ಪಡುಬಿದ್ರಿ: ಹೆಜಮಾಡಿ ಮಟ್ಟು ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಪಡುಬಿದ್ರಿ ಪೊಲೀಸರು ಶುಕ್ರವಾರ ರಾತ್ರಿ ಜಪ್ತಿ ಮಾಡಿದ್ದಾರೆ. ಮರಳು ಸಾಗಾಟದ ಬಗ್ಗೆ ಬಂದ ದೂರಿನಂತೆ ಪೊಲೀಸರು ಅಲ್ಲಿಗೆ ತೆರಳಿದಾಗ ಟಿಪ್ಪರ್‌ನಿಂದ ಮರಳು ಇಳಿಸುತ್ತಿದ್ದುದು ಪತ್ತೆಯಾಗಿದೆ. ದಾಳಿ ವೇಳೆ ಚಾಲಕ ಪರಾರಿಯಾಗಿದ್ದು, ಪರಿಶೀಲಿಸಿದಾಗ ಮರಳು ಸಾಗಾಟ ಬಗ್ಗೆ ಯಾವುದೇ ಪರವಾನದಿ ದೊರೆತಿರಲಿಲ್ಲ. ಲಾರಿ ಮಾಲೀಕರು ಹಾಗೂ ಚಾಲಕರು, ಇತರರು ಸೇರಿ ಮರಳನ್ನು ಎಲ್ಲಿಂದಲೋ ಕಳವು ಮಾಡಿ, ಲಾರಿಗಳಿಗೆ ತುಂಬಿಸಿ ತಂದಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
