

Salman Khan | ಈಗಲೂ ಸಹ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಜೀವ ಬೆದರಿಕೆ ಬರುತ್ತಿದೆಯಾ ಎಂಬ ಪ್ರಶ್ನೆಗೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ.
ಮುಂಬೈನಲ್ಲಿ ಸಲ್ಮಾನ್ಖಾನ್ ಮತ್ತು ತಂಡ ಸದ್ಯದಲ್ಲೇ ಬಿಡುಗಡೆಯಾಗಬೇಕಿರುವ ಸಿಕಂದರ್ ಸಿನಿಮಾದ ಪ್ರಚಾರದಲ್ಲಿದ್ದ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಅಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಸರ್ ನಿಮಗೆ ಕಳೆದ ವರ್ಷ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನಿಂದ ಹಲವು ಜೀವ ಬೆದರಿಕೆ ಕರೆಗಳು ಬಂದಿದ್ದವು, ಈ ವರ್ಷದಲ್ಲೂ ಸಹ ಇಂತಹ ಕರೆಗಳು ಬಂದಿವೆಯೇ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕಳೆದ ವರ್ಷ ಬಾಂದ್ರಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಜೀವ ಬೆದರಿಕೆ ಹಾಗೂ ಗುಂಡಿನ ದಾಳಿಯ ಬಗ್ಗೆ ಮೌನ ಮುರಿದ ಸಲ್ಮಾನ್ ಖಾನ್, ತಮ್ಮ ರಕ್ಷಣೆಗಾಗಿ ಹೇಗೆ ಭದ್ರತೆ ವಹಿಸಿಕೊಂಡಿದ್ದಾರೆ ಎಂಬ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ನನ್ನ ಬಳಿ ಎಷ್ಟೇ ಭದ್ರತೆ ಇದ್ದರೂ ಕೆಲವೊಂದು ಸಮಯದಲ್ಲಿ ನನ್ನನ್ನು ರಕ್ಷಿಸುವುದು ಅಷ್ಟು ಸುಲಭದ ಮಾತಲ್ಲ. ನನ್ನ ಭವಿಷ್ಯ ದೇವರ ಕೈಯಲ್ಲಿದೆ ಎಂದು ಸಲ್ಮಾನ್ ಹೇಳಿದ್ದಾರೆ. ನನ್ನನ್ನು ದೇವರು ಮತ್ತು ಅಲ್ಲಾ ನೋಡುತ್ತಿದ್ದಾರೆ. ಯಾರಿಗೆ ಎಷ್ಟು ಆಯಸ್ಸು ಎಂದು ಬರೆಯಲಾಗಿದೆಯೋ ಅಷ್ಟು ಆಯಸ್ಸಲ್ಲಿ ಮಾತ್ರ ನಾವು ಬದುಕುತ್ತೇವೆ ಎಂದಿದ್ದಾರೆ. ಒಟ್ಟಿನಲ್ಲಿ ಸಲ್ಮಾನ್ ತಮಗೆ ರಕ್ಷಣೆಯ ಅಗತ್ಯ ಎಷ್ಟು ಮುಖ್ಯ ಎಂಬುವುದನ್ನು ಒಪ್ಪಿಕೊಂಡಿದ್ದಾರೆ. ಹಾಗೇ ನಿರಂತರವಾಗಿ ಭದ್ರತೆಯೊಂದಿಗೆ ಓಡಾಡುವುದರಿಂದ ತಮ್ಮ ನಿತ್ಯದ ದಿನಚರಿ ಕೆಲಸಗಳಿಗೆ ಹಾಗೂ ಕೆಲವೊಮ್ಮೆ ಜನರೊಂದಿಗೆ ತಿರುಗಾಡುವುದು ಕೂಡ ಕಷ್ಟ ಎಂದಿದ್ದಾರೆ.
ಇದಕ್ಕೂ ಮೊದಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಂದರ್ಶನವೊಂದರಲ್ಲಿ ನನ್ನನ್ನು ಮತ್ತು ನನ್ನ ಕುಟುಂಬವನ್ನು ಕೊಲ್ಲುವ ಬಗ್ಗೆ ಮಾತನಾಡಿದ್ದರು. ಆದ್ದರಿಂದ ನನ್ನ ಕುಟುಂಬ ಸದಸ್ಯರು ಒಳಗೆ ಮಲಗಿದ್ದಾಗ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಗುಂಡು ಹಾರಿಸಿದ್ದರು. ನನ್ನನ್ನು ಮತ್ತು ನನ್ನ ಕುಟುಂಬ ಸದಸ್ಯರನ್ನು ಕೊಲ್ಲಲು ಪ್ಲಾನ್ ಮಾಡಿ ದಾಳಿ ನಡೆಸಿದ್ದರು ಎಂದಿದ್ದಾರೆ.
1998 ರಲ್ಲಿ ಹಮ್ ಸಾಥ್-ಸಾಥ್ ಹೈ ಚಿತ್ರೀಕರಣದ ಸಮಯದಲ್ಲಿ, ಸಲ್ಮಾನ್ ಖಾನ್, ಸೈಫ್ ಅಲಿ ಖಾನ್ ಹಾಗೂ ಇನ್ನೂ ಪ್ರಮುಖರು ಸೇರಿ ಜೋಧ್‌ಪುರ ಬಳಿಯ ಕಾಡಿನಲ್ಲಿ ಕೃಷ್ಣಮೃಗವನ್ನು ಕೊಂದಿದ್ದರು ಎಂಬ ಆರೋಪ ಹೊರಿಸಲಾಗಿತ್ತು. ಇನ್ನೂ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೃಷ್ಣಮೃಗವನ್ನು ಪವಿತ್ರವೆಂದು ಭಾವಿಸುತ್ತಾನೆ ಎನ್ನಲಾಗಿದೆ. ಹಾಗಾಗಿ ಸಲ್ಮಾನ್ ಅದನ್ನು ಕೊಂದಿದ್ದಾರೆ ಎಂಬ ಆರೋಪಗಳು ಸದ್ದು ಮಾಡುತ್ತಿದ್ದಂತೆ ಬಿಷ್ಣೋಯ್ ಗ್ಯಾಂಗ್‌ನಿಂದ ಸಲ್ಮಾನ್ಗೆ ಕೊಲೆ ಬೆದರಿಕೆಗಳು ಬರಲು ಪ್ರಾರಂಭಿಸಿದವು. ಕಳೆದ ವರ್ಷ ಏಪ್ರಿಲ್‌ನಲ್ಲಿ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಸಲ್ಮಾನ್ ಅವರ ಬಾಂದ್ರಾ ಅಪಾರ್ಟ್‌ಮೆಂಟ್ ಮೇಲೆ ಗುಂಡು ಹಾರಿಸಿದ್ದರು. ಈ ದಾಳಿಗೆ ಲಾರೆನ್ಸ್ ಅವರ ಕಿರಿಯ ಸಹೋದರ ಅಮ್ನೋಲ್ ಬಿಷ್ಣೋಯ್ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದರು. ನಂತರ ಈ ಘಟನೆಗೆ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿತ್ತು.