ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆ ವಿರೋಧಿಸಿ; ಇಂದು ಕಾರವಾರ ಬಂದ್​ಗೆ ಕರೆ

15KWR1A
Published on

ಕಾರವಾರ: ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆ ವಿರೋಧಿಸಿ ಮೀನುಗಾರರ ಸಂಘಟನೆಗಳು ಜ. 16ರಂದು ಕಾರವಾರ ಬಂದ್​ಗೆ ಕರೆ ನೀಡಿವೆ.

ಬಂದ್​ಗೆ ನಗರದ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದು, ಅಂಗಡಿ ಮುಂಗಟ್ಟುಗಳು ಮುಚ್ಚಲಿವೆ. ವಾಹನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಜಯಕರ್ನಾಟಕ, ಕರುನಾಡ ರಕ್ಷಣಾ ವೇದಿಕೆ, ಜನಶಕ್ತಿ ವೇದಿಕೆ, ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಸಿಪಿಎಂ, ರಿಕ್ಷಾ ಚಾಲಕರ ಮಾಲೀಕರ ಸಂಘಟನೆಗಳು ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿವೆ. ಹೋಟೆಲ್ ಮಾಲೀಕರ ಸಂಘಟನೆ, ವ್ಯಾಪಾರಸ್ಥರ ಸಂಘಟನೆಗಳ ಸದಸ್ಯರೂ ಬಾಹ್ಯ ಬೆಂಬಲ ಸೂಚಿಸಿ ವ್ಯಾಪಾರ, ವಹಿವಾಟು ಬಂದ್ ಮಾಡುವುದಾಗಿ ತಿಳಿಸಿದ್ದಾರೆ. ಆಟೋ ರಿಕ್ಷಾ, ಟೆಂಪೋಗಳ ಸಂಚಾರ ಬಂದ್ ಆಗಬಹುದಾಗಿದೆ. ಆದರೆ, ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ಶಾಲೆ, ಕಾಲೇಜ್​ಗಳು ತೆರೆದಿರಲಿವೆ. ಅಹಿತಕರ ಘಟನೆ ನಡೆಯದಿದ್ದಲ್ಲಿ ಎನ್​ಡಬ್ಲ್ಯುಕೆಆರ್​ಟಿಸಿ ಬಸ್​ಗಳ ಸಂಚಾರ ಸುಗಮವಾಗಿರಲಿದೆ.

ಬೆಳಗ್ಗೆ 11 ಗಂಟೆಗೆ ಮಿತ್ರ ಸಮಾಜದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಅಥವಾ ಕಾಮಗಾರಿ ನಡೆಯುವ ಸ್ಥಳದವರೆಗೆ ಬೃಹತ್ ಮೆರವಣಿಗೆ ನಡೆಸಲು ಮೀನುಗಾರರ ಮುಖಂಡರು ನಿರ್ಧರಿಸಿದ್ದಾರೆ. ಜಿಲ್ಲೆಯ ವಿವಿಧೆಡೆಯಿಂದ ಮೀನುಗಾರರ ಸಂಘಟನೆಗಳ ಸದಸ್ಯರು ಆಗಮಿಸಿ ಬೆಂಬಲ ಸೂಚಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರತಿಭಟನೆಯಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಜನ ಸೇರುವ ಸಾಧ್ಯತೆ ಹಿನ್ನೆಲೆಯಲ್ಲಿ ವಿಶೇಷ ಪೊಲೀಸ್ ಭದ್ರತೆ ಆಯೋಜಿಸಲಾಗಿದೆ. ಹೊರ ಜಿಲ್ಲೆಗಳಿಂದ ಪೊಲೀಸ್ ತುಕಡಿಗಳನ್ನು ಕರೆಸಿಕೊಳ್ಳಲಾಗಿದೆ.

ಕಾಮಗಾರಿಗೆ ತಾತ್ಕಾಲಿಕ ತಡೆ: ಅಲೆ ತಡೆಗೋಡೆ ನಿರ್ವಣಕ್ಕಾಗಿ ಉದ್ಯಾನ ಸಮೀಪ ಕಡಲ ತೀರಕ್ಕೆ ಕಲ್ಲು ಹಾಕುವ ಕಾಮಗಾರಿ ಚಾಲ್ತಿಯಲ್ಲಿದೆ. ಮೀನುಗಾರರು ಬುಧವಾರ ಬೆಳಗ್ಗೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಏಂಡಿ ಬಲೆ ಹಾಕಿ ಪ್ರತಿಭಟನೆ ನಡೆಸಿದರು. ಕಡಲ ತೀರಕ್ಕೆ ಕಲ್ಲು ಹಾಕಲು ಅವಕಾಶ ನೀಡುವುದಿಲ್ಲ ಎಂದು ತಡೆದರು. ನಂತರ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಜಿಲ್ಲಾಧಿಕಾರಿ ಕಚೇರಿಯ ಎದುರು ಮೀನುಗಾರ ಮಹಿಳೆಯರ ನಿರಂತರ ಧರಣಿ ಮುಂದುವರಿದಿದೆ. ಮಧ್ಯಾಹ್ನದ ಹೊತ್ತಿಗೆ ಪೊಲೀಸರಿಗೆ ಎಳ್ಳು, ಬೆಲ್ಲ ಹಂಚಿ ತಮಗೆ ಬೆಂಬಲ ನೀಡುವಂತೆ ಕೋರಿದರು.

ಯೋಜನೆ ಬಗ್ಗೆ ಅಪಪ್ರಚಾರ: ಕಾರವಾರದಲ್ಲಿ ಆರಂಭಿಸಿರುವ ಸಾಗರ ಮಾಲಾ ಯೋಜನೆ ಬಗ್ಗೆ ಅಪಪ್ರಚಾರ ನಡೆಸಿ ಜನರ ದಿಕ್ಕು ತಪ್ಪಿಸುವ ಹಾಗೂ ಕೆನರಾ ಸಂಸದ, ಕಾರವಾರ ಶಾಸಕಿಯ ತೇಜೋವಧೆ ಕೃತ್ಯ ಖಂಡನೀಯ. ಈ ಹಿಂದೆ ಕಾರವಾರ ಬದಲು ಮಂಗಳೂರಿಗೆ ಮಂಜೂರಾಗಿದ್ದ ಸಾಗರ ಮಾಲಾ ಯೋಜನೆಯನ್ನು ಜಿಲ್ಲೆಯಲ್ಲಿ ಆರಂಭಿಸುವಂತೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆನರಾ ಸಂಸದರ ಮೇಲೆ ಶಾಸಕ ಸೈಲ್ ಒತ್ತಡ ಹೇರಿ ಕಾರವಾರಕ್ಕೆ ಯೋಜನೆ ಮಂಜೂರು ಮಾಡಿಸಿ ಈಗ ಯೋಜನೆ ಬಗ್ಗೆ ಗೊಂದಲ ಸೃಷ್ಟಿಸಿದ್ದಾರೆ. ಈ ಯೋಜನೆಯಿಂದ ಮೀನುಗಾರಿಕೆಗೆ ತೊಂದರೆಯಾಗಲ್ಲ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದರು.

ಕಾರವಾರ ಬಂದ್ ಕರೆ ಹಿನ್ನೆಲೆಯಲ್ಲಿ ಭದ್ರತೆಗೆ ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ. ಒತ್ತಾಯಪೂರ್ವಕವಾಗಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಅವಕಾಶ ನೀಡುವುದಿಲ್ಲ. ಶಾಂತಿಯುತ ಪ್ರತಿಭಟನೆಗೆ ಅನುವು ಮಾಡಿಕೊಡಲಿದ್ದೇವೆ. | ಶಂಕರ ಮಾರಿಹಾಳ, ಡಿವೈಎಸ್​ಪಿ, ಕಾರವಾರ

ಬಂದರಿನ ಎರಡನೇ ಹಂತದ ವಿಸ್ತರಣೆ ಕಾಮಗಾರಿಯಿಂದ ಮೀನುಗಾರರಿಗೆ ಮಾತ್ರವಲ್ಲ, ಇಡೀ ಕಾರವಾರ ನಗರಕ್ಕೆ ಪರಿಣಾಮ ಉಂಟಾಗುತ್ತದೆ. ಐತಿಹಾಸಿಕ ಟ್ಯಾಗೋರ್ ಕಡಲ ತೀರ ನಾಶವಾಗುತ್ತದೆ. ಇದರಿಂದ ಬಂದ್​ಗೆ ಕರೆ ನೀಡಿದ್ದು, ಜ. 16ರಂದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ನೀಡಬೇಕು ಎಂದು ವಿವಿಧ ಸಂಘಟನೆಗಳ ಬಳಿ ಕೇಳಿಕೊಂಡಿದ್ದೇನೆ. | ಕೆ.ಟಿ. ತಾಂಡೇಲ, ಮೀನುಗಾರರ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net