

ಕ್ಯಾಲಿಫೋರ್ನಿಯಾ: ಕಾರು ಅಪಘಾತದಲ್ಲಿ ಪ್ರಖ್ಯಾತ ಗಾಲ್ಫ್ ಆಟಗಾರ ಟೈಗರ್ ವುಡ್ಸ್ (45) ಗಂಭೀರವಾಗಿ ಗಾಯಗೊಂಡಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮಂಗಳವಾರ ಘಟನೆ ನಡೆದಿರುವುದಾಗಿ ಲಾಸ್ ಏಂಜಲಿಸ್ನ ಕೌಂಟಿ ಶೆರಿಫ್ಸ್ ಇಲಾಖೆ ಮಾಹಿತಿ ನೀಡಿದೆ.
ಟೈಗರ್ ವುಡ್ ಕಾಲಿಗೆ ಅನೇಕ ಗಾಯಗಳಾಗಿರುವುದಾಗಿ ಅವರ ಏಜೆಂಟ್ ಮಾರ್ಕ್ ಸ್ಟೈನ್ಬರ್ಗ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಅಪಘಾತದ ವೇಳೆ ಕಾರಿನಲ್ಲಿ ವುಡ್ಸ್ ಒಬ್ಬರೆ ಇಬ್ಬರು. ಅವರ ಕಾಲಿಗೆ ಅನೇಕ ಗಾಯಗಳಾಗಿವೆ. ಸದ್ಯ ಕಾಲಿಗೆ ಸರ್ಜರಿ ಮಾಡಲಾಗಿದೆ ಎಂದು ಸ್ಟೈನ್ಬರ್ಗ್ ತಿಳಿಸಿದ್ದಾರೆ.
ವುಡ್ಸ್ ಅವರ ಕಾರು ಸಂಪೂರ್ಣ ಹಾನಿಯಾಗಿದೆ ಎಂದು ಲಾಸ್ ಏಂಜಲಿಸ್ ಕೌಂಟಿ ಶೆರಿಫ್ ಇಲಾಖೆ ತಿಳಿಸಿದೆ. ಮುಂದುವರಿದು 2021ರ ಫೆಬ್ರವರಿ 23ರ ಬೆಳಗ್ಗೆ 7.12ರ ಸುಮಾರಿಗೆ ವುಡ್ಸ್ ಕಾರು ಅಪಘಾತಕ್ಕೀಡಾಯಿತು. ಕಾರು ಬ್ಲ್ಯಾಕ್‌ಹಾರ್ಸ್ ರಸ್ತೆಯಲ್ಲಿರುವ ಹಾಥಾರ್ನ್ ಬೌಲೆವಾರ್ಡ್‌ನಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ.
ಲಾಸ್ ಏಂಜಲೀಸ್ ಕೌಂಟಿಯ ಅಗ್ನಿಶಾಮಕ ದಳ ಮತ್ತು ಅರೆವೈದ್ಯರು ವುಡ್ಸ್ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದರು. ಆ ಬಳಿಕ ಗಾಯಾಳು ವುಡ್ಸ್ರನ್ನು ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಕೌಂಟಿ ಶೆರಿಫ್ ಇಲಾಖೆ ಹೇಳಿದೆ.
ವುಡ್ಸ್ ಅವರು ಕಾರು ಅಪಘಾತದಲ್ಲಿ ಸಿಲುಕಿರುವುದು ಇದು ಮೂರನೇ ಬಾರಿ. 2009ರಲ್ಲಿ ಇದಕ್ಕಿಂತಲೂ ಭೀಕರವಾಗಿ ಅಪಘಾತ ನಡೆದಿತ್ತು. ಅಂದು ಎಸ್ಯುವಿ ಕಾರು ಮರಕ್ಕೆ ಅಪ್ಪಳಿಸಿತ್ತು. ಇದರ ಬೆನ್ನಲ್ಲೇ ವುಡ್ಸ್ ಅನೇಕ ಮಹಿಳೆಯರೊಂದಿಗೆ ಸಂಬಂಧವಿದೆ ಮತ್ತು ತನ್ನ ಹೆಂಡತಿಗೆ ಮೋಸ ಮಾಡುತ್ತಿದ್ದಾನೆ ಎಂಬ ಆಘಾತಕಾರಿ ವಿಷಯು ಬಹಿರಂಗವಾಗಿತ್ತು. (ಏಜೆನ್ಸೀಸ್) ಇದನ್ನೂ ಓದಿರಿ: Web Exclusive | ಸಿಆರ್ಝಡ್ ಕಾಯ್ದೆ ತಿದ್ದುಪಡಿಯಾಗಿ 2 ವರ್ಷವಾದರೂ ಸಿದ್ಧವಾಗದ ನಕ್ಷೆ; ಹೊಸ ಕಾಮಗಾರಿ ಜಾರಿಗೆ ಅಡಚಣೆ ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ