆಗೂ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಘಟಾನುಘಟಿ ನಟರು, ಹಾಡುಗಾರರು ಸೇರಿದಂತೆ ಹಲವು ಕಲಾವಿದರು ಕಾರ್ಯಕ್ರಮ ನಡೆಸಿಕೊಡುತ್ತಾರೆ.
ಶ್ರೀ ವಿನಾಯಕ ಗೆಳೆಯರ ಬಳಗ, ಕೋಡಿಹಳ್ಳಿ: ಶ್ರೀ ವಿನಾಯಕ ಗೆಳಯರ ಬಳಗದ ವತಿಯಿಂದ ಕೋಡಿಹಳ್ಳಿಯ ಸಮೀಪ ವಿಭಿನ್ನವಾದ ಗಣೇಶ ಮೂರ್ತಿಗಳನ್ನು ಸ್ಥಾಪಿಸಿ ಪುಜಿಸಲಾಗುತ್ತದೆ. ಸುಮಾರು 4 ದಿನಗಳ ಕಾಲ ಗಣೇಶನನ್ನು ಪ್ರತಿಷ್ಠಾಪಿಸಿ ವಿಸರ್ಜನೆ ಮಾಡುತ್ತಾರೆ. ಕೊನೆಯ ದಿನ ಏರಿಯಾ ಜನರೆಲ್ಲರೂ ಸಂಭ್ರಮದಲ್ಲಿ ಮೆರವಣಿಗೆ ನಡೆಸಿ ಗಣೇಶನನ್ನು ಬೀಳ್ಕೊಡುತ್ತಾರೆ.
ಶ್ರೀ ವಿನಾಯಕ ಭಕ್ತ ಮಂಡಲಿ, ಬಾಣಸವಾಡಿ: ಬಾಣಸವಾಡಿಯಲ್ಲಿ ಶ್ರೀ ವಿನಾಯಕ ಭಕ್ತ ಮಂಡಲಿ ಕೂರಿಸುವ ಗಣಪತಿಯನ್ನು ನೋಡಲು ಕಣ್ಣಿಗೇ ಹಬ್ಬ. 5 ದಿನಗಳ ಕಾಲ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಇಲ್ಲಿ ಪೂಜಿಸಲಾಗುತ್ತದೆ. ಇಲ್ಲಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ.
ಪಂಚಮುಖಿ ಗಣೇಶ ದೇವಸ್ಥಾನ: ಕೆಂಗೇರಿಯಲ್ಲಿರುವ ಪಂಚಮುಖಿ ಗಣಪತಿಯ ದೇವಾಲಯದಲ್ಲಿ ಬಹಳ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಐದು ಕೋಶಗಳನ್ನು ಬಿಂಬಿಸುವ ಈ ಗಣೇಶನ್ನು ಚತುರ್ಥೀಯ ದಿನ ಇಷ್ಟಾರ್ಥ ಸಿದ್ಧಿಗಾಗಿ ಶಾಸ್ತ್ರೋಕ್ತವಾಗಿ ಪೂಜಿಸಲಾಗುತ್ತದೆ.