

ಕೋಲ್ಕತ: ಟೀಮ್ ಇಂಡಿಯಾ ಮಾಜಿ ಆಟಗಾರ ಮನೋಜ್ ತಿವಾರಿ ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಐದೇ ದಿನಗಳಲ್ಲಿ ಅದನ್ನು ಹಿಂಪಡೆದಿದ್ದಾರೆ. ಪಶ್ಚಿಮ ಬಂಗಾಳದ ಕ್ರೀಡಾ ಸಚಿವರೂ ಆಗಿರುವ 37 ವರ್ಷದ ಮನೋಜ್ ತಿವಾರಿ ಕಳೆದ ಗುರುವಾರವಷ್ಟೇ ವಿದಾಯ ಹೇಳಿದ್ದರು. ಆದರೆ ಮಂಗಳವಾರ ನಿರ್ಧಾರ ಬದಲಾಯಿಸಿರುವ ಅವರು, ದೇಶೀಯ ಕ್ರಿಕೆಟ್ನಲ್ಲಿ ಇನ್ನೊಂದು ವರ್ಷ ಬಂಗಾಳ ತಂಡದ ನಾಯಕರಾಗಿ ಮುಂದುವರಿಯುವ ಹಂಬಲ ವ್ಯಕ್ತಪಡಿಸಿದ್ದಾರೆ. ಜತೆಗೆ ರಣಜಿ ಟ್ರೋಫಿ ಗೆಲುವಿಗೆ ಇನ್ನೊಮ್ಮೆ ಪ್ರಯತ್ನಿಸಲು ಬಯಸಿದ್ದಾರೆ. ಅವರ ಈ ದಿಢೀರ್ ನಿರ್ಧಾರ, ಕ್ರಿಕೆಟ್ ವಲಯ ಮಾತ್ರವಲ್ಲದೆ, ಪತ್ನಿ ಸುಶ್ಮಿತಾ ರಾಯ್ಗೂ ಅಚ್ಚರಿಯಾಗಿತ್ತು. ಬೆಳಗ್ಗೆ ಪತ್ನಿ ಜಿಮ್ಗೆ ಹೋಗಿದ್ದ ವೇಳೆ ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿ ಪ್ರಕಟಿಸಿದ್ದ ಮನೋಜ್, ಮನೆಗೆ ಮರಳಿದ ಬಳಿಕ ಪತ್ನಿಯಿಂದ ಸರಿಯಾಗಿ ಬೈಗುಳ ತಿಂದರಂತೆ!
ಬಂಗಾಳ ತಂಡ ಕಳೆದ 3 ವರ್ಷಗಳಲ್ಲಿ 2 ಬಾರಿ ರಣಜಿ ಫೈನಲ್ಗೇರಿದೆ. ಆದರೂ, ಕಳೆದ 33 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಳ್ಳಲು ಶಕ್ತವಾಗಿಲ್ಲ. ಕಳೆದ ಆವೃತ್ತಿಯ ಫೈನಲ್ನಲ್ಲಿ ಸೌರಾಷ್ಟ್ರ ಎದುರು ಪರಾಭವಗೊಂಡಿತ್ತು. 'ಇನ್ಸ್ಟಾಗ್ರಾಂ ಮೂಲಕ ದಿಢೀರ್ ನಿವೃತ್ತಿ ಪ್ರಕಟಿಸಿದ್ದು, ನನ್ನ ಪತ್ನಿಗೂ ಅಚ್ಚರಿಯಾಗಿತ್ತು. ನಿವೃತ್ತಿ ಪ್ರಕಟಿಸಿದ್ದಕ್ಕಾಗಿ ಆಕೆಯೂ ನನ್ನನ್ನು ಬೈದಳು. ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸ್ನೇಹಾಶಿಶ್ ಗಂಗೂಲಿ ಕೂಡ ನಿವೃತ್ತಿ ಹಿಂಪಡೆಯಲು ನನ್ನ ಮನವೊಲಿಸಿದರು. ಹೀಗಾಗಿ ಕೊನೇ ಒಂದು ವರ್ಷ ಆಡಲು ಬಯಸಿರುವೆ. ಮುಂದಿನ ವರ್ಷ ಖಂಡಿತವಾಗಿಯೂ ಉಲ್ಟಾ ಹೊಡೆಯಲಾರೆ. ನಾಯಕ ಮತ್ತು ಆಟಗಾರನಾಗಿ ಇದು ನನ್ನ ಕೊನೆಯ ಪ್ರಯತ್ನವಾಗಿರಲಿದೆ' ಎಂದು ಮನೋಜ್ ತಿವಾರಿ ಹೇಳಿದ್ದಾರೆ.
2004ರಿಂದ 19 ವರ್ಷಗಳ ಕ್ರಿಕೆಟ್ ಜೀವನದಲ್ಲಿ 141 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು, 9,908 ರನ್ ಗಳಿಸಿದ್ದು, 10 ಸಾವಿರ ರನ್ ಸಾಧನೆಯಿಂದ ಕೇವಲ 92 ರನ್ ದೂರವಿದ್ದಾರೆ.