ಕಾಲು ನೋವು, ಕಿಬ್ಬೊಟ್ಟೆಯ ನೋವು ನಿಯಂತ್ರಿಸಲು ಈ ಯೋಗಾಸನ ಸಹಕಾರಿ!

1156027
Published on

ಕಿಬ್ಬೊಟ್ಟೆಯ ನೋವು ಮತ್ತು ಕಾಲು ನೋವಿನ ನಿಯಂತ್ರಣಕ್ಕೆ ಸಹಕಾರಿಯಾದ ಆಸನವೆಂದರೆ, ಸುಪ್ತ ವೀರಾಸನ. ಈ ಆಸನವು ಸೊಂಟದ ಬಾಗುವಿಕೆಗಳು, ತೊಡೆಗಳು ಮತ್ತು ಪಾದಗಳನ್ನು ಮತ್ತಷ್ಟು ವಿಸ್ತರಿಸುತ್ತದೆ. ಉಸಿರಾಟದ ಸಮಸ್ಯೆಯಿಂದ ಹಿಡಿದು ಸಂಧಿವಾತದವರೆಗೆ ಹಲವಾರು ದೈಹಿಕ ಕಾಯಿಲೆಗಳನ್ನು ಸರಿಪಡಿಸಲು ಈ ಭಂಗಿ ಉಪಯುಕ್ತವಾಗಿರುತ್ತದೆ.

ಪ್ರಯೋಜನಗಳು: ಸುಪ್ತ ವೀರಾಸನ ಅಭ್ಯಾಸ ಮಾಡುವುದರಿಂದ ಕಾಲಿನ ನರಗಳ ಸೆಳೆತ ಮತ್ತು ಇತರ ದೋಷಗಳು ನಿವಾರಣೆಯಾಗುತ್ತವೆ. ಬೆನ್ನು ನೋವು ಮತ್ತು ಕಿಬ್ಬೊಟ್ಟೆಯ ನೋವು ನಿವಾರಣೆಯಾಗಲು ಈ ಆಸನ ಸಹಕಾರಿಯಾಗುತ್ತದೆ. ಬೆನ್ನಿನ ಹುರಿಯ ನರಗಳು ಚೈತನ್ಯವನ್ನು ಪಡೆಯುತ್ತವೆ. ಎದೆ, ಹೃದಯ, ಶ್ವಾಸಕೋಶದ ಭಾಗಗಳು ಹುರುಪುಗೊಳ್ಳುತ್ತದೆ. ಸೊಂಟದ ಭಾಗ ಬಲಗೊಳ್ಳುತ್ತದೆ.

ಜೀರ್ಣಕ್ರಿಯೆಯನ್ನು ಬಹಳವಾಗಿ ಸುಧಾರಿಸುತ್ತದೆ. ನಿದ್ರೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರಿಗೆ ಇದು ಸಹಾಯ ಮಾಡುತ್ತದೆ. ಮುಟ್ಟಿನ ನೋವು ನಿಯಂತ್ರಣವಾಗುತ್ತದೆ. ಉಬ್ಬಿರುವ ರಕ್ತನಾಳಗಳ ಪರಿಸ್ಥಿತಿಯನ್ನು ಗುಣಪಡಿಸಲು ಈ ಆಸನ ಸಹಕಾರಿಯಾಗುತ್ತದೆ. ಅಸ್ಥಿರಜ್ಜುಗಳು ಮತ್ತು ಮೊಣಕಾಲಿನ ಅನೇಕ ಸಣ್ಣ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.

ಅಭ್ಯಾಸ ಕ್ರಮ: ಜಮಖಾನದ ಮೇಲೆ ವಜ್ರಾಸನದ ಭಂಗಿಯಲ್ಲಿ ಕುಳಿತುಕೊಳ್ಳಬೇಕು. ಕಾಲುಗಳನ್ನು ವಿಸ್ತರಿಸಿ, ಉಸಿರನ್ನು ಬಿಡುತ್ತಾ, ನಿಧಾನವಾಗಿ ಕೈಗಳ ಸಹಾಯದಿಂದ ಬೆನ್ನು ಮತ್ತು ತಲೆಯನ್ನು ಹಿಂದಕ್ಕೆ ಬಾಗಿಸಿ ನೆಲಕ್ಕೆ ಮಲಗಬೇಕು. ಆಮೇಲೆ ಎರಡೂ ಕೈಗಳನ್ನು ತಲೆಯ ಹಿಂದಕ್ಕೆ ನೇರವಾಗಿ ಚಾಚಬೇಕು. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟದಲ್ಲಿ ನೆಲೆಸಿ, ಆಮೇಲೆ ನಿಧಾನವಾಗಿ ಎದ್ದು ಕುಳಿತುಕೊಳ್ಳಬೇಕು. ನಂತರ ಕಾಲುಗಳನ್ನು ಚಾಚಿ ಸ್ವಲ್ಪ ಹೊತ್ತು ವಿಶ್ರಮಿಸಬೇಕು.

ಈ ಆಸನದ ಅಭ್ಯಾಸ ಮಾಡುವಾಗ ದಪ್ಪವಾದ ಜಮಖಾನ ಹಾಗೂ ತಲೆದಿಂಬನ್ನು ಉಪಯೋಗಿಸಬಹುದು. ಮಂಡಿ ನೋವಿನ ಸಮಸ್ಯೆ ಅಥವಾ ತೀವ್ರ ಸೊಂಟ ನೋವು ಇದ್ದವರಿಗೆ ಈ ಆಸನ ಸೂಕ್ತವಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net