

ನವದೆಹಲಿ: ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದ ಜಗದ್ವಿಖ್ಯಾತ ಲಡ್ಡು ಪ್ರಸಾದದಲ್ಲಿ ಬಳಸಿರುವ ಪದಾರ್ಥಗಳು ಭಾರಿ ವಿವಾದ ಸೃಷ್ಟಿಸಿದೆ. ಲಡ್ಡು ತಯಾರಿಸಲು ಬಳಸಿದ ತುಪ್ಪದಲ್ಲಿ ನಿಜವಾಗಿ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿದೆಯೇ ಎಂದು ತಿಳಿಯಲು ಕೂಡಲೇ ಸಿಬಿಐ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರು ಕೇಂದ್ರ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿದ್ದಾರೆ.
ಬುಧವಾರ ನಡೆದ ಎನ್‌ಡಿಎ ಸಭೆಯಲ್ಲಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ವೈಎಸ್‌ಆರ್‌ಸಿಪಿ ಆಡಳಿತವು ತಿರುಪತಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಿದೆ ಎಂದು ಪ್ರತಿಪಾದಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದರು.
ತಿರುಪತಿ ಲಡ್ಡು ಪ್ರಸಾದ ತಯಾರಿಸಲು ಬಳಸಿದ ತುಪ್ಪದಲ್ಲಿ ದನ ಹಾಗೂ ಹಂದಿ ಮಾಂಸದ ಕೊಬ್ಬು, ಮೀನಿನ ಎಣ್ಣೆ ಅಲ್ಲದೆ ಪಾಮ್ ಆಯಿಲ್, ಸೂರ್ಯಕಾಂತಿ ಮತ್ತು ಸೋಯಾಬೀನ್ ಮುಂತಾದ ಅಂಶಗಳು ಇರುವುದು ಲ್ಯಾಬ್ ಪರೀಕ್ಷೆಯಿಂದ ಬಹಿರಂಗವಾಗಿದೆ. ಆಂಧ್ರ ಸಿಎಂ ಹೇಳಿಕೆಯಿಂದ ತಿರುಪತಿಯ ಕೋಟ್ಯಂತರ ಭಕ್ತರ ಭಾವನೆಗೆ ಘಾಸಿಯಾಗಿದೆ. ಹಾಗಾಗಿ ಆಂಧ್ರ ಸರ್ಕಾರ ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಿ ಎಂದು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷೆ ವೈಎಸ್ ಶರ್ವಿುಳಾ ಆಗ್ರಹಿಸಿದ್ದಾರೆ.
ಕೋಟ್ಯಂತರ ಹಿಂದುಗಳ ಪವಿತ್ರ ಕ್ಷೇತ್ರ ತಿರುಪತಿಯ ತಿರುಮಲ ದೇಗುಲದ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಹಾಗೂ ಪ್ರಾಣಿಗಳ ಕೊಬ್ಬು ಬಳಕೆ ಆಗುತ್ತಿತ್ತೆಂಬ ವಿಚಾರ ಬೆಳಕಿಗೆ ಬಂದಿದೆ. ಈ ಹಿಂದಿನ ಸಿಎಂ ಜಗನ್ ಮೋಹನ್ ರೆಡ್ಡಿ ಅವಧಿಯಲ್ಲಿ ನಡೆದಿತ್ತೆನ್ನಲಾದ ಈ ಪ್ರಮಾದವನ್ನು ಸತ್ಯ ಎಂದು ಗುಜರಾತ್ನ ಪ್ರಯೋಗಾಲಯ ದೃಢಪಡಿಸಿದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ.
ಕೆಎಂಎಫ್ ಸ್ಪಷ್ಟನೆ: ತಿರುಪತಿ ಲಡ್ಡು ಪ್ರಸಾದ ತಯಾರಿಗೆ ಕಳೆದ ನಾಲ್ಕು ವರ್ಷಗಳಿಂದ ಟಿಟಿಡಿ ಮಂಡಳಿ ನಮ್ಮ ಸಂಸ್ಥೆಯಿಂದ ತುಪ್ಪ ಖರೀದಿ ಮಾಡಿಲ್ಲ. ಆಂಧ್ರದಲ್ಲಿ ಇತ್ತೀಚೆಗೆ ತೆಲುಗುದೇಶಂ ಪಕ್ಷ (ಟಿಡಿಪಿ) ಅಧಿಕಾರಕ್ಕೆ ಬಂದ ನಂತರವಷ್ಟೇ ನಾವು ಮತ್ತೆ ತುಪ್ಪ ಸರಬರಾಜು ಮಾಡುತ್ತಿದ್ದೇವೆ ಎಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಸ್ಪಷ್ಟನೆ ನೀಡಿದೆ.
ತುಪ್ಪದಲ್ಲಿ ದನದ ಕೊಬ್ಬು ಬಳಕೆ ಕನ್ಫರ್ಮ್: ತಿರುಪತಿ ತಿರುಮಲ ದೇವಸ್ಥಾನಕ್ಕೆ ಪೂರೈಕೆಯಾಗುವ ತುಪ್ಪವನ್ನು ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿರುವ, ದೇಶದಲ್ಲೇ ಪ್ರಸಿದ್ಧವಾಗಿರುವ ಎನ್‌ಡಿಡಿಬಿ ಕ್ಯಾಲ್ಫ್ ಲ್ಯಾಬ್‌ನಲ್ಲಿ ಪರೀಕ್ಷಿಸಲಾಗಿದೆ. ಸೋಯಾಬೀನ್, ಕುಸುಬೆ, ಆಲಿವ್, ಗೋಧಿ ಹುರುಳಿ, ಕಾರ್ನ್, ಹತ್ತಿ ಬೀಜಗಳ ಜೊತೆಗೆ ಮೀನಿನ ಎಣ್ಣೆ, ದನದ ಟ್ಯಾಲೋ, ತಾಳೆ ಎಣ್ಣೆ ಮತ್ತು ಹಂದಿಯ ಕೊಬ್ಬನ್ನು ಸಹ ಈ ತುಪ್ಪದಲ್ಲಿ ಬಳಸಲಾಗಿದೆ ಎಂದು ವರದಿಯಿಂದ ಸ್ಪಷ್ಟವಾಗಿದೆ. ತಿರುಪತಿ ತಿರುಮಲ ದೇವಸ್ಥಾನಕ್ಕೆ ಗುತ್ತಿಗೆದಾರರು ಪೂರೈಸಿದ ತುಪ್ಪದಲ್ಲಿ ಶೇ.19ರಷ್ಟು ಮಾತ್ರ ತುಪ್ಪ ಇರುವುದು ಪತ್ತೆಯಾಗಿದೆ. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಜಗನ್ ಮೋಹನ್ ರೆಡ್ಡಿ ಸರ್ಕಾರವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ.