

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿಯಿದ್ದು, ಫಿನಾಲೆ ತಲುಪಲು ಸ್ಫರ್ಧಿಗಳು ಒಂದಿಲ್ಲೊಂದು ಸ್ಟ್ರಾಟರ್ಜಿ ಮಾಡುತ್ತಿದ್ದಾರೆ.
ಫಿನಾಲೆಯ ಹೊಸ್ತಿಲಲ್ಲಿ ಸ್ಫರ್ಧಿಗಳಿಗೆ ಕಠಿಣ ಟಾಸ್ಕ್ ನೀಡಿದ್ದ ಬಿಗ್ಬಾಸ್ ಅದರಲ್ಲಿ ಗೆದ್ದು, ವಾರದ ಕೊನೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಸದಸ್ಯರ ಪೈಕಿ ಒಬ್ಬರು ಫಿನಾಲೆಗೆ ನೇರವಾಗಿ ಟಿಕೆಟ್ ಪಡೆಯುತ್ತಾರೆ ಎಂದು ಘೋಷಿಸಿದ್ದಾರೆ. ಅದರಂತೆ ಈ ವಾರವೂ ವಾರದ ಉತ್ತಮ ಮತ್ತು ಕಳಪೆ ಪಟ್ಟಕ್ಕಾಗಿ ವೋಟಿಂಗ್ ಕೂಡ ನಡೆದಿದೆ.
ಟಾಸ್ಕ್ಗಳಲ್ಲಿನ ಪ್ರದರ್ಶನ ಆಧರಿಸಿ ಮನೆಯ ಬಹುತೇಕ ಸದಸ್ಯರು ತುಕಾಲಿ ಸಂತೋಷ್ ಅವರಿಗೆ ಕಳಪೆ ಪಟ್ಟ ನೀಡಿದ್ದಾರೆ. ಅದರಂತೆ ತುಕಾಲಿ ಸಂತೋಷ್ ಅವರಿಗೆ ಜೈಲುಡುಗೆಯ ಉಡುಗೊರೆ ಸಿಕ್ಕಿದೆ. ಉತ್ತಮ-ಕಳಪೆ ವೋಟಿಂಗ್ ನಂತರ ವರ್ತೂರ್ ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ನಡುವೆ ಮಾತಿನ ಚಕಮಕಿ ನಡೆದಿದೆ.
ಇಲ್ಲಿಂದ ಹೊರಗೆ ಹೋದ ಮೇಲೆ ಇತಿಹಾಸವೇ ಸೃಷ್ಟಿಯಾಗೋದು ಎಂದು ವರ್ತೂರ್ ಸಂತೋಷ್ ಡ್ರೋನ್ ಪ್ರತಾಪ್ಗೆ ತಮ್ಮ ಮಾತಿನ ಮೂಲಕವೇ ತಿವಿದಿದ್ದಾರೆ. ಆದರೆ, ಇವರಿಬ್ಬರ ನಡುವೆ ಯಾವ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ ಎಂಬುದು ಈವರೆಗೆ ರಿವೀಲ್ ಆಗಿಲ್ಲ. ವೀಕ್ಷಕರು ಈ ಬಗ್ಗೆ ಪ್ರಶ್ನಿಸಿದ್ದು, ಅಂತಿಮವಾಗಿ ಸಂಚಿಕೆ ಪ್ರಸಾರವಾದ ನಂತರ ಇದಕ್ಕೆ ಉತ್ತರ ಸಿಗಲಿದೆ.
ಫಿನಾಲೆ ಹತ್ತಿರವಾಗುತ್ತಿದ್ದಂತೆ ಮನೆಯಲ್ಲಿರುವ ಸ್ಫರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದ್ದು, ಟಾಸ್ಕ್ಗಳಲ್ಲಿ ಗೆದ್ದು ಯಾವ ಸ್ಫರ್ಧಿ ನೇರವಾಗಿ ಫೈನಲ್ಗೆ ಟಿಕೆಟ್ ಪಡೆಯಲಿದ್ದಾರೆ ಎಂದು ಕಾದು ನೋಡಬೇಕಿದೆ. ವಿನಯ್ ಗೌಡ, ಸಂಗೀತಾ ಶೃಂಗೇರಿ, ಕಾರ್ತಿಕ್, ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡ, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹಾಗೂ ನಮ್ರತಾ ಗೌಡ ಯಾರು ಫಿನಾಲೆಗೆ ಮೊದಲು ಟಿಕೆಟ್ ಪಡೆಯಲಿದ್ದಾರೆ ಎಂದು ಕಾದು ನೋಡಬೇಕಿದೆ.