

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಟೋಲ್ ಅಳವಡಿಕೆ ಪ್ರಕ್ರಿಯೆ ಆರಂಭಗೊಂಡಿತ್ತು. ಆಗ ಬೆಳ್ಮಣ್‌ನಲ್ಲಿ ನಡೆದ ಟೋಲ್ ಹೋರಾಟಗಾರರ ಪ್ರತಿಭಟನೆಗೆ ಮಣಿದು ಬೊಮ್ಮಾಯಿ ಸರ್ಕಾರ ಅದನ್ನು ಕಂಚಿನಡ್ಕಕ್ಕೆ ರವಾನಿಸಿದೆ. ಈಗ ಇಲ್ಲಿಂದಲೇ ಓಡಿಸುವ ಉದ್ದೇಶಕ್ಕಾಗಿ ಈ ಹೋರಾಟ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಕಂಚಿನಡ್ಕದಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಆಕ್ರೋಶ ವ್ಯಕ್ತಪಡಿಸಿದರು.
ಕಂಚಿನಡ್ಕದಲ್ಲಿ ಸ್ಥಾಪಿಸಲುದ್ದೇಶಿಸಿರುವ ಟೋಲ್ ಗೇಟ್ ರದ್ದುಪಡಿಸುವಂತೆ ಮತ್ತು ಈ ರಸ್ತೆಯಲ್ಲಿ ಟೋಲ್ ಸ್ಥಾಪನೆ ಪ್ರಕ್ರಿಯೆ ಕೈ ಬಿಡುವಂತೆ ಒತ್ತಾಯಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಂಚಿನಡ್ಕದಲ್ಲಿ ಬುಧವಾರ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುನಿಯಾಲು ಉದಯ್‌ಕುಮಾರ್ ಶೆಟ್ಟಿ, ಶೇಖರ ಹೆಜ್ಮಾಡಿ, ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿದರು. ಕೆಪಿಸಿಸಿ ಸಂಯೋಜಕ ನವೀನ್‌ಚಂದ್ರ ಜೆ.ಶೆಟ್ಟಿ, ಪಕ್ಷದ ಪ್ರಮುಖರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಹರೀಶ್ ಕಿಣಿ, ಕಾಪು ದಿವಾಕರ ಶೆಟ್ಟಿ, ರಾಲ್ಪಿ ಡಿಕೋಸ್ತ, ಶರ್ಪುದ್ದೀನ್ ಶೇಖ್, ದೀಪಕ್ ಕೋಟ್ಯಾನ್, ಅಬ್ದುಲ್ ಅಜೀಜ್, ಶಾಂತಲತಾ ಶೆಟ್ಟಿ, ಶಿವಾಜಿ ಸುವರ್ಣ, ಗುಲಾಂ ಮಹಮ್ಮದ್, ಭುಜಂಗ ಶೆಟ್ಟಿ, ಅಶೋಕ್ ಸಾಲ್ಯಾನ್, ವಿನಯ ಬಲ್ಲಾಳ್, ರಮೀಜ್ ಹುಸೇನ್, ರಮೇಶ್ ಕಾಂಚನ್, ನವೀನ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.