

ಹೈದರಾಬಾದ್: ತಿರುಪತಿ ಲಡ್ಡು ಪ್ರಸಾದ(Tirupati Laddu Row)ದ ಕಲಬೆರಕೆ ವಿವಾದದ ಕುರಿತು ಅನುಚಿತ ಹೇಳಿಕೆ ನೀಡಿದ ನಟ ಪ್ರಕಾಶ್ ರಾಜ್ ಅವರನ್ನು ‘ಮಾ’ ಅಸೋಸಿಯೇಷನ್‌ನಿಂದ ಹೊರಹಾಕುವಂತೆ ಬಿಜೆಪಿ ಕಾರ್ಯಕರ್ತರು ಹೈದರಾಬಾದ್ನಲ್ಲಿ ಫಿಲಂ ಚೇಂಬರ್ ಎದುರು ಪ್ರತಿಭಟನೆ ನಡೆಸಿದರು.
ಪ್ರಕಾಶ್ ರಾಜ್ ಹಿಂದೂಗಳ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು. ಬಳಿಕ ಪ್ರಕಾಶ್ ರಾಜ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಈ ತಿಂಗಳ 20 ರಂದು ಲಡ್ಡು ವಿವಾದದ ಕುರಿತು ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಟ್ವಿಟರ್ 'ಎಕ್ಸ್' ನಲ್ಲಿ ಕಾಮೆಂಟ್ ಮಾಡಿದ್ದರು. “ತಿರುಪತಿ ಬಾಲಾಜಿಯ ಪವಿತ್ರ ಪ್ರಸಾದ ಕಲಬೆರಕೆ ದೇವಸ್ಥಾನದ ಸಮಿತಿಯಿಂದ ಮಾಡಿದ ದ್ರೋಹವಾಗಿದೆ. ಇದೊಂದು ದೊಡ್ಡ ಪಾಪ. ಯಾವುದೇ ವಿಳಂಬ ಮಾಡದೆ ಕೂಡಲೇ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕು. ಈ ವಿಚಾರದಲ್ಲಿ ಹಿಂದೂಗಳಿಗೆ ತೀವ್ರ ನೋವಾಗಿದೆ. ಕಠಿಣ ಕ್ರಮಗಳನ್ನು ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ. ದೇವಾಲಯಗಳ ವ್ಯವಹಾರಗಳ ಮೇಲೆ ನಿಗಾ ಇಡಲು ರಾಷ್ಟ್ರಮಟ್ಟದಲ್ಲಿ ಸನಾತನ ಧರ್ಮರಕ್ಷಣಾ ಮಂಡಳಿಯನ್ನು ಸ್ಥಾಪಿಸುವ ಸಮಯ ಬಂದಿದೆ. ಸನಾತನ ಧರ್ಮಕ್ಕೆ ಯಾವುದೇ ರೀತಿಯ ಬೆದರಿಕೆ ಬಂದರೂ ನಾವೆಲ್ಲರೂ ಸೇರಿ ಅದನ್ನು ನಿರ್ಮೂಲನೆ ಮಾಡಬೇಕು" ಎಂದಿದ್ದರು.
ಇದಕ್ಕೆ ಪವನ್ ಕಲ್ಯಾಣ್ ನೀಡಿರುವ ಉತ್ತರ ಸರಿಯಾಗಿದ್ದು, ರಾಷ್ಟ್ರಮಟ್ಟದಲ್ಲಿ 'ಸನಾತನ ಧರ್ಮರಕ್ಷಣಾ ಮಂಡಳಿ'ಯ ಅವಶ್ಯಕತೆ ಇದೆ ಎಂದು ನೆಟಿಜನ್ ಗಳು ಕಾಮೆಂಟ್ ಮಾಡುತ್ತಿದ್ದಾರೆ.
ಆದರೆ ಪವನ್ ಟ್ವೀಟ್ ಗೆ ಪ್ರಕಾಶ್ ರಾಜ್ ಕೌಂಟರ್ ಕೊಟ್ಟಿದ್ದು, ಅವರ ಟ್ವೀಟ್ ನಲ್ಲಿ.. “ಪ್ರೀತಿಯ ಪವನ್ ಕಲ್ಯಾಣ್ ಅವರೇ.. ರಾಜ್ಯದ ಉಪ ಮುಖ್ಯಮಂತ್ರಿ ನೀವು. ಲಡ್ಡು ವಿವಾದ ದಯವಿಟ್ಟು ತನಿಖೆ ನಡೆಸಿ. ಈ ವಿಚಾರದಲ್ಲಿ ಯಾರದು ತಪ್ಪು ಎಂದು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು. ಇದಲ್ಲದೆ, ನೀವು ಜನರಲ್ಲಿ ಭಯವನ್ನುಂಟು ಮಾಡುತ್ತಿದ್ದೀರಿ ಮತ್ತು ಇದನ್ನು ರಾಷ್ಟ್ರೀಯ ಸಮಸ್ಯೆಯಾಗಿ ಬಿಂಬಿಸುತ್ತಿದ್ದೀರಿ. ನಮ್ಮ ದೇಶದಲ್ಲಿ ಈಗಾಗಲೇ ಸಾಕಷ್ಟು ಧಾರ್ಮಿಕ ಉದ್ವಿಗ್ನತೆ ಇದೆ (ಕೇಂದ್ರದಲ್ಲಿರುವ ನಿಮ್ಮ ಸ್ನೇಹಿತರಿಗೆ ಧನ್ಯವಾದಗಳು)," ಎಂದು ಕಾಮೆಂಟ್ ಮಾಡಿದ್ದರು.
ಪ್ರಕಾಶ್ ರಾಜ್ ಮಾಡಿರುವ ಈ ಟ್ವೀಟ್ ಗೆ ನೆಟಿಜನ್ ಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮಿಂದಾಗಿಯೇ ಧರ್ಮ ಉದ್ವಿಗ್ನತೆ ಉಂಟಾಗುತ್ತಿದೆ ಎಂದು ಕೆಲ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.
ಇದರ ನಡುವೆ ಪ್ರಕಾಶ್ ರಾಜ್ ಮತ್ತೆ ಗುರುವಾರ ಟ್ವೀಟ್ ಮಾಡಿ, ಗೆಲ್ಲುವ ಮುನ್ನ ಒಂದು ಅವತಾರ.. ಗೆದ್ದ ನಂತರ ಇನ್ನೊಂದು ಅವತಾರ.. ಏನು ಸಮಸ್ಯೆ.. ಯಾಕೆ ಗೊಂದಲದಲ್ಲಿ ಸಿಲುಕಿದ್ದೇವೆ.. ಯಾವುದು ನಿಜ ಎಂದು ಪ್ರಕಾಶ್ ರಾಜ್ ಮತ್ತೆ ಗುರುವಾರ ಟ್ವೀಟ್ ಮಾಡಿದ್ದಾರೆ. ಇದೆಲ್ಲದರ ಹಿನ್ನೆಲೆಯಲ್ಲಿ ಈಗ ಪ್ರತಿಭಟನೆ ನಡೆದಿದೆ.