ಬಂಟ್ವಾಳ: ಬ್ರಹ್ಮರಕೊಟ್ಲುವಿನಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲದ, ಅವೈಜ್ಞಾನಿಕ ಟೋಲ್ ಪ್ಲಾಜಾ ಇದ್ದು, ಇಲ್ಲಿ ಹಲವು ವರ್ಷಗಳಿಂದ ಹಗಲು ದರೋಡೆ ನಡೆಸುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಇಲ್ಲಿನ ಟೋಲ್ ಸಿಬ್ಬಂದಿ ಈ ಹಿಂದೆ ಹಲವು ಬಾರಿ ವಾಹನ ಚಾಲಕರಿಗೆ ಅದರಲ್ಲೂ ಮಹಿಳೆಯರೆಂದು ನೋಡದೆ ಹಲ್ಲೆ ನಡೆಸಿ ದರ್ಪ ತೋರಿಸಿದ್ದಾರೆ. ಈ ಬಗ್ಗೆ ಹಲವು ಬಾರಿ ಸ್ಥಳೀಯ ಪೊಲೀಸ್ ಸ್ಟೇಷನ್ಗೆ ದೂರು ನೀಡಿದರು ರಾಜಕೀಯ ಪ್ರಭಾವ ಬಳಸಿಕೊಂಡು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಈಗ ಮತ್ತೆ ಟೋಲ್ ಸಿಬ್ಬಂದಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ತೋರಿಸಿದ್ದಾರೆ ಇದು ಅಮಾನವೀಯ ಮತ್ತು ಅಕ್ಷಮ್ಯ ಅಪರಾಧ ಇದನ್ನು ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಅತ್ಯಂತ ಕಟು ಶಬ್ದಗಳಲ್ಲಿ ಖಂಡಿಸುತ್ತದೆ ಎಂದು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಹಾಗೂ ಬಂಟ್ವಾಳ ಪುರಸಭಾ ಉಪಾಧ್ಯಕ್ಷ ಮೂನೀಶ್ ಅಲಿ ತಿಳಿಸಿದ್ದಾರೆ. ಗೂಂಡಾಗಿರಿ ನಡೆಸಿದ ಟೋಲ್ ಸಿಬ್ಬಂದಿಯನ್ನು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.