ಧೋನಿ ಧರಿಸಿದ್ದ ಟೀಮ್​ ಇಂಡಿಯಾ ಜೆರ್ಸಿಯೂ ನಿವೃತ್ತಿ; ವಿಶೇಷ ಗೌರವಕ್ಕೆ ಬಿಸಿಸಿಐ ನೀಡಿದ ಕಾರಣ ಹೀಗಿದೆ...

dhoni jersy web
Published on

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ನಾಯಕ ಹಾಗೂ ಅವಳಿ ವಿಶ್ವಕಪ್​ ವಿಜೇತ ಎಂಎಸ್​ ಧೋನಿ ಅವರ 7 ನಂಬರ್​ ಜೆರ್ಸಿಯನ್ನು ನಿವೃತ್ತಿಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಬಳಿಕ ಈ ಗೌರವ ಪಡೆಯುತ್ತಿರುವ ಭಾರತದ 2ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಲಿದ್ದಾರೆ ಎಂದು ವರದಿಯಾಗಿದೆ. ಧೋನಿ ಅವರೊಬ್ಬ ದಿಗ್ಗಜ ಆಟಗಾರ. ಭಾರತ ಮತ್ತು ಜಾಗತಿಕ ಕ್ರಿಕೆಟ್​ಗೆ ಅವರ ಕೊಡುಗೆ ಅಪಾರ. ಅವರ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಬಿಸಿಸಿಐ 7 ನಂಬರ್​ ಜೆರ್ಸಿಯನ್ನು ನಿವೃತ್ತಿಗೊಳಿಸಲು ನಿರ್ಧರಿಸಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್​ ಶುಕ್ಲಾ ವಿವರಿಸಿದ್ದಾರೆ.

2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಧೋನಿ, 2019ರ ಏಕದಿನ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಕೊನೆಯದಾಗಿ ಭಾರತ ಪರ ಆಡಿದ್ದರು ಮತ್ತು 2020ರ ಆಗಸ್ಟ್​ 15ರಂದು ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು. ನಂತರದಲ್ಲಿ ಭಾರತ ತಂಡದ ಪರ ಆಡಿದ ಬೇರಾವ ಆಟಗಾರರು ಕೂಡ 7 ನಂಬರ್​ ಜೆರ್ಸಿಯನ್ನು ಬಳಸಿಲ್ಲ. ಇದೀಗ ಬಿಸಿಸಿಐ ನಿರ್ಧಾರದಿಂದಾಗಿ ಇನ್ನು ಮುಂದೆ ಭಾರತ ತಂಡದ ಪರ ಆಡುವ ಯಾವ ಹಾಲಿ ಅಥವಾ ಭಾವಿ ಆಟಗಾರರೂ ಜೆರ್ಸಿಯ ಬೆನ್ನ ಹಿಂದೆ 7 ಸಂಖ್ಯೆಯನ್ನು ಹೊಂದಿರಲು ಸಾಧ್ಯವಾಗುವುದಿಲ್ಲ.

ಬಿಸಿಸಿಐ ಈ ಮುನ್ನ ಸಚಿನ್​ ತೆಂಡುಲ್ಕರ್​ಗೆ ಮೊದಲ ಬಾರಿ ಇಂಥ ಗೌರವವನ್ನು ನೀಡಿತ್ತು. 2013ರಲ್ಲಿ ಸಚಿನ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾಗಿದ್ದರು. ನಂತರದಲ್ಲಿ 2017ರಲ್ಲಿ ಶಾರ್ದೂಲ್​ ಠಾಕೂರ್​ 10 ನಂಬರ್​ ಜೆರ್ಸಿಯನ್ನು ಬಳಸಿದ್ದರು ಮತ್ತು ಕ್ರಿಕೆಟ್​ ಪ್ರೇಮಿಗಳಿಂದ ಭಾರಿ ಟೀಕೆಗಳಿಗೂ ಗುರಿಯಾಗಿದ್ದರು. ಅದರ ಬೆನ್ನಲ್ಲೇ ಬಿಸಿಸಿಐ ನಂ. 10 ಜೆರ್ಸಿಯನ್ನು ನಿವೃತ್ತಿಗೊಳಿಸಿತ್ತು. ನಂತರದಲ್ಲಿ ಮುಂಬೈ ಇಂಡಿಯನ್ಸ್​ ತಂಡವೂ ಸಚಿನ್​ ಬಳಸಿದ್ದ 10 ಸಂಖ್ಯೆಯ ಜೆರ್ಸಿಯನ್ನು ನಿವೃತ್ತಿಗೊಳಿಸಿತ್ತು.

2007ರ ಟಿ20 ಮತ್ತು 2011ರ ಏಕದಿನ ವಿಶ್ವಕಪ್​ ವಿಜೇತ ಭಾರತ ತಂಡದ ನಾಯಕರಾಗಿರುವ ಧೋನಿ, ಸದ್ಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ಪರ ಮಾತ್ರ ಆಡುತ್ತಿದ್ದಾರೆ. 2024ರ ಆವೃತ್ತಿಯ ನಂತರ ಅವರು ಐಪಿಎಲ್​ಗೂ ವಿದಾಯ ಹೇಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net