

ನವದೆಹಲಿ: ಕರೋನಾ ವೈರಾಣುವಿನ ಉಗಮ ಸ್ಥಾನ ವುಹಾನ್ ಎಂಬುದು ಇಡೀ ಜಗತ್ತಿಗೆ ತಿಳಿದಿರುವ ವಿಷಯ. ಇದನ್ನು ಚೀನಾ ನಿರಾಕರಿಸುತ್ತಿದೆಯಾದರೂ, ಈ ಕುರಿತು ಸಾಕ್ಷ್ಯ ಸಂಗ್ರಹಕ್ಕೆ ಅಮೆರಿಕ ಮುಂದಾಗಿದೆ.
ವುಹಾನ್ನ ವೈರಾಣು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಚೀನಾದ ವೈರಾಣು ತಜ್ಞರೇ ಈಗ ಅಲ್ಲಿಂದ ತಪ್ಪಿಸಿಕೊಂಡು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಹೀಗೆ ಅಮೆರಿಕ ತಲುಪಿರುವ ಕೆಲವು ತಜ್ಞರು ಜಾಗತಿಕವಾಗಿ ಕೋವಿಡ್-19 ಪಿಡುಗನ್ನು ಹರಡುವಲ್ಲಿ ಚೀನಾದ ಪಾತ್ರ ಕುರಿತು ಇಂಚಿಂಚು ಮಾಹಿತಿಯನ್ನು ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳಿಗೆ ಒದಗಿಸುತ್ತಿದ್ದಾರೆ.
ಈ ವಿಷಯವನ್ನು ತಿಳಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಮುಖ್ಯ ತಂತ್ರಗಾರಿಕಾ ಅಧಿಕಾರಿ ಸ್ಟೀವ್ ಬನ್ನಾನ್, ವುಹಾನ್ ಎಂಬುದು ವಿಶ್ವದ ವೈರಾಣುಗಳ ಚೆರ್ನೋಬಿಲ್ ಎಂದು ವರ್ಣಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾಗ ಚುನಾವಣಾ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದ ಬನ್ನಾನ್, ವೈರಾಣುವಿನ ಚೆರ್ನೋಬಿಲ್ ಎನಿಸಿಕೊಂಡಿರುವ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ತಜ್ಞರು ವುಹಾನ್ ಮತ್ತು ಹಾಂಕಾಂಗ್ನಿಂದ ಫೆಬ್ರವರಿ ಮಧ್ಯಭಾಗದಿಂದ ತಪ್ಪಿಸಿಕೊಂಡು ಅಮೆರಿಕಕ್ಕೆ ಬರಲಾರಂಭಿಸಿದ್ದಾರೆ. ಅವರೆಲ್ಲರಿಂದಲೂ ಮಾಹಿತಿ ಸಂಗ್ರಹಿಸುವ ಮೂಲಕ ಚೀನಾದ ವಿರುದ್ಧ ಅಮೆರಿಕದ ಬೇಹುಗಾರಿಕಾ ಪಡೆ ಅಲ್ಲದೆ, ಎಂ15 ಮತ್ತು ಎಂ16 ಕೂಡ ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿವೆ. ಅದನ್ನು ಆಧರಿಸಿ ಚೀನಾ ವಿರುದ್ಧ ಕಾನೂನು ಹೋರಾಟ ಸಾರಲಾಗುವುದು ಎಂದು ಹೇಳಿದ್ದಾರೆ.
ಹಾಂಕಾಂಗ್ ಮೂಲದ ವೈರಾಣು ತಜ್ಞೆ ಲಿ ಮೆಂಗ್ ಯಾನ್ ಎಂಬುವರು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕೋವಿಡ್-19 ಪಿಡುಗು ಜಾಗತಿಕವಾಗಿ ವ್ಯಾಪಿಸುವ ಮೊದಲೇ ಚೀನಾಕ್ಕೆ ಆ ಮಾರಕ ವೈರಾಣುವಿನ ಬಗ್ಗೆ ಗೊತ್ತಿತ್ತು. ಈ ಸಂಗತಿಯನ್ನು ಮುಚ್ಚಿಹಾಕಲು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಹರಸಾಹಸ ಪಟ್ಟರು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಬನ್ನಾನ್ ಅವರ ಈ ಹೇಳಿಕೆ ಬಂದಿರುವುದು ವಿಶೇಷವಾಗಿದೆ.