ಗುಡ್​ನ್ಯೂಸ್...! ವಿಮಾನಯಾನಕ್ಕೆ ಅನುಮತಿ ಪಡೆಯಲು ಇನ್ನು ಮೂರು ವಾರಗಳ ಮಾನದಂಡ ಪೂರೈಸಿದರೆ ಸಾಕು....

flight
Published on

ನವದೆಹಲಿ: ವಿಮಾನ ಪ್ರಯಾಣ ಆರಂಭಿಸುವ ದಿನಾಂಕಕ್ಕಿಂತ ಮೂರು ವಾರ ಮುಂಚಿತವಾಗಿ 'ಕೋವಿಡ್ -19 ದೃಢಪಟ್ಟಿಲ್ಲ' ಎಂದು ಸೂಚಿಸುವ ಸ್ವಯಂ ಘೋಷಣೆ ಪತ್ರ ಸಲ್ಲಿಸುವ ಪ್ರಯಾಣಿಕರಿಗೆ ಮಾತ್ರ ವಿಮಾನಯಾನಕ್ಕೆ ಅವಕಾಶ ಕಲ್ಪಿಸಬೇಕೆಂದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ವಿಮಾನಯಾನ ಸಂಸ್ಥೆಗಳಿಗೆ ತಿಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರು ಪ್ರಯಾಣ ಬೆಳೆಸುವ ದಿನಾಂಕಕ್ಕೆ ಎರಡು ತಿಂಗಳ ಮೊದಲು ಕೋವಿಡ್-19 ತಗಲಿಲ್ಲ ಎಂದು ತಿಳಿಸುವ ಸ್ವಯಂ ಘೋಷಣೆ ಪತ್ರವನ್ನು ಸಲ್ಲಿಸುವುದನ್ನು ಮೇ 21 ರಂದು ಕಡ್ಡಾಯಗೊಳಿಸಿತ್ತು. ಆದರೆ ಭಾರತದಲ್ಲಿ ಈಗ ಹೆಚ್ಚಿನ ಸಂಖ್ಯೆಯ ಜನರು ಮಾರಣಾಂತಿಕ ವೈರಸ್‌ನಿಂದ ಚೇತರಿಸಿಕೊಂಡಿರುವುದರಿಂದ, ಯಾವುದೇ ರೀತಿಯ ತೊಂದರೆಗಳು ಉಂಟಾಗುವುದನ್ನು ತಪ್ಪಿಸಲು ಸ್ವಯಂ ಘೋಷಣೆ ಪತ್ರ ಸಲ್ಲಿಕೆಯ ಮಾನದಂಡಗಳನ್ನು ನವೀಕರಿಸುವ ಅವಶ್ಯಕತೆಯಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದರು.

ಆದ್ದರಿಂದ, ವಿಮಾನಯಾನದ ದಿನಾಂಕಕ್ಕಿಂತ ಮುಂಚಿತವಾಗಿ ಪ್ರಯಾಣಿಕರು "ಕಳೆದ ಮೂರು ವಾರಗಳಲ್ಲಿ COVID-19 ದೃಢಪಟ್ಟಿಲ್ಲ" ಎಂದು ಸೂಚಿಸುವ ಸ್ವಯಂ ಘೋಷಣೆ ಪತ್ರ ನೀಡಬೇಕಾಗಿದೆ ಎಂದು ಕೆಲವು ದಿನಗಳ ಹಿಂದೆ ಅಧಿಕಾರಿಗಳು ತಿಳಿಸಿದ್ದಾರೆ.
"COVID-19 ನಿಂದ ಗುಣಮುಖರಾದ ಮತ್ತು ಮೂರು ವಾರಗಳ ಮಾನದಂಡಗಳನ್ನು ಪೂರೈಸುವ ವ್ಯಕ್ತಿಗಳು ತಾವು ಸೇರಿದ್ದ ಆಸ್ಪತ್ರೆಯಿಂದ ಕೋವಿಡ್​​​ನಿಂದ ಗುಣಮುಖರಾದ ಅಥವಾ ಕೋವಿಡ್ ಡಿಸ್ಚಾರ್ಜ್ ಪ್ರಮಾಣಪತ್ರವನ್ನು ತೋರಿಸಿದರೆ ಮಾತ್ರ ವಿಮಾನ ಯಾನಕ್ಕೆ ಅನುಮತಿಸಲಾಗುವುದು" ಎಂದು ಅವರು ತಿಳಿಸಿದ್ದಾರೆ.  

ಭಾರತದಲ್ಲಿ ಈವರೆಗೆ ಕರೊನಾವೈರಸ್ ದೃಢಪಟ್ಟ ಅಂದಾಜು 8.2 ಲಕ್ಷ ಜನರಲ್ಲಿ, ಅಂದಾಜು 5.15 ಲಕ್ಷ ಜನ ಗುಣಮುಖರಾಗಿದ್ದಾರೆ. ಇದರರ್ಥ ಚೇತರಿಕೆ ಪ್ರಮಾಣ ಶೇಕಡಾ 63 ರಷ್ಟಿದೆ. ದೇಶದಲ್ಲಿ ವೈರಸ್‌ನಿಂದ 22,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಕೋವಿಡ್​​ನಿಂದಾಗಿ ಎರಡು ತಿಂಗಳು ಸ್ಥಗಿತಗೊಂಡಿದ್ದ ದೇಶೀಯ ವಿಮಾನ ಸಂಚಾರವನ್ನು ಮೇ 25 ರಿಂದ ಪುನರಾರಂಭಿಸಲಾಗಿದ್ದು, ದೇಶದಲ್ಲಿ ನಿಗದಿತ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನ ಸಂಚಾರ ನಿಷೇಧವನ್ನು ಮುಂದುವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net