

ಮುಂಬೈ: ರಕ್ಷಾ ಬಂಧನ ಅಂದ ತಕ್ಷಣ ಹೆಣ್ಣುಮಕ್ಕಳು ಅಣ್ಣ ಅಥವಾ ತಮ್ಮನ ಕೈಗೆ ರಾಖಿ ಕಟ್ಟುವ ಚಿತ್ರಣವೇ ಮೂಡುತ್ತದೆ. ಹೀಗಿರುವಾಗ, ತಮ್ಮ ಸೋದರಿಯರಾದ ನೀತಿ ಮತ್ತು ಕ್ರಿತಿ ಜೊತೆ ಹಬ್ಬವನ್ನು ಆಚರಿಸುತ್ತಿರುವ ಡ್ಯಾನ್ಸ್ ದಿವಾಗಳಾದ ಶಕ್ತಿ ಮೋಹನ್ ಮತ್ತು ಮುಕ್ತಿ ಮೋಹನ್, "ಸೋದರರು ಮಾತ್ರ ಸೋದರಿಯರನ್ನು ರಕ್ಷಿಸುತ್ತಾರೆ ಎಂಬ ಮನೋಭಾವ ಬದಲಾಗಬೇಕು" ಎಂದಿದ್ದಾರೆ.
“ಇದು ನಮಗೆ ವಿಶೇಷವಾದ ದಿನ. ಶತಮಾನಗಳಿಂದ, ಸೋದರ ಸೋದರಿಯನ್ನು ರಕ್ಷಿಸುತ್ತಾನೆ ಎಂದು ಹೇಳಲಾಗಿದೆ. ಆದರೆ ನಮ್ಮ ಮನೆಯಲ್ಲಿ ಹೀಗಿಲ್ಲ. ನಾವು ಅಕ್ಕತಂಗಿಯರು ಒಬ್ಬರನ್ನೊಬ್ಬರು ರಕ್ಷಿಸುತ್ತೇವೆ. ನಮ್ಮ ಬಾಂಧವ್ಯವನ್ನು ಸೆಲೆಬ್ರೇಟ್ ಮಾಡಲು ಈ ಹಬ್ಬವನ್ನು ಆಚರಿಸುತ್ತೇವೆ. ಸೋದರ-ಸೋದರಿ ಬಾಂಧವ್ಯವಷ್ಟೇ ಅಲ್ಲ, ಇದು ಸೋದರರ ಅಥವಾ ಸೋದರಿಯರ ನಡುವಿನ ಬಾಂಧ್ಯವ್ಯದ ಸಂಕೇತ ಕೂಡ. ಸೋದರಿಯರು ಪರಸ್ಪರರನ್ನು ನೋಡಿಕೊಳ್ಳಬಲ್ಲರು ಮತ್ತು ತಮ್ಮ ಸೋದರರನ್ನೂ ರಕ್ಷಿಸಬಲ್ಲರು" ಎನ್ನುತ್ತಾರೆ ಶಕ್ತಿ.
"ಪ್ರತಿವರ್ಷ ರಕ್ಷಾ ಬಂಧನದ ದಿನ ಒಡಹುಟ್ಟಿದವರ ಪ್ರೀತಿ ಮತ್ತು ತ್ಯಾಗಗಳ ಬಗೆಗಿನ ಕಥೆಯನ್ನು ನಮ್ಮ ತಾಯಿ ನಮಗೆ ಹೇಳುತ್ತಾರೆ. ಈ ಕಥೆ ಕೇಳಲು ನಾನು ಉತ್ಸುಕಳಾಗಿರುತ್ತೇನೆ" ಎನ್ನುತ್ತಾರೆ, ಮುಕ್ತಿ. ತಮ್ಮ ಸೋದರಿ ತಮ್ಮ ವೃತ್ತಿಯಲ್ಲೇ ಇರುವುದು ಒಂದು ಆಶೀರ್ವಾದದಂತೆ ಎನ್ನುವ ಮುಕ್ತಿ, ತಮಗೆ ಯಾವ ಪ್ರಾಜೆಕ್ಟ್ ಮಾಡಬೇಕು ಎಂದು ಗೊಂದಲವಾದಾಗ ಪರಸ್ಪರ ಚರ್ಚೆ ಮಾಡಿ ನಿರ್ಧರಿಸುತ್ತೇವೆ ಎನ್ನುತ್ತಾರೆ.
ನೃತ್ಯದಿಂದಾಗಿ ಪರಸ್ಪರ ಬೆಸೆದುಕೊಂಡಿರುವ ಶಕ್ತಿ ಮತ್ತು ಮುಕ್ತಿಗೆ ಇನ್ನೂ ಇಬ್ಬರು ಸೋದರಿಯರಿದ್ದಾರೆ. ಅವರ ಸೋದರಿ ನೀತಿ ಗಾಯಕಿಯಾಗಿದ್ದರೆ, ಮತ್ತೊಬ್ಬ ಸೋದರಿ ಕ್ರಿತಿ ಆರ್ಟಿಸ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಾರೆ. ಹಲವು ಜನಪ್ರಿಯ ಬಾಲಿವುಡ್ ಗೀತೆಗಳಲ್ಲಿ ಮತ್ತು ಮ್ಯೂಸಿಕ್ ವಿಡಿಯೋಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿರುವ ಇವರು ಡ್ಯಾನ್ಸ್ ವಿತ್ ಮಿ ರಿಯಾಲಿಟಿ ಶೋನ ಆ್ಯಂಖರ್ ಮತ್ತು ಡ್ಯಾನ್ಸ್ ಎಕ್ಸ್ಪರ್ಟ್ಸ್ ಕೂಡ ಆಗಿದ್ದಾರೆ. ವೃತ್ತಿಯಲ್ಲಾಗಲಿ, ಜೀವನದಲ್ಲಾಗಲಿ ತಾವಿಬ್ಬರೂ ಒಬ್ಬರಿಗೊಬ್ಬರು ಬೆಂಬಲವಾಗಿರುತ್ತೇವೆ ಎನ್ನುತ್ತಾರೆ ಈ ಸೋದರಿಯರು. (ಏಜೆನ್ಸೀಸ್)