

Sunday Guest; ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಗುಂಜನ್ ಆರ್ಯ ಅವರ ಕರ್ನಾಟಕದ ನಂಟು ಸುರತ್ಕಲ್ನ ಎನ್ಐಟಿಕೆಯಿಂದಲೇ ಆರಂಭವಾಯಿತು. ಈ ನಂಟೇ ಅವರನ್ನು ಐಪಿಎಸ್ ಅಧಿಕಾರಿಯಾಗಿ ರಾಜ್ಯಕ್ಕೆ ಎಳೆದು ತಂದಿದೆ. ಯುಪಿಎಸ್ಎಸ್ಸಿ ಪರೀಕ್ಷೆಗಾಗಿ ನಾಲ್ಕು ವರ್ಷ ನಿರಂತರ ಪರಿಶ್ರಮ ಅವರನ್ನು ಸಾಧಕರನ್ನಾಗಿ ರೂಪಿಸಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭವಿಷ್ಯ ಕಂಡುಕೊಳ್ಳಲು ಬಯಸುವ ಆಕಾಂಕ್ಷಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರದ ಸಂಡೇ ಗೆಸ್ಟ್ ಆಗಿ ಮಾರ್ಗದರ್ಶನ ನೀಡಿದ್ದಾರೆ.
ಪರೀಕ್ಷಾ ತಯಾರಿಗೆ ಮೂರು ಹಂತಗಳು ಅತಿ ಮುಖ್ಯ. ಮೊದಲಿಗೆ ಕಲಿಕಾ ಹಂತ, ಎರಡನೆಯದ್ದು ಓದಿರುವುದನ್ನು ಸಮಗ್ರವಾಗಿ ಅರ್ಥೈಸಿಕೊಳ್ಳುವುದು. ಮೂರನೇ ಹಂತದಲ್ಲಿ 2 ಹಂತಗಳಲ್ಲಿ ನಡೆದ ಓದಿನ ಮೌಲ್ಯಮಾಪನವನ್ನು ಮಾಡಿಕೊಂಡು, ಸುಧಾರಣೆ ತಂದುಕೊಳ್ಳುವುದು. ಈ ಮೂರು ಹಂತಗಳನ್ನು ನಾವು ಪ್ರಾಮಾಣಿಕವಾಗಿ ಪಾಲಿಸಿದ್ದೇ ಆದರೆ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಕಾಣಬಹುದು ಎನ್ನುತ್ತಾರೆ ಗುಂಜನ್.
ನಿರಂತರ ಪರಿಶ್ರಮ, ಓದಿನಲ್ಲಿ ಪ್ರಾಮಾಣಿಕತೆ ಇದ್ದರೆ, ಸಾಧನೆ ಮಾಡುವುದು ಸುಲಭ ಎನ್ನುವುದಕ್ಕೆ ಗುಂಜನ್ ಆರ್ಯ ನಮ್ಮೆದುರಿನ ಸಾಕ್ಷಿ. ಯುಪಿಎಸ್ಸಿ ಪರೀಕ್ಷೆ ದೀರ್ಘ ಓದನ್ನು ಬಯಸುತ್ತದೆ. ಸಿದ್ಧತೆಗಾಗಿ ಏನು ಓದಬೇಕು? ಹೇಗೆ ಓದಬೇಕು? ಎನ್ನುವ ಲೆಕ್ಕಾಚಾರ ಹಾಗೂ ಸಮಗ್ರ ಚಿತ್ರಣ ನಮ್ಮಲ್ಲಿರಬೇಕು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಬೇಕಾದರೂ ಹೆಚ್ಚಿನ ಅಧ್ಯಯನ ಸಾಮಗ್ರಿಗಳಿರಬಾರದು. ನಿರ್ದಿಷ್ಟ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪಠ್ಯಕ್ರಮವನ್ನು ಅನುಸರಿಸಬೇಕು. ಓದಿಗಾಗಿ ಆರೋಗ್ಯಕರ ವಾತಾವರಣ ಸೃಷ್ಟಿಸಿಕೊಳ್ಳುವುದು ಅತಿಮುಖ್ಯ. ಓದಿದ ವಿಷಯಗಳನ್ನು ನೋಟ್ಸ್ ಮಾಡಿಕೊಂಡು ಪುನರ್ಮನನ ಮಾಡಬೇಕು. ಹಿಂದಿನ ವರ್ಷದ ಪತ್ರಿಕೆಗಳನ್ನು ಉತ್ತರಿಸಬೇಕು. ಆಗ ಮಾತ್ರ ಪರೀಕ್ಷೆಯ ಸ್ವರೂಪ ನಮಗೆ ದಕ್ಕುತ್ತದೆ ಎನ್ನುತ್ತಾರೆ ಗುಂಜನ್. 2014-15ರಲ್ಲಿ ಯುಪಿಎಸ್ಸಿ ಅಧ್ಯಯನ ಪ್ರಾರಂಭಿಸಿದ ಗುಂಜನ್ 2018ರಲ್ಲಿ ಸಾಧನೆಯ ಶಿಖರವನ್ನೇರಿದ್ದಾರೆ.
ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆಗಳಿಗೆ ಹಾಜರಾಗುವುದಾದರೆ ತರಬೇತಿ ಪಡೆಯುವುದು ಉತ್ತಮ ಮಾರ್ಗವಾಗಬಲ್ಲುದು. ಇದರಿಂದ ಯಾವ ರೀತಿಯಾಗಿ ತಯಾರಿ ನಡೆಸಬೇಕು? ನಮ್ಮ ಓದು ಹೇಗಿರಬೇಕು? ಆಯ್ಕೆಗಳಲ್ಲಿ ಸರಿಯುತ್ತರವನ್ನು ಗುರುತಿಸುವ ತಂತ್ರಗಾರಿಕೆ ಮೊದಲಾದವುಗಳನ್ನು ತಿಳಿದುಕೊಳ್ಳಬಹುದು ಎನ್ನುವ ಸಲಹೆ ಇವರದ್ದಾಗಿದೆ.
ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಪಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಪಡೆದ ಗುಂಜನ್ ಆರ್ಯ, ತಮ್ಮ ಇಂಜಿನಿಯರ್ ಪದವಿಯನ್ನು ಸುರತ್ಕಲ್ನ ಎನ್ಐಟಿಕೆಯಲ್ಲಿ ಪಡೆದಿದ್ದಾರೆ. ಆರಂಭದಲ್ಲೇ ಯುಪಿಎಸ್ಸಿ ಕನಸು ಚಿಗುರೊಡೆದರೂ, ಇಲ್ಲಿ ಯಶ ಕಾಣಲೇಬೇಕೆಂಬ ದೃಢ ನಿರ್ಧಾರ ಮೂಡಿದ್ದು ಮಾತ್ರ ಪದವಿ ಹಂತದಲ್ಲಿ. ಪದವಿ ಮುಗಿದ ತಕ್ಷಣ ಕೋಲ್ ಇಂಡಿಯಾ ಕಾರ್ಪೋರೇಷನ್ಲ್ಲಿ ಮೆಕಾನಿಕಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದರು. ಉದ್ಯೋಗದ ಜತೆಗೆ ಪರೀಕ್ಷಾ ತಯಾರಿಯನ್ನು ಜಾರಿಯಲ್ಲಿಟ್ಟರು. ಆದರೆ, ಪರೀಕ್ಷೆಗಾಗಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳಲು ದೆಹಲಿಯತ್ತ ಪಯಣ ಬೆಳೆಸಿದರು. ಅಲ್ಲಿ ಜತೆಯಾದ ಸ್ನೇಹ ಬಳಗ, ಮತ್ತು ಓದುವ ವಾತಾವರಣ ಅವರನ್ನು 2018ರ ಹೊತ್ತಿಗೆ ಯುಪಿಎಸ್ಸಿ ದಡ ಸೇರಿಸಿತು.
ಐಪಿಎಸ್ನಲ್ಲಿ ಕರ್ನಾಟಕ ಕೇಡರ್ ಆಯ್ಕೆ ಮಾಡಿಕೊಂಡ ಬಳಿಕ ಆರಂಭದಲ್ಲಿ ರಾಯಚೂರಿನಲ್ಲಿ ಉಪ ವರಿಷ್ಠಾಧಿಕಾರಿಯಾಗಿ, ಚಿಕ್ಕಮಗಳೂರಿನಲ್ಲಿ ಹೆಚ್ಚುಚರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಪ್ರಸ್ತುತ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದಾರೆ. ತಂದೆ ಬಾಬುಲಾಲ್ ಆರ್ಯ, ತಾಯಿ ಉಮಾಶಶಿ ಆರ್ಯ, ಅಣ್ಣ ಹರ್ಷ್ ಅವರನ್ನೊಳಗೊಂಡ ಕುಟುಂಬ ಇವರದು.
ಭೀಮಸಿ ಕೋಳೆಪ್ಪನವರ, ಬೆಂಗಳೂರು
ಪರೀಕ್ಷೆ ಎದುರಿಸುವಾಗ ಹಲವಾರು ಸಮಸ್ಯೆ ಹಾಗೂ ಏರಿಳಿತಗಳು ಎದುರಾಗುತ್ತವೆ. ಆದರೆ ಯಾವುದೇ ಸಮಯದಲ್ಲಿ, ಪರಿಸ್ಥಿತಿಗಳಿಗೆ ರಾಜಿಯಾಗಬಾರದು. ಓದಿನಲ್ಲಿ ಪ್ರಾಮಾಣಿಕ ಪ್ರಯತ್ನವಿರಬೇಕು. ಪೂರ್ವಭಾವಿ ಹಾಗೂ ಮೇನ್ಸ್ ಪರೀಕ್ಷೆ ಸ್ವರೂಪ ಪ್ರತ್ಯೇಕವಾಗಿರುತ್ತದೆ. ಅದೇ ರೀತಿ ಓದುವ ವಿಧಾನವು ಪ್ರತ್ಯೇಕವಾಗಿರಬೇಕು. ಮೇನ್ಸ್ನಲ್ಲಿ ನಿಮ್ಮಿಷ್ಟದ ಹಾಗೂ ನೀವು ಬಯಸಿದ ಕ್ಷೇತ್ರಕ್ಕೆ ಸಮೀಪವಿರುವ ವಿಷಯದ ಆಯ್ಕೆ ಆಯ್ದುಕೊಂಡರೆ ಉತ್ತಮ ಅಂಕಗಳಿಸಲು ಸಾಧ್ಯ. ಇವೆರಡೂ ಘಟ್ಟಗಳ ನಂತರ ನಮಗೆದುರಾಗುವ ಅಂತಿಮ ಹಂತವೇ ಸಂದರ್ಶನ. ಇಲ್ಲಿ ನಮ್ಮ ವ್ಯಕ್ತಿತ್ವ ಪರೀಕ್ಷೆ ಜತೆ ನಮ್ಮ ಅಭಿಪ್ರಾಯವನ್ನು ವಿಶ್ಲೇಷಿಸಲಾಗುತ್ತದೆ. ಆದ್ದರಿಂದ ಇಲ್ಲಿ ಸಂದರ್ಶಕರು ಏನೇ ಪ್ರಶ್ನೆಗಳನ್ನು ಕೇಳಿದರು, ಅವುಗಳನ್ನು ವಿಶ್ವಾಸದಿಂದಲೇ ಎದುರಿಸುವ ಆತ್ಮಸ್ಥೈರ್ಯ ನಮಲ್ಲಿರಬೇಕು. ಇಲ್ಲದಿದ್ದರೆ ಅದನ್ನು ಬೆಳೆಸಿಕೊಳ್ಳುವ ಜ್ಞಾನ ಸಂಪಾದಿಸಬೇಕು ಎನ್ನುತ್ತಾರೆ ಗುಂಜನ್.