ರೆಕ್ಕೆಗಳಿಲ್ಲ...! ಇದು ಅಪ್ಪಟ ಹಾರುವ ಕಾರು; ಇಸ್ರೇಲ್​ ಕಂಪನಿ ಸಾಧನೆ

uber- flying car
Published on

ನವದೆಹಲಿ: ಕಾಮಿಕ್​ ಪುಸ್ತಕಗಳಲ್ಲಿ, ಸೈನ್ಸ್​ ಫಿಕ್ಷನ್​ ಚಿತ್ರಗಳಲ್ಲಷ್ಟೇ ಕಂಡು ಬರುತ್ತಿದ್ದ ಹಾರುವ ಕಾರು ಈಗ ವಾಸ್ತವವಾಗುತ್ತಿದೆ. ಆದರೆ, ಹೆಚ್ಚಿನವು ಡ್ರೋನ್​ಗಳಂತೆ ರೆಕ್ಕೆ ಹೊಂದಿ ಅಥವಾ ಹೆಲಿಕಾಪ್ಟರ್​ಗಳ ಸುಧಾರಿತ ರೂಪವಾಗಿಯೇ ಕಂಡು ಬರುತ್ತಿದ್ದವು. ಆದರೆ, ಇಸ್ರೇಲ್​ ಕಂಪನಿಯೊಂದು ಅಭಿವೃದ್ಧಿಪಡಿಸುತ್ತಿರುವ ಈ ಕಾರು ಹಾರುವ ವಾಹನಗಳ ಕ್ಷೇತ್ರದಲ್ಲಿಯೇ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಲಿದೆ.

ಸಾಮಾನ್ಯ ಕಾರಿನ (ಎಸ್​ಯುವಿ) ಗಾತ್ರದಷ್ಟೇ ಇದ್ದು, ಏಕಕಾಲದಲ್ಲಿ ಆರು ಜನರು ಪ್ರಯಾಣಿಸಬಹುದಾಗಿದೆ. ಇದನ್ನು ಫುಟ್​ಪಾತ್​ನಲ್ಲೂ ಇಳಿಸಬಹುದು. ಒಂದು ಹೆಲಿಕಾಪ್ಟರ್​ ಇಳಿಯುವ ಜಾಗದಲ್ಲಿ ಇಂಥ ನಾಲ್ಕು ಕಾರುಗಳನ್ನು ಇಳಿಸಬಹುದು ಎಂಬುದು ಕಂಪನಿಯ ವಾದ.

ಇಸ್ರೇಲ್​ನ ಅರ್ಬನ್​ ಏರೋನಾಟಿಕ್ಸ್​ ಕಂಪನಿ ಇದನ್ನು ತಯಾರಿಸುತ್ತಿದೆ. ಸಿಟಿಹಾಕ್​ ಇವಿಟಿಒಎಲ್​ ಎಂದು ಕರೆಯಲಾಗಿದೆ. ವಿಶೇಷವೆಂದರೆ ಇದಕ್ಕೆ ರೆಕ್ಕೆ ಅಥವಾ ರೋಟರ್​ಗಳಿಲ್ಲ. ಜತೆಗೆ, ಇದು ಜಲಜನಕವನ್ನು ಇಂಧನವಾಗಿ ಉಪಯೋಗಿಸುವುದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗದು. ಮುಂದಿನ ದಿನಗಳಲ್ಲಿ ವಾಹನಗಳಿಗೆ ಜಲಜನಕವೇ ಮುಖ್ಯ ಇಂಧನ ಮೂಲವಾಗಲಿದೆ. ಇದನ್ನು ತುಂಬಿಸಿಕೊಳ್ಳಲು ಐದು ನಿಮಿಷ ಸಾಕು.

ಇದಕ್ಕೆ ಬಳಸಿರುವುದು ಇಂಟರ್ನಲ್​ ರೋಟರ್​ ಫ್ಯಾನ್​ ಕ್ರಾಪ್ಟ್​ ತಾಂತ್ರಿಕತೆ. ಇದು ವೈಮಾನಿಕ ಕ್ಷೇತ್ರದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಲಿದೆ ಎಂಬುದು ಕಂಪನಿಯ ವಾದ.

ಜತೆಗೆ, ಹೈಡ್ರೋಜನ್​ ಇಂಧನ ಕಾರನ್ನು ಹಗುರವಾಗಿಸಿ ಹೆಚ್ಚು ಭಾರವನ್ನು ಕೊಂಡೊಯ್ಯುವಂತೆ ಮಾಡುತ್ತದೆ. ಕಂಪನಿ ಕಳೆದ ಒಂದು ದಶಕದಿಂದ ಇದರ ಅಭಿವೃದ್ಧಿಯಲ್ಲಿ ತೊಡಗಿದ್ದು, ಈಗ ಫಲ ನೀಡುತ್ತಿದೆ.

ಸಿಟಿ ಹಾಕ್​ನ ವಿಡಿಯೋ ಇಲ್ಲಿದೆ....

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net