ಕಟ್ಟಡ ಮಾಲೀಕನಿಗೆ ಹ್ತಾ ನೀಡುವಂತೆ ಬೆದರಿಕೆ; ಬಿಜೆಪಿ ಮುಖಂಡನ ಲಾಕ್ ಮಾಡಿ ಜೈಲಿಗೆ ಕಳುಹಿಸಿದ ಖಾಕಿ

anand
Published on

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡ ಮಾಲೀಕನಿಗೆ 15 ಲಕ್ಷ ರೂ. ಹಫ್ತಾ ನೀಡುವಂತೆ ಬೆದರಿಕೆ ಒಡ್ಡಿದ್ದ ಮಾಜಿ ರೌಡಿ, ಬಿಜೆಪಿ ಮುಖಂಡನನ್ನ ಸಂಪಂಗಿರಾಮನಗರ ಪೊಲೀಸರು ಬಂಧಿಸಿದ್ದಾರೆ.

ಸಂಪಂಗಿರಾಮನಗರದ ಅನಂದ್‌ಕುಮಾರ್ ಬಂಧಿತ. ರಾಜಸ್ತಾನ ಮೂಲದ ಚೌಧರಿ ಎಂಬಾತನಿಗೆ 15 ಲಕ್ಷ ರೂ. ಹಫ್ತಾ ನೀಡುವಂತೆ ಬೆದರಿಕೆ ಒಡ್ಡಿದ್ದ. ಈ ಬಗ್ಗೆ ಚೌಧರಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2005ರಲ್ಲಿ ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ಆನಂದ್ ವಿರುದ್ಧ ರೌಡಿಪಟ್ಟಿ ತೆರೆಲಾಗಿತ್ತು. 2006ರಲ್ಲಿ ರೌಡಿ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗಿತ್ತು. ಆನಂತರ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದ ಆನಂದ್, ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ಬಿಬಿಎಂಪಿ ಚುನಾವಣೆಯಲ್ಲೂ ಸ್ಫರ್ಧಿಸಿ ಪರಾಭವಗೊಂಡಿದ್ದ.

3 ತಿಂಗಳ ಹಿಂದೆ ಸಂಪಂಗಿರಾಮನಗರದಲ್ಲಿ ಚೌಧರಿ ಎಂಬುವರು ಕಟ್ಟಡ ನಿರ್ಮಿಸುತ್ತಿದ್ದರು. ಅಲ್ಲಿಗೆ ಭೇಟಿ ಕೊಟ್ಟ ಆನಂದ್, ಕಟ್ಟಡ ನಿರ್ಮಾಣ ಅಕ್ರಮವಾಗಿದೆ. 15 ಲಕ್ಷ ರೂ. ನೀಡದಿದ್ದರೆ ಕಟ್ಟಡವನ್ನ ಧ್ವಂಸಗೊಳಿಸುತ್ತೇವೆ ಎಂದು ಧಮಕಿ ಹಾಕಿದ್ದ. ಕಟ್ಟಡದ ಗುತ್ತಿಗೆದಾರನಿಗೂ ಅವಾಜ್ ಹಾಕಿದ್ದ.

ಮಾತುಕತೆ ನಡೆಸಲು ಚೌಧರಿಯನ್ನು ಗಾಂಧಿನಗರಕ್ಕೆ ಕರೆಯಿಸಿಕೊಂಡು 9 ಲಕ್ಷ ರೂ. ನೀಡುವಂತೆ ತಾಕೀತು ಮಾಡಿದ್ದ. ನಿರಾಕರಿಸಿದ ಚೌಧರಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಕಮೀಷನರ್ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net