

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಸೋಮವಾರ ರಾತ್ರಿಯಿಂದ ಸುರಿದ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದ್ದು ಅಪಾಯ ಮಟ್ಟದಲ್ಲಿದೆ. ಕುಕ್ಕೆ ಕ್ಷೇತ್ರ ಸಂಪರ್ಕಿಸುವ ಮೂರು ಹೆದ್ದಾರಿಗಳಲ್ಲಿ ಸಂಪರ್ಕ ಸೇತುವೆಗಳು ಮತ್ತು ರಸ್ತೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.
ಸುಬ್ರಹ್ಮಣ್ಯ-ಪುತ್ತೂರು ಸಂಪರ್ಕ ರಸ್ತೆ ಮತ್ತು ಸೇತುವೆ ಸುಬ್ರಹ್ಮಣ್ಯದಲ್ಲಿ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಸುಬ್ರಹ್ಮಣ್ಯ-ನೆಟ್ಟಣ-ಉಪ್ಪಿನಂಗಡಿ-ಮಂಗಳೂರು ರಸ್ತೆಗೆ ಕೈಕಂಬದ ಕೋಟೆಸಾರ್ ಹೊಳೆಗೆ ಅಡ್ಡಲಾಗಿರುವ ಸೇತುವೆ ಬ್ಲಾಕ್ ಆಗಿದೆ. ಇದರಿಂದಾಗಿ ಸುಬ್ರಹ್ಮಣ್ಯ-ಉಪ್ಪಿನಂಗಡಿ-ಮಂಗಳೂರು ಮತ್ತು ಸುಬ್ರಹ್ಮಣ್ಯ-ನೆಟ್ಟಣ-ಮರ್ಧಾಳ-ಇಚ್ಲಂಪಾಡಿ-ಧರ್ಮಸ್ಥಳ ರಸ್ತೆ ಸಂಚಾರ ಸ್ಥಗಿತವಾಗಿದೆ. ಸುಬ್ರಹ್ಮಣ್ಯ-ಕೈಕಂಬ-ಗುಂಡ್ಯ-ಧರ್ಮಸ್ಥಳ ರಸ್ತೆಯ ಚೇರು ಎಂಬಲ್ಲಿ ರಸ್ತೆಗೆ ನೀರು ನುಗ್ಗಿ ಸಂಪರ್ಕ ಕಡಿತಗೊಂಡಿದೆ. ಈ ಕಾರಣದಿಂದ ಕುಕ್ಕೆ ಕ್ಷೇತ್ರಕ್ಕೆ ಸಂಪರ್ಕ ನೀಡುವ ಮೂರು ಹೆದ್ದಾರಿಗಳು ಬಂದ್ ಆದಂತಾಗಿದೆ. ಬೆಂಗಳೂರು-ಸುಬ್ರಹ್ಮಣ್ಯ ಸಂಚಾರವೂ ಸ್ಥಗಿತಗೊಂಡಿದೆ.
ಕುಕ್ಕೆ-ಮಂಜೇಶ್ವರ ಸಂಪರ್ಕ ಬಂದ್: ದರ್ಪಣ ತೀರ್ಥ ನದಿ ತುಂಬಿ ಹರಿದ ಕಾರಣ ಕುಕ್ಕೆ ಸುಬ್ರಹ್ಮಣ್ಯ-ಪುತ್ತೂರು-ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಯ ದರ್ಪಣತೀರ್ಥ ಸೇತುವೆ ಮುಳುಗಡೆಗೊಂಡಿತು. ನದಿ ನೀರು ಸುಮಾರು ಅರ್ಧ ಕಿ.ಮೀ ದೂರದ ತನಕ ಹೆದ್ದಾರಿಯನ್ನು ಆಕ್ರಮಿಸಿಕೊಂಡಿತ್ತು. ದರ್ಪಣತೀರ್ಥ ಸೇತುವೆಯಿಂದ ಸುಮಾರು 100 ಮೀ. ದೂರವಿರುವ ತಿರುಗಣೆಗುಂಡಿ ತನಕ ಹೆದ್ದಾರಿಯನ್ನು ಪ್ರವಾಹ ಆಕ್ರಮಿಸಿಕೊಂಡಿದೆ. ದರ್ಪಣ ತೀರ್ಥ ನದಿ ದಡದ ಎಲ್ಲ ಕೃಷಿ ತೋಟಗಳು ನೀರಿನಿಂದ ತುಂಬಿದೆ. ಸಮೀಪದ ಮನೆಗಳು ಜಲಾವೃತಗೊಂಡವು.
ಕುಮಾರಧಾರಾ ನದಿಯ ಪ್ರವಾಹದಿಂದಾಗಿ ದೋಣಿಮಕ್ಕಿ, ಕುಲ್ಕುಂದ ಕಾಲನಿ, ನೂಚಿಲ ಬೈಲು, ಕುದುರೆಮಜಲು, ಕುಮಾರಧಾರಾ ಮೊದಲಾದ ಕಡೆ ತೋಟಗಳಿಗೆ ನೀರು ನುಗ್ಗಿದೆ.
ಭಾಗಶಃ ದ್ವೀಪವಾದ ದೋಣಿಮಕ್ಕಿ: ದೋಣಿಮಕ್ಕಿ ಪರಿಸರ ಭಾಗಶಃ ದ್ವೀಪವಾಯಿತು. ರಸ್ತೆಯು ಸಂಪೂರ್ಣ ಜಲಾವೃತವಾಗಿದ್ದು ಮನೆಗಳಿಗೆ ನೀರು ನುಗ್ಗಿದೆ. 40ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ.