

Donations: ಹೊಸ ವರ್ಷದ ಮೊದಲ ತಿಂಗಳಲ್ಲೇ ಈ ದೇವಾಲಯಕ್ಕೆ ಭಕ್ತಾಧಿಗಳಿಂದ ಚಿನ್ನಾಭರಣಗಳ ಕಾಣಿಕೆ, ದೇಣಿಗೆ ಸೇರಿದಂತೆ ಹಲವಾರು ವಸ್ತುಗಳು ಹರಿದುಬಂದಿದ್ದು, ಕಂತು ಕಂತಿನ ನೋಟುಗಳನ್ನು ಎಣಿಸಲು ದೇವಾಲಯದ ಆಡಳಿತ ಮಂಡಳಿಯೇ ಸುಸ್ತಾಗಿ ಹೋಗಿದೆ. ಐದು ದಿನಗಳಿಂದ ನೋಟುಗಳನ್ನು ಎಣಿಸಿದ ಮಂಡಳಿಗೆ ಕಡೆಗೂ ಸಿಕ್ಕಿದ ಒಟ್ಟು ಹಣವೆಷ್ಟು ಎಂಬ ಮಾಹಿತಿ ತಿಳಿದ್ರೆ ಖಂಡಿತ ನಿಮ್ಮ ಹುಬ್ಬೇರಲಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಜಸ್ಥಾನದ ಚಿತ್ತೋರಗಢದಲ್ಲಿ ನೂತನವಾಗಿ ತೆರೆಯಲಾದ ಶ್ರೀ ಸನ್ವಾಲಿಯಾ ಸೇಠ್ ದೇವಾಲಯದ ಹುಂಡಿ ಈಗ ಪೂರ ತುಂಬಿಹೋಗಿದೆ. ಜನವರಿ 28ರಂದು, ದೇಗುಲದ ಅಧಿಕಾರಿಗಳು, ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಹುಂಡಿಯನ್ನು ತೆರೆದು ಎಣಿಕೆ ಮಾಡಲು ಪ್ರಾರಂಭಿಸಿದರು. ಮೊದಲ ಕಂತಿನಲ್ಲಿ, 8.08 ಕೋಟಿ ರೂ.ಗಳ ಲೆಕ್ಕ ಸಿಕ್ಕರೆ, ಮೌನಿ ಅಮಾವಾಸ್ಯೆಯ ದಿನವಾದ ಜನವರಿ 29ರಂದು ಎಣಿಕೆಯನ್ನು ನಿಲ್ಲಿಸಲಾಯಿತು. ತದನಂತರ ಜನವರಿ 30ರಂದು ಎರಡನೇ ಕಂತು ಎಣಿಕೆ ಮಾಡಿದ ಮಂಡಳಿಗೆ 4.54 ಕೋಟಿ ರೂ. ಹರಿದುಬಂದಿರುವುದು ಸ್ಪಷ್ಟವಾಗಿದೆ. ನಂತರ, ಜನವರಿ 31ರಂದು ಮೂರನೇ ಕಂತಿನಲ್ಲಿ, 3.70 ಕೋಟಿ ರೂ. ಎಣಿಕೆಯಾಗಿದೆ. ಇನ್ನು ನಾಲ್ಕನೇ ಕಂತಿನ ಅಂತ್ಯದಲ್ಲಿ ಒಟ್ಟು ದೇಣಿಗೆಗಳ ಮೊತ್ತ 16.32 ಕೋಟಿ ರೂ. ತಲುಪಿದೆ.
ಕಡೆಯ ಐದನೇ ಕಂತಿನಲ್ಲಿ ಬರೋಬ್ಬರಿ ಐದು ಕೋಟಿ ಹಣ ಹರಿದುಬಂದಿದೆ. ಕಚೇರಿ ಮತ್ತು ಆನ್‌ಲೈನ್ ಮೂಲಕ ಬಂದ ಉಡುಗೊರೆಗಳನ್ನು ಪರಿಗಣಿಸಿ, ಅದರಲ್ಲಿನ ನೋಟುಗಳನ್ನು ಎಣಿಸಿದಾಗ, 5.92 ಕೋಟಿ ರೂ. ಇರುವುದು ಸ್ಪಷ್ಟವಾಗಿದೆ. ಇದರೊಂದಿಗೆ ಭಕ್ತಾಧಿಗಳಿಂದ ಹರಿದುಬಂದ ಒಟ್ಟು ಹಣವು 22.92 ಕೋಟಿ ರೂ. ಎಂದು ಆಡಳಿತ ಮಂಡಳಿ ಮಾಹಿತಿ ಹಂಚಿಕೊಂಡಿದೆ. ಇದು ತಮ್ಮ ನಿರೀಕ್ಷೆಗಿಂತ ಹೆಚ್ಚಿನದ್ದಾಗಿದೆ ಎಂದು ಹೇಳಿದೆ.
"ಕೇವಲ ಹಣ ಮಾತ್ರವಲ್ಲ. ಭಕ್ತರು ಚಿನ್ನ, ಬೆಳ್ಳಿ ಸೇರಿದಂತೆ ಇನ್ನಿತರ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಕಾಣಿಕೆಯಾಗಿ ಅರ್ಪಿಸಿದ್ದಾರೆ. ಒಟ್ಟು 665 ಗ್ರಾಂ ಚಿನ್ನ, 133 ಕೆಜಿ ಮತ್ತು 654 ಗ್ರಾಂ ಬೆಳ್ಳಿಯನ್ನು ಉಡುಗೊರೆಗಳ ರೂಪದಲ್ಲಿ ದೇವಾಲಯಕ್ಕೆ ಕಳುಹಿಸಲಾಗಿದೆ. ಇದನ್ನು ನೋಡಿದರೆ, ಭಕ್ತರು ಸನ್ವಾಲಿಯಾ ಸೇಠ್‌ನಲ್ಲಿ ಹೊಂದಿರುವ ನಂಬಿಕೆ ಅಪಾರವಾದುದು ಎಂದೇ ಹೇಳಬಹುದಾಗಿದೆ. ಕಳೆದ ತಿಂಗಳು ಕೂಡ ದೇವಾಲಯಕ್ಕೆ ಸುಮಾರು 23 ಕೋಟಿ ರೂ.ಗಳ ದೇಣಿಗೆ ಹರಿದುಬಂದಿತ್ತು" ಎಂದು ದೇಗುಲ ಮಂಡಳಿ ತಿಳಿಸಿದೆ.
"ಪ್ರತಿ ತಿಂಗಳು ದೇಣಿಗೆ ಹೆಚ್ಚುತ್ತಿದೆ. ಭಕ್ತರ ನಂಬಿಕೆ ಮತ್ತು ಔದಾರ್ಯ ಇನ್ನೂ ದೊಡ್ಡದಾಗಿದೆ. ಈ ಹಣದಿಂದ ದೇವಾಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗುವುದು" ಎಂದು ಆಡಳಿತ ಮಂಡಳಿ ಹೇಳಿದೆ,(ಏಜೆನ್ಸೀಸ್).