

ಬೆಂಗಳೂರು: ಗೋಪಾಲ್ ಹಳೇಪಾಳ್ಯ ನಿರ್ದೇಶನದ ‘ನೈಸ್‌ರೋಡ್’ ಸಿನಿಮಾ, ಟೈಟಲ್‌ನಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ಚಿತ್ರದ ಶೀರ್ಷಿಕೆ ಹಾಗೂ ಟ್ರೇಲರ್‌ನಲ್ಲಿ ಸಂಸ್ಥೆಯ ಹೆಸರು ಬಳಸಲಾಗಿದ್ದು, ಇದನ್ನು ತೆಗೆದುಹಾಕಬೇಕು ಎಂದು ‘ನೈಸ್’ (ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್) ಸಂಸ್ಥೆಯು ನಿರ್ದೇಶಕ ಗೋಪಾಲ್ ಹಳೇಪಾಳ್ಯ ಹಾಗೂ ನಿರ್ಮಾಪಕ ಎನ್. ರಾಜುಗೌಡಗೆ ಲಾಯರ್ ನೋಟಿಸ್ ನೀಡಿದೆ. ಹೀಗಾಗಿ ಜುಲೈ 26ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾಕ್ಕೆ ತಡೆಯಾಗಿದೆ. ಈ ಬಗ್ಗೆ ನಿರ್ದೇಶಕ ಗೋಪಾಲ್ ಸ್ಪಷ್ಟನೆ ನೀಡಿದ್ದು, ‘ಚಿತ್ರದ ಕಥೆಗೂ, ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಕೇವಲ ಗಮನಸೆಳೆಯುವ ದೃಷ್ಟಿಯಿಂದಾಗಿ ‘ನೈಸ್ ರೋಡ್’ ಟೈಟಲ್ ಬಳಸಲಾಗಿದೆ. ಇದು ಸಸ್ಪೆನ್ಸ್-ಥ್ರಿಲ್ಲರ್ ಚಿತ್ರವಾಗಿದ್ದು, ಪುರ್ನಜನ್ಮದ ಪಾಪ-ಕರ್ಮಗಳ ಬಗ್ಗೆ ತಿಳಿಸಲಾಗಿದೆಯೇ ಹೊರತು ಸಂಸ್ಥೆಗೆ ಸಂಬಂಧಪಡುವ ವಿಚಾರಗಳಾಗಲಿ ಅಥವಾ ತೇಜೋವಧೆ ಮಾಡುವ ಯಾವುದೇ ವಿಷಯ ಇಲ್ಲ’ ಎಂದಿದ್ದಾರೆ.
ಚರ್ಚಿಸಿ, ಮುಂದಿನ ತೀರ್ಮಾನ:
ಚಿತ್ರದ ಕುರಿತು ಗೋಪಾಲ್, ‘ಮೂರು ತಿಂಗಳ ಹಿಂದೆ ಟೀಸರ್ ಬಿಡುಗಡೆ ಮಾಡಿದ್ದೆವು. ಆಗ ಟೈಟಲ್ ಕುರಿತು ಪ್ರಸ್ತಾಪ ಮಾಡಿದ್ದರೆ, ನಾವು ಗಮನಹರಿಸಬಹುದಿತ್ತು. ಆದರೆ, ಈಗ ಎಲ್ಲ ಕಾರ್ಯಗಳು ಮುಗಿದ ಮೇಲೆ ನೋಟಿಸ್ ನೀಡಿದ್ದಾರೆ. ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ನೋಂದಾಯಿಸಿದ್ದೇವೆ. ಚಿತ್ರಕ್ಕೆ ಸೆನ್ಸಾರ್ ಮಾಡಿಸಿದ್ದು, ‘ಯು/ಎ’ ಪ್ರಮಾಣಪತ್ರ ದೊರೆತಿದೆ. ಮಂಡಳಿ ಕೂಡ ಚಿತ್ರ ವೀಕ್ಷಿಸಿ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದೆ’ ಎನ್ನುತ್ತಾರೆ. ಇದೀಗ ನೋಟಿಸ್ ನೀಡಿರುವ ಕುರಿತು, ‘ಚಿತ್ರತಂಡದೊಂದಿಗೆ ಚರ್ಚೆ ಮಾಡಿ ಟೈಟಲ್ ಬದಲಾವಣೆ ಮಾಡಬೇಕೋ? ಬೇಡವೋ? ಮುಂದಿನ ಕಾನೂನು ಹೋರಾಟ, ಸಿನಿಮಾ ಬಿಡುಗಡೆ ದಿನಾಂಕ ಕುರಿತು ನಿರ್ಧರಿಸಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.