

ಹದಿಹರೆಯದವರ ಶಾರೀರಿಕ ಬೆಳವಣಿಗೆಗೆ ಪೂರಕವಾದ ಮತ್ತು ಬೆನ್ನು-ಸೊಂಟ ನೋವು ನಿವಾರಣೆಗೆ ಹೇಳಿ ಮಾಡಿಸಿದ ಆಸನವೆಂದರೆ ಭುಜಂಗಾಸನ ಅಥವಾ ಸರ್ಪಾಸನ. ಭುಜಂಗ ಎಂದರೆ ಹಾವು ಎಂದರ್ಥ. ಹೊಟ್ಟೆಯ ಆಧಾರದ ಮೇಲೆ ಅಭ್ಯಾಸ ಮಾಡುವ ಈ ಆಸನವು, ಹೆಡೆ ಎತ್ತಿದ ಹಾವಿನ ರೀತಿ ಕಾಣುವ ಭಂಗಿಯಾಗಿದೆ! ಇದಕ್ಕೆ ಸರ್ಪೆಂಟ್ ಪೋಸ್ಚರ್, ಕೋಬ್ರಾ ಪೋಸ್ಚರ್ ಎಂಬ ಹೆಸರುಗಳೂ ಇವೆ.
ಮಾಡುವ ವಿಧಾನ : ಮೊದಲು ಜಮಖಾನದ ಮೇಲೆ ಹೊಟ್ಟೆಯ ಮೇಲೆ, ಮಕರಾಸನದ ಭಂಗಿಯಲ್ಲಿ ವಿರಮಿಸಬೇಕು. ಕಾಲುಗಳನ್ನು ಜೋಡಿಸಿ, ಕೈ ನೇರ ಮಾಡಿ, ಭುಜದ ಕೆಳಗೆ ಎರಡೂ ಕೈಗಳನ್ನು ಇಡುವುದು. ಹಣೆ ನೆಲಕ್ಕೆ ತಾಗಿಸುವುದು. ಆಮೇಲೆ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಹಾವಿನ ಹೆಡೆಯಂತೆ ಶಿರಸ್ಸನ್ನು ಮೇಲಕ್ಕೆತ್ತುವುದು. ಸಹಜ ಉಸಿರಾಟ ನಡೆಸಬೇಕು. ನಂತರ ನಿಧಾನವಾಗಿ ವಾಪಸ್ ಮಕರಾಸನಕ್ಕೆ ಬಂದು ವಿಶ್ರಾಂತಿ ಮಾಡಬೇಕು.
ಪ್ರಯೋಜನಗಳು : ಎದೆ ವಿಶಾಲವಾಗುತ್ತದೆ; ಹದಿಹರೆಯದವರ ಬೆಳವಣಿಗೆಗೆ ಪೂರಕ. ಬೆನ್ನು ನೋವು ಮತ್ತು ಬೆನ್ನಿನ ಸ್ನಾಯು ದೋಷಗಳು ಪರಿಹಾರವಾಗುತ್ತವೆ. ಥೈರಾಯ್ಡ್ ಗ್ರಂಥಿಯ ಆರೋಗ್ಯವರ್ಧನೆಯಾಗುತ್ತದೆ ಮತ್ತು ಅಡ್ರಿನಲ್ ಗ್ರಂಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಆಸ್ತಮಾ ನಿವಾರಣೆ, ಮಲಬದ್ಧತೆ ನಿವಾರಣೆ ಮುಂತಾದ ಪ್ರಯೋಜನಗಳುಂಟು. ಬೆನ್ನನ್ನು ಕಮಾನಿನಂತೆ ಬಾಗಿಸುವ ಈ ಆಸನದ ಅಭ್ಯಾಸದಿಂದ, ಮಣಿಪುರ ಚಕ್ರ, ಸ್ವಾಧಿಷ್ಠಾನ ಚಕ್ರ, ಅನಾಹತ ಚಕ್ರ ಮತ್ತು ವಿಶುದ್ಧಿ ಚಕ್ರಗಳು ಶುದ್ಧಗೊಳ್ಳುತ್ತವೆ.
ಒಮ್ಮೆ ಅಭ್ಯಾಸವಾದ ಮೇಲೆ, ಎರಡು ಮೂರು ಬಾರಿ ಮಾಡಬಹುದು. ಆದರೆ, ಹೃದಯ ಸಂಬಂಧಿ ಖಾಯಿಲೆ ಇರುವವರು, ಹೊಟ್ಟೆಯ ಶಸ್ತ್ರಚಿಕಿತ್ಸೆ ಆಗಿರುವವರು, ಹೆಚ್ಚು ಕತ್ತು ನೋವು ಇರುವವರು ಈ ಆಸನ ಮಾಡಬಾರದು.