

ಬೆನ್ನು ಮೂಳೆಯ ನಮ್ಯತೆಗೆ ಮತ್ತು ಗೂನು ಬೆನ್ನು ನಿವಾರಣೆಗೆ ಉಪಯುಕ್ತವಾದ ಆಸನವೆಂದರೆ ಉಷ್ಟ್ರಾಸನ. ಉಷ್ಟ್ರ ಎಂದರೆ ಸಂಸ್ಕೃತದಲ್ಲಿ ಒಂಟೆ ಎಂದರ್ಥ. ಈ ಭಂಗಿಯು ಒಂಟೆಯನ್ನು ಹೋಲುತ್ತದೆ. ಇದು ಹೃದಯ ಚಕ್ರವನ್ನು ತೆರೆಯುತ್ತದೆ. ದೇಹದ ನಮ್ಯತೆ(flexibility) ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ಮಾನಸಿಕ ಒತ್ತಡವನ್ನು ಕುಗ್ಗಿಸುತ್ತದೆ. ಉತ್ತಮ ಸ್ವಾಸ್ಥ್ಯವನ್ನು ಉತ್ತೇಜಿಸುತ್ತದೆ.
ಅಭ್ಯಾಸ ಕ್ರಮ : ಜಮಖಾನದ ಮೇಲೆ ಮೊಣಕಾಲೂರಿ ನಿಂತುಕೊಳ್ಳಿ. ಪಾದಗಳ ಮೇಲ್ಭಾಗ ಜಮಖಾನಕ್ಕೆ ತಾಗುವಂತೆ ಹಿಂದಕ್ಕೆ ಚಾಚಿ. ಕೈಗಳನ್ನು ಸೊಂಟದ ಮೇಲಿಡಿ. ನಿಧಾನವಾಗಿ ಉಸಿರನ್ನು ಬಿಡುತ್ತಾ, ತಲೆಯನ್ನು ಹಿಂದಕ್ಕೆ ಬಗ್ಗಿಸಿ ಕೈಗಳೆರೆಡನ್ನೂ ಒಂದೊಂದಾಗಿ ಪಾದಗಳ ಮೇಲೆ ಇಡಿ. ತೊಡೆ ಮತ್ತು ಸೊಂಟದ ಭಾಗವನ್ನು ಬಿಗಿ ಮಾಡಿಕೊಂಡು ಮುಂದಕ್ಕೆ ತನ್ನಿ. ತಲೆ ಮತ್ತು ಕುತ್ತಿಗೆಯನ್ನು ಸಡಿಲಗೊಳಿಸಿ, ಆದಷ್ಟೂ ಹಿಂದಕ್ಕೆ ತನ್ನಿ. ಈಗ ಸಹಜ ಉಸಿರಾಟದಲ್ಲಿ ಅರ್ಧ ನಿಮಿಷ ಇರಿ. ನಂತರ ಕೈಗಳೆರಡನ್ನೂ ಸಡಿಲಿಸಿ ಮೊದಲಿನ ಸ್ಥಿತಿಗೆ ಬರಬೇಕು. ಆನಂತರ ತುಸು ವಿಶ್ರಾಂತಿ ಪಡೆಯಿರಿ.
ಉಪಯೋಗಗಳು : ಬೆನ್ನು ಮೂಳೆಗೆ ಉತ್ತಮ ವ್ಯಾಯಾಮ ದೊರಕಿ, ನಮ್ಯತೆ ಸುಧಾರಿಸುತ್ತದೆ. ಗೂನು ಬೆನ್ನು ನಿವಾರಣೆಗೆ ಉತ್ತಮವಾದ ಆಸನ. ಭುಜಗಳು, ಬೆನ್ನಿನ ಸ್ನಾಯುಗಳು, ತೊಡೆಗಳು ಮತ್ತು ತೋಳುಗಳನ್ನು ಬಲಪಡಿಸುತ್ತದೆ. ಜೀರ್ಣಕ್ರಿಯೆ ಸುಧಾರಣೆ, ಕಣ್ಣಿನ ಆರೋಗ್ಯ ಸುಧಾರಣೆ, ಮುಟ್ಟಿನ ಅಸ್ವಸ್ಥತೆಯ ನಿವಾರಣೆ - ಇವು ಇತರ ಉಪಯೋಗಗಳು. ಶರೀರದೆಲ್ಲೆಡೆ ರಕ್ತ ಪರಿಚಲನೆ ಸಮರ್ಪಕವಾಗುವುದು. ಶ್ವಾಸಕೋಶದ ಶಕ್ತಿ ಹೆಚ್ಚುತ್ತದೆ. ಆಸ್ತಮಾ ನಿಯಂತ್ರಣದಲ್ಲಿ ಸಹಕಾರಿ.
ಬೆನ್ನು, ಕುತ್ತಿಗೆ ನೋವು ಹಾಗೂ ಕಡಿಮೆ ಅಥವಾ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ಈ ಆಸನ ಅಭ್ಯಾಸ ಮಾಡುವುದು ಬೇಡ. ನಿದ್ರಾಹೀನತೆ ಅಥವಾ ಮೈಗ್ರೇನ್‍ನಿಂದ ಬಳಲುತ್ತಿರುವವರು ಕೂಡ ಉಷ್ಟ್ರಾಸನವನ್ನು ಮಾಡಬಾರದು.