ತಿರುಮಲೆಯಲ್ಲಿ ಪುಷ್ಪಯಾಗ ಅದ್ಧೂರಿ : ಮಲೆಯಪ್ಪಸ್ವಾಮಿ ಉತ್ಸವ

pushpayaga
Published on

ತಿರುಪತಿ: ತಿರುಮಲೆಯ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಪುಷ್ಪಯಾಗ ನಡೆಯಲಿದ್ದು, ಹಲವು ಸೇವೆಗಳನ್ನು ರದ್ದುಪಡಿಸಲಾಗಿದೆ. ಭಕ್ತರು ಇದನ್ನು ಗಮನಿಸಬೇಕಾಗಿದೆ ಎಂದು ತಿರುಪತಿ-ತಿರುಮಲ ದೇವಾಲಯ ಮಂಡಳಿ ತಿಳಿಸಿದೆ.

ಪುಷ್ಪಯಾಗದ ನಿಮಿತ್ತ ಶನಿವಾರ ರಾತ್ರಿ ಎರಡನೇ ಅರ್ಚನೆ, ಎರಡನೇ ಗಂಟೆ ಸೇವೆ, ನೈವೇದ್ಯ ಮಾಡಲಾಯಿತು. ಭಾನುವಾರ ಬೆಳಗ್ಗೆ 9ರಿಂದ 11ರವರೆಗೆ ಸಂಪಂಗಿ ಪ್ರದಕ್ಷಿಣೆಯಲ್ಲಿ ಶ್ರೀದೇವಿ ಭೂದೇವಿ ಸಮೇತ ಶ್ರೀ ಮಲಯಪ್ಪಸ್ವಾಮಿಯ ತೇರನ್ನು ಕಲ್ಯಾಣಮಂಟಪಕ್ಕೆ ಆಹ್ವಾನಿಸಿ ಸ್ನಪನತಿರುಮಂಜನ ಮಾಡಲಾಯಿತು. ಬಳಿಕ ವಿಶೇಷ ಅಭಿಷೇಕ ಮಾಡಲಾಯಿತು.

ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ ವಿವಿಧ ರೀತಿಯ ಹೂವು, ಎಲೆಗಳಿಂದ ದೇವಾಲಯ ಮತ್ತು ಸ್ವಾಮಿಗೆ ಅಲಂಕರಿಸುವ ಮೂಲಕ ಪುಷ್ಪ ಯಾಗವನ್ನು ನಡೆಸಲಾಗುತ್ತದೆ. ಸಂಜೆ ಸಹಸ್ರದೀಪಾಲಂಕಾರ ಸೇವೆಯ ನಂತರ ಶ್ರೀಮಲಯಪ್ಪಸ್ವಾಮಿ ಉತ್ಸವವು ದೇವಸ್ಥಾನದ ನಾಲ್ಕು ರಾಜ ಬೀದಿಗಳಲ್ಲಿ ಸಾಗಿ ಬರಲಿದ್ದು, ಭಕ್ತರಿಗೆ ದರ್ಶನ ಭಾಗ್ಯ ಸಿಗಲಿದೆ. ಪುಷ್ಪಯಾಗದ ಕಾರಣದಿಂದ ಟಿಟಿಡಿ ಕಲ್ಯಾಣೋತ್ಸವ, ಊಂಜಲಸೇವೆ ಮತ್ತು ಆರ್ಜಿತ ಬ್ರಹ್ಮೋತ್ಸವವನ್ನು ರದ್ದುಗೊಳಿಸಿದೆ. ಭಕ್ತರು ಈ ವಿಷಯಗಳನ್ನು ಗಮನಿಸಲು ಸಲಹೆ ನೀಡಲಾಗಿದೆ.

ಶನಿವಾರ ಅಂಕುರಾರ್ಪಣ ನಿಮಿತ್ತ ಬೆಳಗ್ಗೆ ಶ್ರೀವೆಂಕಟರಮಣ ಸ್ವಾಮಿ ದೇವಸ್ಥಾನದ ಮೂಲವಿರಾಟ್ ಮೂರ್ತಿಯ ಎದುರು ಆಚಾರ್ಯ ಋತ್ವಿಕ್ವರಣಂ ನೆರವೇರಿತು. ಸಂಜೆ ದೇವಸ್ಥಾನದಿಂದ ವಸಂತ ಮಂಟಪಕ್ಕೆ ಶ್ರೀವೆಂಕಟರಮಣ ಸ್ವಾಮಿ ಸೇನಾಧಿಪತಿ ಶ್ರೀ ವಿಶ್ವಕ್ಸೇನುಲ ವಿಗ್ರಹವನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಅಲ್ಲಿ ಮೃತ್ಸಂಗ್ರಹಣ ಮತ್ತು ಆಸ್ಥಾನವನ್ನು ಮಾಡಿ ಶ್ರೀವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ಹಿಂತಿರುಗಿಸಲಾಯಿತು. ಬಳಿಕ ದೇವಸ್ಥಾನದ ಯಾಗಶಾಲೆಯಲ್ಲಿ ಅಂಕುರಾರ್ಪಣೆ ನಡೆಯಿತು. ಅಂಕುರಾರ್ಪಣ ನಿಮಿತ್ತ ಟಿಟಿಡಿ ಸಹಸ್ರದೀಪಾಲಂಕಾರ ಸೇವೆ ರದ್ದು ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net