

ತ್ರಿಸ್ಸೂರ್ (ಕೇರಳ): ನಮ್ಮವರೇ ನಮಗಾಗದೇ ಇರುವ ಕಾಲದಲ್ಲಿ ಕಂಡವರು ನಮ್ಮ ಸಹಾಯಕ್ಕೆ ಬರುತ್ತಾರೆಯೇ ಎಂಬ ಮಾತುಗಳನ್ನಾಡುವುದನ್ನು ಕೇಳಿದ್ದೇವೆ ಮತ್ತು ಕೆಲವೊಮ್ಮೆ ನಾವೇ ಆಡಿರುತ್ತೇವೆ. ಆದರೆ, ಆ ಮಾತಿಗೆ ತದ್ವಿರುದ್ಧವಾಗಿರುವ ತ್ರಿಸ್ಸೂರ್ ಮೂಲದ ರೈತ ಮಾನವೀಯತೆ ಏನೆಂಬುದನ್ನು ಜಗತ್ತಿಗೆ ನಿರೂಪಿಸಿದ್ದಾರೆ.
ಅಪಘಾತಕ್ಕೀಡಾದ ವಲಸೆ ಕಾರ್ಮಿಕನನ್ನು ಉಪಚರಿಸುತ್ತಿರುವ ವಿಕ್ರಮನ್ ಅವರು ಮಾನವೀಯತೆಯ ಪ್ರತೀಕವಾಗಿದ್ದಾರೆ. ಪಟಾಕಿ ಅವಘಡದಿಂದಾಗಿ ಜಾರ್ಖಂಡ್ ಮೂಲದ ಅರುಣ್ (23) ಗಂಭೀರ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಅರುಣ್ ಕಳೆದ ಎರಡು ತಿಂಗಳಿಂದ ವಿಕ್ರಮನ್ ಮನೆಯಲ್ಲಿದ್ದಾರೆ. ವಿಕ್ರಮನ್, ಅರುಣ್ಗೆ ಔಷಧಿ ಮತ್ತು ಆಹಾರವನ್ನು ನೀಡುವ ಮೂಲಕ ಕುಟುಂಬದ ಸದಸ್ಯನಂತೆ ರಕ್ಷಣೆ ಮಾಡುತ್ತಿದ್ದಾರೆ.
ವಿಕ್ರಮನ್ ಅವರು ಕೈಪರಂಬು ಮೂಲದವರು. ಹೊಸ ವರ್ಷದ ಆಚರಣೆ ವೇಳೆ ಕಟ್ಟಡ ನಿರ್ಮಾಣ ಕಾರ್ಮಿಕ ಅರುಣ್ರನ್ನು ಮೊದಲ ಬಾರಿಗೆ ಭೇಟಿಯಾಗುತ್ತಾರೆ. ಹೊಸ ವರ್ಷದ ರಾತ್ರಿ ವಿಕ್ರಮನ್ ತಮ್ಮ ಮನೆಯ ಬಳಿಕ ಜೋರಾದ ಪಟಾಕಿ ಶಬ್ದವನ್ನು ಕೇಳುತ್ತಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಕೆಲವು ಮಂದಿ ವಿಕ್ರಮನ್ ಅವರ ಮನೆಯ ಬಾಗಿಲನ್ನು ಬಡಿಯುತ್ತಾರೆ.
ಬಾಗಿಲು ತೆರೆದಾಗ ಕೆಲವು ವಲಸೆ ಕಾರ್ಮಿಕರು ನೆರವು ಕೇಳಿ ಮನೆಯ ಬಾಗಿಲಿಗೆ ಬಂದಿರುತ್ತಾರೆ. ಪಟಾಕಿ ಅವಘಡದಿಂದಾಗಿ ನಮ್ಮ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಾರೆ. ತಕ್ಷಣ ವಿಕ್ರಮನ್ ಘಟನಾ ಸ್ಥಳಕ್ಕೆ ಧಾವಿಸಿ ಬರುತ್ತಾರೆ. ಈ ವೇಳೆ ಅವಘಡದಿಂದಾಗಿ ಅರುಣ್ ಕೈ ಊದಿಕೊಂಡಿರುವುದು ಅವರ ಗಮನಕ್ಕೆ ಬರುತ್ತದೆ. ಇದಾದ ಬಳಿಕ ಅರುಣ್ರನ್ನು ತ್ರಿಸ್ಸೂರ್ನ ವೈದ್ಯಕೀಯ ಕಾಲೇಜಿಗೆ ದಾಖಲು ಮಾಡಲಾಗುತ್ತದೆ.
ಆದರೆ, ಅರುಣ್ ಸ್ನೇಹಿತರು ಮತ್ತು ಕಟ್ಟಡ ನಿರ್ಮಾಣದ ಯಜಮಾನರು ಅರುಣ್ ಜವಬ್ದಾರಿ ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಅರುಣ್ಗೆ ಪ್ಲಾಸ್ಟಿಕ್ ಸರ್ಜರಿ ಮಾಡಿ ಸುಮಾರು ಒಂದು ತಿಂಗಳು ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಬೇಕಾಗಿರುತ್ತದೆ. ಈ ವೇಳೆ ಅರುಣ್ ಬೆನ್ನಿಗೆ ನಿಂತಿದ್ದು ವಿಕ್ರಮನ್. ಆಸ್ಪತ್ರೆಯ ಖರ್ಚುವೆಚ್ಚಗಳನ್ನು ಮಾತ್ರವಲ್ಲದೆ ದಿನ ನಿತ್ಯ ಅವರನ್ನು ಉಪಚರಿಸುತ್ತಿದ್ದರು.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ವಿಕ್ರಮನ್, ಅರುಣ್ರನ್ನು ತಮ್ಮ ಮನೆಗೆ ಕರೆದೊಯ್ಯುತ್ತಾರೆ. ಪ್ರತಿವಾರದ ಚಿಕಿತ್ಸೆಗೂ ಸಹ ಅರುಣ್ರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ತಮ್ಮ ಮನೆಯ ಸದಸ್ಯನಂತೆ ಅರುಣ್ರನ್ನು ನೋಡಿಕೊಳ್ಳುತ್ತಿದ್ದು, ಗುಣಮುಖನಾದ ಬಳಿಕ ಅರುಣ್ ತನ್ನ ತವರಿಗೆ ಮರಳು ನಿರ್ಧರಿಸಿದ್ದಾರೆ.
ಇನ್ನು ಅರುಣ್ ಪಾಲಕರು ಜೀವಂತವಾಗಿಲ್ಲ. ಆತನ ಸಹೋದರರು ಮತ್ತು ಸಹೋದರಿಯರು ತವರಿನಲ್ಲಿ ನೆಲೆಸಿದ್ದಾರೆ. ಅವರ ಫೋನ್ ನಂಬರ್ ನನ್ನ ಬಳಿ ಇಲ್ಲ. ಅವರ ಫೋನ್ ನಂಬರ್ ನನ್ನ ಮೊಬೈಲ್ನಲ್ಲಿ ದಾಖಲು ಮಾಡಿದ್ದೆ. ಆದರೆ, ಪಟಾಕಿ ಅವಘಡದಿಂದ ನಾಶವಾಯಿತು. ನನ್ನು ಗುರುತಿನ ಚೀಟಿಯನ್ನು ಸಹ ಕಳೆದುಕೊಂಡಿದ್ದೇನೆಂದು ಅರುಣ್ ಹೇಳಿದ್ದಾರೆ. ಅಲ್ಲದೆ, ತನ್ನನ್ನು ರಕ್ಷಿಸಿದ ವಿಕ್ರಮನ್ಗೆ ಕೃತಜ್ಞರಾಗಿದ್ದೇನೆ. ಅವರದ್ದು ತೀರಿಸಲಾಗದ ಋಣ ಎಂತಲೂ ಅರುಣ್ ತಿಳಿಸಿದ್ದಾರೆ. ‘
ಅರುಣ್ ಸಂಪೂರ್ಣವಾಗಿ ಗುಣಮುಖರಾಗುವವರೆಗೂ ನೋಡಿಕೊಳ್ಳುತ್ತೇನೆ. ಅವರು ಗುಣಮುಖರಾದ ಬಳಿಕ ತಮ್ಮ ತವರಿಗೆ ಮರಳಬಹುದು ಎಂದರು. ವಿಕ್ರಮನ್ ಅವರ ಈ ಕಾರ್ಯ ಎಲ್ಲರಿಗೂ ಮಾದರಿಯಾಗಲಿ ಎಂಬುದೇ ಅನೇಕರ ಆಶಯವಾಗಿದೆ. ಅಲ್ಲದೆ, ಮೊದಲು ಮಾನವನಾಗು ಎನ್ನುವುದಕ್ಕೇ ವಿಕ್ರಮನ್ ನಿಜವಾದ ಅರ್ಥ ನೀಡಿದ್ದಾರೆ. (ಏಜೆನ್ಸೀಸ್) ಇದನ್ನೂ ಓದಿರಿ: ಶಿವರಾತ್ರಿ ಪ್ರಯುಕ್ತ ಕ್ರಿಕೆಟ್ ಟೂರ್ನಿ: ಗೆದ್ದವರಿಗೆ ಸಿಗುತ್ತೆ ಜೋಡಿಕುರಿ ಜತೆಗೆ ವಿಸ್ಕಿ ಬಾಟಲಿ… ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ