ಬುಲೆಟ್ ಪ್ರೂಫ್ 'ನಿಸ್ಸಾನ್' ಕಾರು ಖರೀದಿಸಿದ ನಟ ಸಲ್ಮಾನ್‌ ಖಾನ್‌

SalmanKhan
Published on

ಮುಂಬೈ: ಬಾಲಿವುಡ್​ ನಟ ಸಲ್ಮಾನ್​ ಖಾನ್ ದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು.​ ಕೊಲೆ ಬೆದರಿಕೆಗಳ ನಡುವೆ, ಉನ್ನತ ಮಟ್ಟದ ಬುಲೆಟ್ ಪ್ರೂಫ್ ಎಸ್‌ಯುವಿ, ನಿಸ್ಸಾನ್ ಕಾರನ್ನು ಭದ್ರತೆಗಾಗಿ ಖರೀದಿ ಮಾಡಿದ್ದಾರೆ.

ನಟ ಕಾರಿನಲ್ಲಿ ಪ್ರಯಾಣಿಸುವ ಚಿತ್ರಗಳು ಮತ್ತು ವಿಡಿಯೋಗಳು ಆನ್‌ಲೈನ್‌ನಲ್ಲಿಯೂ ಕಾಣಿಸಿಕೊಂಡಿವೆ. ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ನಟನಿಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸುತ್ತಿದ್ದಾರೆ.

ಬುಲೆಟ್ ಪ್ರೂಫ್ 'ನಿಸ್ಸಾನ್ ಪೆಟ್ರೋಲ್' ಎಸ್‌ಯುವಿಯನ್ನು ನಟ ಸಲ್ಮಾನ್‌ ಖಾನ್‌ ಖರೀದಿಸಿದ್ದು, ಸ್ಟೈಲಿಶ್ ವೈಟ್ ಕಲರ್ ಹೊಂದಿರುವ ಈ ಕಾರಿನಲ್ಲಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಆ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಅವರ ವೈಯಕ್ತಿಕ ಭದ್ರತೆಯ ವಾಹನ ಟೊಯೊಟಾ ಫಾರ್ಚುನರ್ ಹಾಗೂ ಪೊಲೀಸ್ ಪೈಲೆಟ್ ವಾಹನ ಮಹೀಂದ್ರಾ ಬೊಲೆರೊ ನಿಯೋ ಮಧ್ಯದಲ್ಲಿ ನಿಸ್ಸಾನ್ ಪೆಟ್ರೋಲ್ ಸಾಗಿದೆ.

ನಿಸ್ಸಾನ್' ಬ್ರ್ಯಾಂಡ್ ಭಾರತದಲ್ಲೂ ಹೆಚ್ಚು ಜನಪ್ರಿಯವಾಗುತ್ತಿದೆ. ಆದರೆ, ಬಹುತೇಕರಿಗೆ ಈ ಕಂಪನಿಯ ಬಹುಬೇಡಿಕೆಯ 'ಪೆಟ್ರೋಲ್ ಎಸ್‌ಯುವಿ' ಬಗ್ಗೆ ತಿಳಿದಿಲ್ಲ. ಇದು ಬುಲೆಟ್ ಪ್ರೂಫ್ ಕಾರಾಗಿದ್ದು, ಮಧ್ಯಪ್ರಾಚ್ಯ ಹಾಗೂ ಆಗ್ನೇಯ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿದೆ. ಭಾರತದಲ್ಲಿ ಈ ಎಸ್‌ಯುವಿಯನ್ನು ಮಾರಾಟ ಮಾಡುವುದಿಲ್ಲ. ಸಲ್ಮಾನ್‌, ಇದನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖರೀದಿಸಿ, ದೇಶಕ್ಕೆ ಆಮದು ಮಾಡಿಕೊಂಡಿದ್ದಾರೆ.

ಸಲ್ಮಾನ್ ಖಾನ್‌ಗೆ ಬೆದರಿಕೆ ಇ-ಮೇಲ್‌ಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಷ್ಣೋಯ್ ಸಮುದಾಯ ಆರಾಧಿಸುವ ಕೃಷ್ಣ ಮೃಗವನ್ನು ಭೇಟಿಯಾಡಿದ್ದ ಸಲ್ಮಾನ್ ಖಾನ್ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಆತನನ್ನು ಕೊಲ್ಲುವುದಾಗಿ ಲಾರೆನ್ಸ್ ಬಿಷ್ಣೋಯ್ ಹೇಳಿಕೊಂಡಿದ್ದ. ಸಲ್ಮಾನ್ ಖಾನ್ ಕೊಲ್ಲುವುದೇ ನನ್ನ ಜೀವನದ ಮುಖ್ಯ ಗುರಿ ಎಂದು ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಹೇಳಿದ್ದಾನೆ. ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net