ಇದು ಹೀಗೆ ಮುಂದುವರಿದ್ರೆ… ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​ಗೆ ಶುರುವಾಯ್ತು ಎಚ್ಚರಿಕೆ ಗಂಟೆ

ವಿಜಯವಾಣಿ-2024-07-31T072514.987
Published on

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಕೈಗೊಂಡಿದ್ದ ಟೀಮ್ ಇಂಡಿಯಾ, ನಿನ್ನೆ (ಜು.30) ಸೂಪರ್​ ಓವರ್​ನಲ್ಲಿ ರೋಚಕ ಜಯ ಸಾಧಿಸಿದ್ದು, ಇದೀಗ ಲಂಕಾ ಪಡೆಯನ್ನು 3-0 ಅಂತರದಿಂದ ಕ್ಲೀನ್​ ಸ್ವೀಪ್ ಮಾಡಿ, ಸರಣಿ ವಶಪಡಿಸಿಕೊಂಡಿದೆ. ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಸರಣಿ ಗೆದ್ದಿರುವ ಟೀಮ್ ಇಂಡಿಯಾ ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಸಿರೀಸ್​ ಗೆಲ್ಲಲು ಎದುರುನೋಡುತ್ತಿದೆ. ಒಂದೆಡೆ ಸೂರ್ಯ ನಾಯಕತ್ವದಲ್ಲಿ ತಂಡ ಗೆಲುವನ್ನು ಸಾಧಿಸಿತು ಎಂದು ಕ್ರಿಕೆಟ್ ಅಭಿಮಾನಿಗಳು ಭಾರೀ ಸಂತಸಪಟ್ಟರೆ, ಅತ್ತ ಎರಡನೇ ಬಾರಿಗೆ ಡಕ್​ಔಟ್ ಆದ ಸಂಜು ಸ್ಯಾಮ್ಸನ್​ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಟಿ20 ವಿಶ್ವಕಪ್​ ತಂಡದಲ್ಲಿದ್ದ ಸಂಜು ಸ್ಯಾಮ್ಸನ್​ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅವಕಾಶ ಗಿಟ್ಟಿಸಿಕೊಂಡರೂ ಸಹ ಉತ್ತಮ ಓಪನಿಂಗ್ ಕೊಡುವಲ್ಲಿ ವಿಫಲರಾದರು. ಮೊದಲ ಮ್ಯಾಚ್​ನಲ್ಲಿ ಚಾನ್ಸ್​ ಪಡೆಯದ ಸಾಮ್ಸನ್​ಗೆ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿತ್ತು.

ಯಶಸ್ವಿ ಜೈಸ್ವಾಲ್​ ಜತೆ ಓಪನಿಂಗ್ ಬಂದ ಸಂಜು, ಗೋಲ್ಡನ್​ ಡಕ್​ಗೆ ಪೆವಿಲಿಯನ್​ತ್ತ ಮುಖಮಾಡಿದ್ದರು. ಇದು ನೋಡುಗರಿಗೆ ಬಹಳ ಶಾಕಿಂಗ್ ಆಗಿತ್ತು. ಭಾರೀ ಭರವಸೆ ಇಟ್ಟು ಕಳುಹಿಸಲಾಗಿದ್ದ ಸ್ಟಾರ್​ ಬ್ಯಾಟ್ಸ್​ಮನ್​ ಇಂತಹ ಕಳಪೆ ಪ್ರದರ್ಶನ ತೋರಿದ್ದು, ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು. ಇದೀಗ ಅದರ ಬೆನ್ನಲ್ಲೇ ಮೂರನೇ ಪಂದ್ಯದಲ್ಲಿಯೂ ಡಕ್​ಔಟ್ ಆಗಿದ್ದು ಸದ್ಯ ಫ್ಯಾನ್ಸ್​ಗಳ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ.

ಎರಡನೇ ಮ್ಯಾಚ್​ನಲ್ಲಿ ಗೋಲ್ಡನ್​ ಡಕ್​ ಆಗಿದ್ದ ಸಂಜುಗೆ ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ನಿನ್ನೆ ನಡೆದ ಮೂರನೇ ಹಾಗೂ ಕಡೆಯ ಟಿ20 ಪಂದ್ಯದಲ್ಲಿ ಮತ್ತೊಂದು ಅವಕಾಶ ಕೊಟ್ಟಿದ್ದರು. ಆದ್ರೆ, ಈ ಚಾನ್ಸ್​ ಕೂಡ ಮಿಸ್ ಮಾಡಿಕೊಂಡ ಸ್ಯಾಮ್ಸನ್​, 4 ಎಸೆತಗಳಲ್ಲಿ ಒಂದು ರನ್​ ಸಹ ಕಲೆಹಾಕದ ಡಕ್​ಔಟ್ ಆದರು.

ಇದು ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಭಾರೀ ಆಘಾತ ಉಂಟುಮಾಡಿತು. ತನಗೆ ಕೊಟ್ಟ ಅವಕಾಶವನ್ನು ಬಳಸಿಕೊಳ್ಳದೆ ಎಡವುತ್ತಿದ್ದಾರಾ ಸಾಮ್ಸನ್​? ಇಲ್ಲಿಗೆ ಮುಗಿಯುತ್ತಾ ಇವರ ಕ್ರಿಕೆಟ್ ಕರಿಯರ್​ ಎಂಬ ಪ್ರಶ್ನೆಗಳು ಸದ್ಯ ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net