ಏನಿದು 'ಡೇಂಜರ್​ 19'? ಎರಡು ಪ್ರತ್ಯೇಕ ಅಪಘಾತಕ್ಕೂ 19 ಸಂಖ್ಯೆಗೂ ಇದೇ ಸಂಬಂಧ | Accidents

ಏನಿದು 'ಡೇಂಜರ್​ 19'? ಎರಡು ಪ್ರತ್ಯೇಕ ಅಪಘಾತಕ್ಕೂ 19 ಸಂಖ್ಯೆಗೂ ಇದೇ ಸಂಬಂಧ | Accidents
Published on

ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ 2025 ಮುಗಿದು ಹೊಸ ವರ್ಷ ಆರಂಭಗೊಳ್ಳಲಿದೆ. ಹೀಗಿರುವಾಗ, ಖುಷಿಯ ಕ್ಷಣಗಳಿಗಿಂತ ದುಃಖಕರ ಘಟನೆಗಳು (Accidents) ಸಂಭವಿಸಿರುವುದೇ ಹೆಚ್ಚು. ಅದರಲ್ಲೂ ಕಳೆದ ಒಂದು ತಿಂಗಳಲ್ಲಿ ನಡೆದ ಮೂರು ಪ್ರತ್ಯೇಕ ದುರ್ಘಟನೆಗಳು ಜನರಿಂದ ಮರೆಯಲು ಕಷ್ಟಸಾಧ್ಯವೇ ನಿಜ. ಕಾರಣ, ಈ ಅಪಘಾತಗಳು ಭೀಕರತೆಗೆ ಸಾಕ್ಷಿಯಾಗಿದ್ದು, ಅನೇಕರ ಪ್ರಾಣವನ್ನು ಕಸಿದುಕೊಂಡಿದೆ.

ಈ ದುರ್ಘಟನೆಗಳಿಂದ ಹಲವಾರು ಕುಟುಂಬಗಳು ಬೀದಿಗೆ ಬಿದ್ದಿವೆ. ತಮ್ಮವರನ್ನು ಕಳೆದುಕೊಂಡು ಕಂಗಾಲಾಗಿವೆ. ತಿಂಗಳು ತುಂಬಿದ ಶಿಶುಗಳಿಂದ ಹಿಡಿದು ವೃದ್ಧರನ್ನು ಸಾವು ಬಿಡಲಿಲ್ಲ. ಇತ್ತೀಚೆಗಷ್ಟೇ ನಡೆದ ಕರ್ನೂಲ್ ಬಸ್​ ಅಫಘಾತ, ಜೈಪುರ ಮತ್ತು ಚೆವೆಲ್ಲಾದಲ್ಲಿ ಸಂಭವಿಸಿದ ಅನಾಹುತಗಳು ಜನರಲ್ಲಿ ತೀವ್ರ ದುಃಖ ತಂದೊಡ್ಡಿದೆ. ಆದಾಗ್ಯೂ, ಈ ಮೂರು ಅಪಘಾತಗಳಲ್ಲಿ ಒಂದು ಪ್ರಮುಖ ಅಂಶ ಮಾತ್ರ ಹಲವರ ಅಚ್ಚರಿಗೆ ಕಾರಣವಾಗಿದೆ. ಈ ಮೂರು ಪ್ರತ್ಯೇಕ ಅಪಘಾತದಲ್ಲಿ 19 ಮಂದಿ ಸಾವಿಗೀಡಾಗಿರುವುದು ಡೇಂಜರ್ 19 ಎಂಬ ಪದಕ್ಕೆ ಕಾರಣವಾಗಿದೆ.

ಚೆವೆಲ್ಲಾ ಅಪಘಾತ

ಸೋಮವಾರ (ನ.03) ಬೆಳಗ್ಗೆ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಮಂಡಲದ ಮಿರ್ಜಗುಡ ಬಳಿಯ ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ. ತಪ್ಪು ಮಾರ್ಗದಲ್ಲಿ ಅತಿ ವೇಗದಲ್ಲಿ ಬಂದ ಟಿಪ್ಪರ್ ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಹಲವರು ಸ್ಥಳದಲ್ಲೇ ಮೃತಪಟ್ಟರು. ಅಪಘಾತದ ತೀವ್ರತೆಗೆ ಬಸ್​ನ ಅರ್ಧದಷ್ಟು ಭಾಗ ನಜ್ಜುಗುಜ್ಜಾಗಿದೆ.

ಕರ್ನೂಲ್ ಬಸ್​ ದುರಂತ

ಗಾಢ ನಿದ್ರೆಯಲ್ಲಿದ್ದ ಪ್ರಯಾಣಿಕರು ಕೆಲವೇ ಕ್ಷಣಗಳಲ್ಲಿ ಕಾಣಿಸಿಕೊಂಡ ಬೆಂಕಿಗೆ ಸುಟ್ಟು ಕರಕಲಾದ ಘಟನೆ ಅತ್ಯಂತ ದುಃಖಕರ ಸಂಗತಿ. ಈ ದುರಂತದಲ್ಲಿ​ ಚಾಲಕನ ಎಡವಟ್ಟಿಗೆ 19 ಮಂದಿ ಪ್ರಾಣ ಕಳೆದುಕೊಂಡರು. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಮುಂಜಾನೆ ವೇಳೆ ಬೈಕ್​ಗೆ ಗುದ್ದಿದ ಪರಿಣಾಮ, ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿತು. 46 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್​ನಲ್ಲಿ ಇಬ್ಬರು ಚಾಲಕರು ಸೇರಿ 27 ಮಂದಿ ಸಾವಿನಿಂದ ಪಾರಾದರೆ, 19 ಮಂದಿ ಜೀವಂತವಾಗಿ ಸುಟ್ಟು ಹೋದರು.

ರಾಜಸ್ಥಾನ ಡಂಪರ್​ ಟ್ರಕ್​

ರಾಜಸ್ಥಾನದಲ್ಲಿ ಮತ್ತೊಂದು ಗಂಭೀರ ಅಪಘಾತ ಸಂಭವಿಸಿದೆ. ಸೋಮವಾರ (ನ.03), ಚೆವೆಲ್ಲಾ ಬಸ್​ ದುರಂತ ನಡೆದ ಕೆಲವೇ ಗಂಟೆಗಳಲ್ಲಿ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಪ್ರಯಾಣಿಸುತ್ತಿದ್ದ ವಾಹನಗಳಿಗೆ ಡಂಪರ್ ಟ್ರಕ್​ವೊಂದು ನಿಯಂತ್ರಣ ತಪ್ಪಿ, ಡಿಕ್ಕಿ ಹೊಡೆದ ಪರಿಣಾಮ 14ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಕೆಲವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಐದು ಕಿ.ಮೀ.ವರೆಗೆ ರಭಸವಾಗಿ ವಾಹನಗಳನ್ನು ಡಿಕ್ಕಿ ಹೊಡೆದುಕೊಂಡು ಹೋದ ಟ್ರಕ್​, ಐವತ್ತಕ್ಕೂ ಹೆಚ್ಚು ವಾಹನಗಳ ಜಖಂಗೆ ಕಾರಣವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net