ಮೃತ ಉದ್ಯೋಗದಾತನ ಎಟಿಎಂ ಕಾರ್ಡ್ ಬಳಸಿ ಆಕೆ ಕದ್ದದ್ದು ಬರೊಬ್ಬರಿ 35 ಲಕ್ಷ ರೂ.

ATM 24 Jan 20
Published on

ಕೋಲ್ಕತ: ತನ್ನ ಉದ್ಯೋಗದಾತ ಸಾವಿಗೀಡಾದ ನಂತರ ಮಹಿಳೆಯೊಬ್ಬಳು ಆತನ ಎಟಿಎಂ ಕಾರ್ಡ್ ಕದ್ದು, ಎಟಿಎಂನಿಂದ 35 ಲಕ್ಷ ರೂ. ಎಗರಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಆರೋಪಿ ಮಹಿಳೆ ರೀಟಾ ರಾಯ್. ನಕಾಶಿಪರದ ನಿವಾಸಿ.

ಆಕೆಯ ಉದ್ಯೊಗದಾತ ಸತ್ಯನಾರಾಯಣ ಅಗರ್​ವಾಲ್, ಪ್ರಿನ್ಸ್ ಅನ್ವರ್​ ಶಾ ರಸ್ತೆಯ ಸಿಟಿ ಹೈ ಮನೆಯಲ್ಲಿ ವಾಸಿಸುತ್ತಿದ್ದ, ಲಾಕ್​ಡೌನ್ ಜಾರಿಯಾದ ಮೊದಲ ವಾರದಲ್ಲಿ ಸಾವಿಗೀಡಾದ.

ರಾಯ್ ತನ್ನ ಅಳಿಯ ರಂಜಿತ್ ಮಲಿಕ್ ಹಾಗೂ ಮಾವ ಸೌಮಿತ್ರ ಸರ್ಕಾರ್ ಸಹಾಯದಿಂದ ಎಟಿಎಂನಿಂದ 34,90,000 ರೂ. ಮಿತ್​​ಡ್ರಾ ಮಾಡಿದ್ದಾಳೆ.

ಆಕೆ ಕಳೆದ 7 ವರ್ಷಗಳಿಂದ ಆತನ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದಳು. ಲಾಕ್​ಡೌನ್ ಆದ ಮೊದಲ ವಾರದಲ್ಲಿ ಆ ವ್ಯಕ್ತಿ ತೀರಿಕೊಂಡ.

ಅಗರ್​​ವಾಲ್ ಸಾವಿನ ನಂತರ ನಂತರ ಆಕೆ ಎಟಿಎಂ ಕಾರ್ಡ್ ಕದ್ದು ಹಣ ಪಡೆಯಲಾರಂಭಿಸಿದಳು. ಲಾಕ್‌ಡೌನ್ ಕಾರಣ ಯಾರೂ ಬ್ಯಾಂಕ್‌ಗೆ ಹೋಗದ ಕಾರಣ, ಮೃತನ ಖಾತೆಯಿಂದ ಹಣ ವಿತ್​​ಡ್ರಾ ಆಗುತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ.

ಅಗರ್​​ವಾಲ್ ಅವರ ಮಗ ಮತ್ತೊಂದು ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ. ಅಗರ್​ವಾಲ್ ಬಳಸಿದ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ, ಬ್ಯಾಂಕ್ ಆತನ ಕುಟುಂಬ ಸದಸ್ಯರಿಗೆ ಎಸ್‌ಎಂಎಸ್ ಕಳುಹಿಸಲು ಪ್ರಾರಂಭಿಸಿತು. ಅಗರ್ವಾಲ್ ಅವರ ಮಗ ಎಟಿಎಂ ಪಿನ್ ಮರೆತುಬಿಟ್ಟಿದ್ದ.

ರಾಯ್ ಎಸ್‌ಎಂಎಸ್ ಮೂಲಕ ಪಿನ್ ಬಳಸಿ ಹಣವನ್ನು ಹಿಂಪಡೆಯಲು ಪ್ರಾರಂಭಿಸಿದ್ದಳು. ಜೂನ್ 1 ರಂದು ಅಗರ್​​ವಾಲ್ ಪುತ್ರ ಅನುರಾಗ್ ಬ್ಯಾಂಕಿಗೆ ಹೋಗಿ ಅವರ ಖಾತೆಯ ವಿವರಗಳನ್ನು ತಿಳಿದುಕೊಂಡಾಗ ಮಹಿಳೆಯ ಈ ವಂಚನೆ ಪ್ರಕರಣ ಬೆಳಕಿಗೆ ಬಂದವು.

ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಗಳನ್ನು ಗುರುತಿಸಲಾಗಿದೆ. ಎಟಿಎಂಗಳ ವಹಿವಾಟು ವಿವರಗಳು ಮತ್ತು ಹಣವನ್ನು ಪಡೆದ ಎಟಿಎಂ ಕೇಂದ್ರದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಗಮನಿಸಿದ್ದಾರೆ. ಮಾಸ್ಕ್ ಮತ್ತು ಕ್ಯಾಪ್ ಧರಿಸಿದ ಇಬ್ಬರು ವ್ಯಕ್ತಿಗಳು ಅಗರ್‌ವಾಲ್ ಖಾತೆಯಿಂದ ಹಣವನ್ನು ಹಿಂಪಡೆಯುತ್ತಿದ್ದಾರೆ ಎಂದು ದೃಶ್ಯಾವಳಿಗಳಿಂದ ತಿಳಿದುಬಂದಿದೆ.

ಜಂಟಿ ಸಿಪಿ (ಅಪರಾಧ) ಮುರುಳಿಧರ್ ಶರ್ಮಾ, "ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಥಳೀಯ ಮೂಲಗಳಿಗೆ ತೋರಿಸಲಾಗಿದೆ ಮತ್ತು ಎಟಿಎಂಗಳ ಸುತ್ತ ಸಮೀಕ್ಷೆ ನಡೆಸಲಾಗಿದೆ. ಅಂತಿಮವಾಗಿ, ಮಲ್ಲಿಕ್ ಮತ್ತು ಸರ್ಕಾರ್ ಇಬ್ಬರನ್ನೂ ಗುರುತಿಸಲಾಗಿದ್ದು ಅವರನ್ನು ಆಗಸ್ಟ್ 13 ರಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಇಬ್ಬರು ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಪ್ರಧಾನ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರು ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ 27 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net