38ನೇ ರಾಷ್ಟ್ರೀಯ ಕ್ರೀಡಾಕೂಟ: ಬ್ಯಾಡ್ಮಿಂಟನ್‌ನಲ್ಲಿ ಅವಳಿ ಚಿನ್ನ, ಭರತ್‌ಗೆ ಕಂಚಿನ ಯೋಗ!

New Project (1)
Published on

ಡೆಹ್ರಾಡೂನ್/ಹಲ್ದಾವಾನಿ: ದೇವಭೂಮಿ ಉತ್ತರಾಖಂಡದಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಈಜು ವಿಭಾಗದಲ್ಲಿ ಕರ್ನಾಟಕದ ಪುರುಷರ ಹಾಗೂ ಮಹಿಳಾ ತಂಡಗಳು ಸಮಗ್ರ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿವೆ. ಕೂಟದ 7ನೇ ದಿನವೂ ರಾಜ್ಯದ ಈಜುಪಟುಗಳು 4 ಬಂಗಾರ ಪದಕದೊಂದಿಗೆ ಅಭಿಯಾನ ಮುಗಿಸಿದರೆ, ನಿತಿನ್ ಎಚ್.ವಿ- ಪ್ರಕಾಶ್ ರಾಜ್ ಮತ್ತು ಶಿಖಾ ಗೌತಮ್- ಆಶ್ವಿನಿ ಭಟ್ ಜೋಡಿ ಕ್ರಮವಾಗಿ ಬ್ಯಾಡ್ಮಿಂಟನ್‌ನ ಪುರುಷರ-ಮಹಿಳಾ ಡಬಲ್ಸ್ ವಿಭಾಗದಲ್ಲಿ ಸ್ವರ್ಣ ಸಾಧನೆ ಮಾಡಿತು.

ಇದರೊಂದಿಗೆ ಕರ್ನಾಟಕ ಮಂಗಳವಾರ ಒಟ್ಟು 6 ಸ್ವರ್ಣ ಪದಕ ಗೆದ್ದ ಸಾಧನೆ ಮಾಡಿತು. ಕರ್ನಾಟಕ ಈಗ 28 ಚಿನ್ನ, 12 ಬೆಳ್ಳಿ ಹಾಗೂ 13 ಕಂಚು ಸಹಿತ ಒಟ್ಟು ಪದಕಗಳ ಸಂಖೆಯನ್ನು 53ಕ್ಕೇರಿಸಿಕೊಂಡಿದೆ. ಜತೆಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಕಯಾಕಿಂಗ್‌ನಲ್ಲಿ ರಜತ

ಕೂಟದ ಪುರುಷರ ಕನೋಯಿಂಗ್ (ಕಿರು ದೋಣಿ) ಮತ್ತು ಕಯಾಕಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ರಜತ ಪದಕ ಒಲಿದಿದೆ. ಕರ್ನಾಟಕದ ನಾಗೇಶ್ ನಾಯ್ಕ ಸ್ಲಾಲೋಮ್ 1ಕೆ ಸ್ಪರ್ಧೆಯಲ್ಲಿ ಎರಡನೇ ಸ್ಥಾನದೊಂದಿಗೆ ಪದಕ ಸಾಧನೆ ಮಾಡಿದರು. ರಾಜಸ್ಥಾನದ ಪ್ರದ್ಯುಮ್ನ ರಾಥೋಡ್ ಸ್ವರ್ಣ ಜಯಿಸಿದರೆ, ಆಂಧ್ರಪ್ರದೇಶದ ಕೊಲ್ಲಕಣಿ ವಿಷ್ಣು ಕಂಚು ಗೆದ್ದುಕೊಂಡರು.

ಭರತ್‌ಗೆ ಕಂಚಿನ ಯೋಗ

ಯೋಗಾಸನದಲ್ಲಿ ಕರ್ನಾಟಕದ ಭರತ್ ರಾಮಗೌಡ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಪುರುಷರ ಆರ್ಟಿಸ್ಟಿಕ್ ಯೋಗಾಸನ ಸ್ಪರ್ಧೆಯಲ್ಲಿ ಭರತ್ 58.93 ಅಂಕ ಕಲೆಹಾಕಿ ಮೂರನೇ ಸ್ಥಾನ ಪಡೆದರು. ಗೋವಾ ಶುಭಂ ದೇಬನಾಥ್ (59.14) ಚಿನ್ನ, ಉತ್ತರಾಖಂಡದ ವಿಶಾಲ್ ದ್ವಿವೇದಿ (59.05) ಕ್ರಮವಾಗಿ ಚಿನ್ನ, ಬೆಳ್ಳಿಗೆ ಕೊರಳೊಡ್ಡಿದರು.

ಬ್ಯಾಡ್ಮಿಂಟನ್‌ನಲ್ಲಿ ಡಬಲ್ ಬಂಗಾರ

ಬ್ಯಾಡ್ಮಿಂಟನ್ ಸ್ಪರ್ಧೆಯ ಕೊನೇ ದಿನ ಕರ್ನಾಟಕ ತಂಡ 2 ಚಿನ್ನ, ತಲಾ 1 ರಜತ ಹಾಗೂ ಕಂಚಿನ ಪದಕದೊಂದಿಗೆ ತನ್ನ ಅಭಿಯಾನ ಮುಗಿಸಿತು. ಪುರುಷರ ಡಬಲ್ಸ್‌ನಲ್ಲಿ ನಿತಿನ್ ಎಚ್.ವಿ- ಪ್ರಕಾಶ್ ರಾಜ್ ಜೋಡಿ 21-16, 21-14 ನೇರಗೇಮ್‌ಗಳಿಂದ ಕರ್ನಾಟಕದರೇ ಆದ ವೈಭವ್ ಹಾಗೂ ಅಶಿತ್ ಸೂರ್ಯ ಜೋಡಿಯನ್ನು ಮಣಿಸಿ ಸ್ವರ್ಣ ಸಂಪಾದಿಸಿತು.

ವೈಭವ್-ಅಶಿತ್ ಬೆಳ್ಳಿಗೆ ಸಮಾಧಾನ ಕಂಡರು. ಮಹಿಳಾ ಡಬಲ್ಸ್‌ನಲ್ಲಿ 26 ವರ್ಷ ಶಿಖಾ ಗೌತಮ್ ಹಾಗೂ ಆಶ್ವಿನ್ ಭಟ್ ಜೋಡಿ 21-17, 15-21, 21-12 ಮೂರು ಗೇಮ್‌ಗಳ ಹೋರಾಟದಲ್ಲಿ ಆತಿಥೇಯ ಉತ್ತರಾಖಂಡದ ಅನನ್ಯಾ ಬಿಷ್ತ್-ಏಂಜೆಲ ಪುನೀರ ಜೋಡಿ ಎದುರು ಗೆದ್ದು ಬೀಗಿತು. ಇದರೊಂದಿಗೆ ಬ್ಯಾಡ್ಮಿಂಟನ್‌ನಲ್ಲಿ ರಾಜ್ಯಕ್ಕೆ ಕೂಟದ 3ನೇ ಚಿನ್ನದ ಪದಕ ಒಲಿಯಿತು. ಇದಕ್ಕೂ ಮುನ್ನ ಪುರುಷರ ತಂಡ ಸ್ವರ್ಣ ಜಯಿಸಿತ್ತು. ಪುರುಷರ ಸಿಂಗಲ್ಸ್‌ನಲ್ಲಿ ಸನೀತ್ ದಯಾನಂದ್ ಸೆಮಿೈನಲ್‌ನಲ್ಲಿ 21-13, 21-22, 12-21 ರಿಂದ ಉತ್ತರಾಖಂಡದ 16 ವರ್ಷದ ಸೂಯಾಕ್ಷ್ ರಾವತ್ ಎದುರು ಪರಾಭಗೊಂಡು, ಕಂಚಿಗೆ ತೃಪ್ತಿಪಟ್ಟರು.

ತಮಿಳುನಾಡಿನ ಸತೀಶ್ ಕುಮಾರ್, ಮಹಿಳಾ ಸಿಂಗಲ್ಸ್‌ನಲ್ಲಿ ಹರಿಯಾಣದ ಅನ್ಮೋಲ್ ಖರ್ಬ್ ಚಾಂಪಿಯನ್ ಎನಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಅಶಿತ್ ಸೂರ್ಯ ಜೋಡಿ ಕಂಚಿಗೆ ಸಮಾಧಾನ ಕಂಡಿತು. ಮಿಶ್ರ ಡಬಲ್ಸ್‌ನಲ್ಲಿ ತಮಿಳುನಾಡಿನ ಸತೀಶ್ ಕುಮಾರ್-ಆದ್ಯಾ ವರಿಯಂತ್ 21-11, 20-22, 21-8 ರಿಂದ ಮಹಾರಾಷ್ಟ್ರದ ದೀಪಾ ರಂಬೀಯಾ ಅಕ್ಷಯ್ ವಾರಂಗ್‌ರನ್ನು ಮಣಿಸಿ ಚಿನ್ನ ಗೆದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net