ಕರುಳು ಹಿಂಡುವ ದುರಂತ: ಸಿಲಿಂಡರ್​ ಬೆಂಕಿಗೆ ಬಲಿಯಾದ ಹೆಣ್ಣುಮಕ್ಕಳು

cylinderfire
Published on

ಅಜಂಗಡ : ತಾಯಿ ನೀರು ತರಲು ಆಚೆ ಹೋದಾಗ ಮನೆಯಲ್ಲಿದ್ದ ಮೂವರು ಹೆಣ್ಣುಮಕ್ಕಳು ಗ್ಯಾಸ್​ ಸಿಲಿಂಡರ್​ಗೆ ಬೆಂಕಿ ಹತ್ತಿಕೊಂಡ ಕಾರಣ ದುರಂತ ಸಾವಿಗೀಡಾಗಿರುವ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ. ಬೆಂಕಿಯ ಜ್ವಾಲೆಗಳಿಗೆ ಸಿಲುಕಿದ್ದ ಈ ಸೋದರಿಯರನ್ನು ಉಳಿಸಲು ಅಕ್ಕಪಕ್ಕದವರು ಮಾಡಿದ ಪ್ರಯತ್ನ ವಿಫಲವಾಗಿದೆ.

ಅಜಂಗಡದ ಆಹ್ರೌಲಾ ಪ್ರದೇಶದ ಇಮಾಮ್​ಗಡ ಗ್ರಾಮದಲ್ಲಿ ಭಾನುವಾರ ಸಂಜೆ 11 ವರ್ಷದ ದೀಪಾಂಜಲಿ, 6 ವರ್ಷದ ಶಿವಾಂಶಿ ಮತ್ತು 4 ವರ್ಷದ ಶ್ರೇಜಲ್​ ಅಡುಗೆಮನೆಯಲ್ಲಿದ್ದಾಗ ಈ ದುರಂತ ಸಂಭವಿಸಿದೆ. ಅವರ ತಾಯಿ ನೀರು ತರುವುದಕ್ಕೆ ಹೊರಗೆ ಹೋಗಿದ್ದರು ಎನ್ನಲಾಗಿದೆ.

ಅಡುಗೆಕೋಣೆಯ ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡು ಕೂಗೆಬ್ಬಿಸಿದ ಬಾಲಕಿಯರ ಸಹಾಯಕ್ಕೆ ಬಂದ ನೆರೆಹೊರೆಯ ಜನ, ಬೆಂಕಿಯನ್ನು ನಂದಿಸಿ, ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ದೀಪಾಂಜಲಿ ಮತ್ತು ಶಿವಾಂಶಿ ಆಸ್ಪತ್ರೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದರೆ, ಶ್ರೇಜಲ್​ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಸಾವಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net