More

    ಪೆಗಾಸಸ್ ಬಿಕ್ಕಟ್ಟು, ಪ್ರಧಾನಿ ಮಧ್ಯಪ್ರವೇಶಕ್ಕೆ ವಿಪಕ್ಷ ಪಟ್ಟು

    ನವದೆಹಲಿ: ಪೆಗಾಸಸ್ ಬೇಹುಗಾರಿಕೆ ಹಗರಣ ಮತ್ತು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ಸಂಸತ್ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಸಿಗದ ಕಾರಣ ವಿರೋಧ ಪಕ್ಷಗಳು 3 ನಿಮಿಷಗಳ ವಿಡಿಯೋ ಮಾಡಿ, ಹರಿಬಿಟ್ಟಿವೆ. ಆಡಳಿತ, ವಿರೋಧ ಪಕ್ಷಗಳ ನಡುವಿನ ಬಿಕ್ಕಟ್ಟು ಹೋಗಲಾಡಿ ಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಕ್ಕೆ ಆಗ್ರಹಿಸಿವೆ. ಈ ವಿಡಿಯೋವನ್ನು ಟಿಎಂಸಿ ಸಂಸದ ಡೆರಿಕ್ ಓ ಬ್ರಿಯಾನ್ ಭಾನುವಾರ ಟ್ವೀಟ್ ಮಾಡಿದ್ದಾರೆ.

    ‘ಮಿಸ್ಟರ್ ಮೋದಿ, ನಮ್ಮ ಮಾತನ್ನು ಆಲಿಸಿ ಬನ್ನಿ’ ಎಂಬ ಒಕ್ಕಣೆಯೊಂದಿಗೆ ವಿಡಿಯೋ ಆರಂಭವಾಗು ತ್ತದೆ. ಮುಂಗಾರು ಅಧಿವೇಶನದಲ್ಲಿ ಇನ್ನೊಂದು ವಾರದ ಕಲಾಪ ಬಾಕಿ ಇದ್ದು, ಈ ಅವಧಿಯಲ್ಲಾದರೂ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸ ಲಾಗಿದೆ. ‘ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಎಷ್ಟೇ ಒತ್ತಾಯ ಮಾಡಿದರೂ ಈ ವಿಷಯಗಳ ಬಗ್ಗೆ ಸರ್ಕಾರ ಚರ್ಚೆ ನಡೆಸಲು ಸಿದ್ಧವಿಲ್ಲ. ಆದರೆ, ರೈತರ ಸಮಸ್ಯೆ ಮತ್ತು ಪೆಗಾಸಸ್ ಬೇಹುಗಾರಿಕೆಯಂತಹ ಗಂಭೀರ ವಿಷಯಗಳನ್ನು ಸದನದ ಮೂಲಕ ಜನರಿಗೆ ತಿಳಿಸುವ ಅವಶ್ಯಕತೆ ಇದೆ’ ಇದಕ್ಕಾಗಿಯೇ ಈ ವಿಡಿಯೋ ಮಾಡಲಾಗಿದೆ ಎಂದು ಡೆರಿಕ್ ಓ ಬ್ರಿಯಾನ್ ಹೇಳಿದ್ದಾರೆ.

    ‘ಕಳೆದ ಎರಡು ವಾರದಿಂದ ಸಂಸತ್​ನಲ್ಲಿ ಪೆಗಾಸಸ್ ಮತ್ತು ರೈತರ ಪ್ರತಿಭಟನೆ ಕುರಿತು ಚರ್ಚೆ ಅವಕಾಶ ಮಾಡಿಕೊಡುತ್ತಿಲ್ಲ. ವಿಮರ್ಶೆ ಇಲ್ಲದೆ ಮಸೂದೆಗಳ ಮೇಲೆ ಮಸೂದೆಗಳನ್ನು ಅಂಗೀಕರಿಸುತ್ತಿದ್ದೀರಿ. ನಿಮಗೆ ಧೈರ್ಯವಿದ್ದರೆ ಪೆಗಾಸಸ್ ವಿಷಯದ ಬಗ್ಗೆ ಚರ್ಚೆಗೆ ಬನ್ನಿ’ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ‘ಸಂಸತ್​ನಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ಉಂಟಾಗಿರುವ ಈ ಬಿಕ್ಕಟ್ಟನ್ನು ಹೋಗಲಾಡಿಸಿ ಸುಗಮವಾಗಿ ಕಲಾಪ ನಡೆಸುವ ಹೊಣೆ ಪ್ರಧಾನಿಯವರ ಮೇಲಿದೆ. ಹೀಗಾಗಿ ಅವರು ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಬೇಕು’ ಎಂದು ಆರ್​ಜೆಡಿಯ ಮನೋಜ್ ಝಾ ಒತ್ತಾಯಿಸಿದ್ದಾರೆ.

    ಕಾಂಗ್ರೆಸ್​ನ ದೀಪಿಂದರ್ ಹೂಡಾ ಮತ್ತು ಮನಿಷ್ ತಿವಾರಿ, ಸಿಪಿಐ(ಎಂ)ನ ಎಲಮಾರಂ ಕರೀಂ, ಆಮ್ ಆದ್ಮಿ ಪಕ್ಷದ ಸುಶೀಲ್ ಕುಮಾರ್ ಗುಪ್ತಾ, ಸಮಾಜವಾದಿ ಪಕ್ಷ, ಡಿಎಂಕೆ, ಟಿಆರ್​ಎಸ್​ನ ಮುಖಂಡರು ವಿಡಿಯೋದಲ್ಲಿ ಮಾತನಾಡಿದ್ದಾರೆ. ಸಂಸತ್ ಅಧಿವೇಶನ ಆರಂಭವಾದಾಗಿನಿಂದ ಪೆಗಾಸಸ್, ರೈತರ ಪ್ರತಿಭಟನೆಗೆ ಕಾರಣವಾದ ಮೂರು ಕೃಷಿ ಕಾಯ್ದೆ ಹಿಂಪಡೆಯುವಿಕೆ, ಇಂಧನ ದರ ಏರಿಕೆ, ಬೆಲೆ ಹೆಚ್ಚಳ ಕುರಿತು ಮೊದಲು ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷಗಳ ಗದ್ದಲ, ಪ್ರತಿಭಟನೆ ನಡೆಸುತ್ತಿರುವ ಕಾರಣ ಸರ್ಕಾರ ಮತ್ತು ವಿರೋಧ ಪಕ್ಷಗಳ ಮಧ್ಯೆ ಬಿಕ್ಕಟ್ಟು ಉಂಟಾಗಿದೆ. ಇದರಿಂದ ಸಂಸತ್​ನ ಉಭಯ ಸದನಗಳಲ್ಲಿ ಕಲಾಪ ಹಾಳಾಗುತ್ತಿದೆ.

    ರಾಜ್ಯಗಳಿಗೆ ಒಬಿಸಿ ಪಟ್ಟಿ ಅಧಿಕಾರ

    ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಗುರುತಿಸುವಂತಹ ಅಧಿಕಾರವನ್ನು ರಾಜ್ಯಗಳಿಗೆ ಮರಳಿ ನೀಡಲು ಸಂವಿಧಾನಕ್ಕೆ 127ನೇ ತಿದ್ದುಪಡಿ ತರುವ ಮಸೂದೆಯನ್ನು ಸರ್ಕಾರ ಮಂಡಿಸಲಿದೆ. ಕಳೆದ ವಾರ ಸಂಪುಟ ಸಭೆ ಅನುಮೋದನೆ ನೀಡಿತ್ತು.

    ಈ ವಾರ ವಿದ್ಯುಚ್ಛಕ್ತಿ ಮಸೂದೆ ಮಂಡನೆ

    ವಿರೋಧದ ಮಧ್ಯೆಯೂ ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಯನ್ನು ಈ ವಾರ ಮಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ವಿದ್ಯುತ್ ಸರಬರಾಜಿನಲ್ಲಿ ಹೆಚ್ಚು ಸ್ಪರ್ಧಾತ್ಮಕತೆ ತರಲು ವಿತರಣಾ ಜಾಲಗಳನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸುವ ಅಂಶ ಈ ಮಸೂದೆಯಲ್ಲಿದೆ. ಇದನ್ನು ಆಕ್ಷೇಪಿಸಿರುವ ಕೇರಳ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು, ಇದರ ಹಿಂದೆ ಖಾಸಗಿ ವಲಯಕ್ಕೆ ಲಾಭ ಮಾಡಿಕೊಡುವ ಹುನ್ನಾರ ಇದೆ. ವಿದ್ಯುತ್ ಜಾಲವನ್ನು ಮೇಲ್ದರ್ಜೆಗೆ ಏರಿಸಲು ಯಾವುದೇ ಹೂಡಿಕೆ ಮಾಡದ ಖಾಸಗಿ ವಲಯಕ್ಕೆ ಹೆಚ್ಚಿನ ಲಾಭ ಏಕೆ ನೀಡಬೇಕು ಎಂದು ಪ್ರಶ್ನಿಸಿವೆ. ಈ ತಿದ್ದುಪಡಿ ಮಸೂದೆ ವಿರೋಧಿಸಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

    ಉದ್ಯೋಗ ನಷ್ಟ ವಾಸ್ತವ ವರದಿ ನೀಡಿ

    ದೇಶದಲ್ಲಿ ಕೋವಿಡ್ ಸಾಂಕ್ರಾಮಿಕದ ಸನ್ನಿವೇಶದಲ್ಲಿ ಸಂಭವಿಸಿದ ಉದ್ಯೋಗ ನಷ್ಟದ ವಾಸ್ತವಾಂಶವನ್ನು ತಿಳಿಯಲು ನಂಬಲಾರ್ಹವಾದ ಸಂಸ್ಥಗಳು ನಡೆಸಿರುವ ಅಧ್ಯಯನ ವರದಿ ಮತ್ತು ಕಾರ್ವಿುಕರ ಭವಿಷ್ಯ ನಿಧಿ ಕಚೇರಿಯ (ಇಪಿಎಫ್​ಒ) ಅಂಕಿಅಂಶವನ್ನು ಪರಾಮಶಿಸಿ ವರದಿ ನೀಡುವಂತೆ ಕಾರ್ವಿುಕರ ಕುರಿತ ಸಂಸದೀಯ ಸ್ಥಾಯಿ ಸಮಿತಿ ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಸೂಚಿಸಿದೆ. 2020-21ರಲ್ಲಿ 77.08 ಲಕ್ಷ ಹೊಸ ಉದ್ಯೋಗಿಗಳು ವೇತನದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರೆಂದು ಇಪಿಎಫ್​ಒ ಹೇಳಿದೆ. 2019-20ರಲ್ಲಿ ಈ ಪ್ರಮಾಣ 77.58 ಲಕ್ಷ ಇತ್ತು. ಅಜೀಂ ಪ್ರೇಮ್ ವಿವಿ 2019ರ ಅಂತ್ಯದಲ್ಲಿ ಮತ್ತು 2020ರಲ್ಲಿ ನಡೆಸಿರುವ ಅಧ್ಯಯನದಲ್ಲಿ, ಸಂಘಟಿತ ವಲಯದಲ್ಲಿದ್ದ ಒಟ್ಟು ಉದ್ಯೋಗಿಗಳಲ್ಲಿ ಅರ್ಧದಷ್ಟು ಜನರು ಅಸಂಘಟಿತ ವಲಯಕ್ಕೆ ಹೊರಳಿದ್ದಾರೆ. ಈ ಪೈಕಿ ಶೇ. 30ರಷ್ಟು ಮಂದಿ ಸ್ವಯಂ ಉದ್ಯೋಗ, ಶೇ. 10 ಗುತ್ತಿಗೆ ಆಧಾರಿತ ನೌಕರಿ ಮತ್ತು ಶೇ. 9ರಷ್ಟು ನೌಕರರು ಅಸಂಘಟಿತ ವಲಯದ ವೇತನದಾರರಾಗಿದ್ದಾರೆ ಎಂದು ತಿಳಿಸಿದೆ. ಉದ್ಯೋಗ ನಷ್ಟದ ವಿಷಯದಲ್ಲಿ ಭಾರಿ ಅಂತರ ಇದೆ ಎಂದು ಸ್ಥಾಯಿ ಸಮಿತಿ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts