

ಅಮೃತಸರ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ (Team India) ಸೋಲುಂಡಿದ್ದು, ಭಾರೀ ಮುಖಭಂಗವನ್ನುಅನುಭವಿಸಿದೆ. 4331 ದಿನಗಳು ಅಂದರೆ 12 ವರ್ಷಗಳ ಬಳಿಕ ತವರು ನೆಲದಲ್ಲಿ ಭಾರತ (Team India) ಟೆಸ್ಟ್ ಸರಣಿಯಲ್ಲಿ ಸೋತಿದ್ದು, ರೋಹಿತ್ ಪಡೆ ವಿರುದ್ಧ ಮಾಜಿ ಕ್ರಿಕೆಟಿಗರು ಗರಂ ಆಗಿದ್ದಾರೆ. ಇದಲ್ಲದೆ ಕೋಚ್ ಗೌತಮ್ ಗಂಭೀರ್ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನ ಹೊರಹಾಕಿರುವ ಕ್ರೀಡಾ ತಜ್ಞರು ಮುಂಬರುವ ಟೂರ್ನಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಟೆಸ್ಟ್ನಲ್ಲಿ ಆದ ಎಡವಟ್ಟನ್ನು ಸರಿಮಾಡಿಕೊಂಡು ಎರಡನೇ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಲಾಗುತ್ತದೆ ಎಂಬ ನಿರೀಕ್ಷೆ ಇತ್ತಾದರೂ ಟೀಮ್ ಇಂಡಿಯಾ (Team India) ಬ್ಯಾಟ್ಸ್ಮನ್ಗಳ ವೈಫಲ್ಯದಿಂದಾಗಿ ಅದು ಹುಸಿಯಾಯಿತು. ಆಫ್ಸ್ಪಿನ್ ಜೋಡಿಗಳಾದ ಅಶ್ವಿನ್ ಹಾಗೂ ಸುಂದರ್ ಕಮಾಲ್ ಮಾಡಿದರಾದರೂ ನಿರೀಕ್ಷಿತ ಮಟ್ಟದಲ್ಲಿ ತಂಡ ಪ್ರದರ್ಶನ ನೀಡದೆ ಇರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಬಗ್ಗೆ ಮಾಜಿ ಕ್ರಿಕೆಟಿಗ ಮದನ್ ಲಾಲ್ ಮಾತನಾಡಿದ್ದಾರೆ.
ಸುದ್ದಿ ಸಂಸ್ಥೆ ಎಎನ್ಐಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಮದನ್ ಲಾಲ್, ನನ್ನ ಪ್ರಕಾರ ರಿಷಭ್ ಪಂತ್ ರನೌಟ್ ಪಂದ್ಯಕ್ಕೆ ಮಹತ್ವದ ತಿರುವು ಎಂದು ಹೇಳುತ್ತೇನೆ. ಆತ ಎಂತಹ ಆಟಗಾರನೆಂದರೆ ಪಂದ್ಯವನ್ನು ಯಾವ ದಿಕ್ಕಿಗೆ ಬೇಕಾದರೂ ತಿರುಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾನೆ. ಕೆಲವೊಮ್ಮೆ ನಾವು ತೆಗೆದುಕೊಳ್ಳುವ ತಪ್ಪು ನಿರ್ಣಯಗಳಿಗೆ ಬೆಲೆ ತೆರಬೇಕಾಗುತ್ತದೆ. ಟಾಸ್ ಎಲ್ಲವನ್ನು ನಿರ್ಣಯಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಸ್ಪಿನ್ನಿಂಗ್ ಟ್ರ್ಯಾಕ್‌ನಲ್ಲಿ 200-250 ರನ್ ಗಳಿಸುವುದು ಕಷ್ಟವಾಗುತ್ತದೆ. ಆದ್ದರಿಂದ, ನೀವು ಉತ್ತಮ ಬೌಲರ್ಗಳನ್ನು ಹೊಂದಿರುವುದರಿಂದ ಗೆಲುವು ಸುಲಭವಾಗುತ್ತದೆ. ಇಲ್ಲಿ ನಮ್ಮ ವಿಶ್ವದರ್ಜೆಯ ಐದು ಬ್ಯಾಟ್ಸ್ಮನ್ಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ನಮ್ಮ ಸೋಲಿಗೆ ಇವರೇ ಕಾರಣ ಎಂದು ನಾನು ಹೇಳುತ್ತೇನೆ. ನಾವು ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಬಗ್ಗೆ ಯೋಚಿಸಿಲ್ಲ. ಪ್ರಸ್ತುತ ನಮ್ಮ ಕೈಯಲ್ಲಿ ಏನಿದೆ ನಾವು ಅದರ ಬಗ್ಗೆ ಹೆಚ್ಚು ಯೋಚಿಸಬೇಕಿದೆ. ವಾಂಖೆಡೆಯಲ್ಲಿ ಮುಂದಿನ ಪಂದ್ಯ ನಡೆಯಲಿದ್ದು, ನಾವು ಅದರ ಬಗ್ಗೆ ಹೆಚ್ಚು ಯೋಚಿಸಬೇಕಿದೆ. ಅಂತಿಮವಾಗಿ ಗೆಲುವೇ ನಮ್ಮ ಗುರಿಯಾಗಿದೆ ಎಂದು ಟೀಮ್ ಇಂಡಿಯಾದ (Team India) ಮಾಜಿ ಆಟಗಾರ ಮದನ್ ಲಾಲ್ ಅಭಿಪ್ರಾಯಪಟ್ಟಿದ್ದಾರೆ.