

ಬೆಂಗಳೂರು: ಇತ್ತೀಚೆಗೆ ತನ್ನ ಮಾಜಿ ಲವರ್ನಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ತ್ರಿಕೋನ ಪ್ರೇಮ ಕಥೆಯ ನಾಯಕಿ ದುರಂತ ಅಂತ್ಯ ಕಂಡಿದ್ದಾಳೆ.
ಗೆಳೆಯರಿಬ್ಬರನ್ನೂ ಪ್ರೀತಿಸಿದ್ದ ಕಾಲೇಜು ಕನ್ಯೆ ಐದು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡಿ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾಳೆ. ಮಾಜಿ ಮತ್ತು ಹಾಲಿ ಪ್ರಿಯಕರರಿಬ್ಬರೂ ಕಂಬಿ ಎಣಿಸುವಂತಾಗಿದೆ. ಅಷ್ಟಕ್ಕೂ ಈ ದುರಂತ ಹೇಗಾಯ್ತು ಗೊತ್ತಾ? ಅದರ ಡಿಟೇಲ್ಸ್ ಇಲ್ಲಿದೆ...
23 ವರ್ಷದ ಮೋನಿಕಾ ಮತ್ತು ಬಬಿತ್ ಈ ಮೊದಲು ಪ್ರೀತಿಸುತ್ತಿದ್ದರು. ಇವರಿಬ್ಬರ 4 ವರ್ಷದ ಪ್ರೀತಿ ಇತ್ತೀಚೆಗೆ ಬ್ರೇಕ್ ಅಪ್ ಆಗಿತ್ತು. ಕೆಲ ತಿಂಗಳ ಹಿಂದೆ ಆಕೆ ಬಬಿತ್ನ ಗೆಳೆಯ ರಾಹುಲ್ನನ್ನು ಪ್ರೀತಿಸುತ್ತಿದ್ದಳು. ವಿಪರ್ಯಾಸವೆಂದರೆ ಈ ಮೂವರು ಒಂದೇ ಏರಿಯಾದ ನಿವಾಸಿಗಳು ಮತ್ತು ಸ್ನೇಹಿತರು ಕೂಡ.
ಜೂ.7ರಂದು ರಾವುಲ್ ಬರ್ತ್ ಡೇ ಇತ್ತೆಂದು ಆತನ ಮನೆಗೆ ಹೋಗಿದ್ದಳು. ಆ ವೇಳೆ ಅಲ್ಲಿಗೆ ಬಂದ ಬಬಿತ್, ಮೋನಿಕಾ ಜತೆ ಗಲಾಟೆ ಮಾಡಿ ಆಕೆಯನ್ನು ಬೈಕ್‌ನಲ್ಲಿ ಚಿಕ್ಕಬಾಣವಾರದ ತನ್ನ ಮನೆಗೆ ಕರೆದೊಯ್ದಿದ್ದ. ಅಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಕಿರಿಕ್ ಪ್ರೇಯಸಿ ಮೇಲೆ ಬಬಿತ್ ಹಲ್ಲೆ ಮಾಡಿದ್ದ.
ಗೋಡೆಗೆ ಮೋನಿಕಾಳ ತಲೆ ಗುದ್ದಿದ್ದ ಬಬಿತ್ ಎಲ್ಮೆಟ್ನಿಂದಲೂ ಹೊಡೆದಿದ್ದ. ಆಕೆ ಸ್ಥಳದಲ್ಲೇ ನಿತ್ರಾಣಳಾಗಿ ಕುಸಿದು ಬೀಳುತ್ತಿದ್ದಂತೆ ಮೋನಿಕ ತಂದೆ ಕುಮಾರ್‌ಗೆ ಕರೆ ಮಾಡಿದ ಬಬಿತ್, ನಿಮ್ಮ ಮಗಳಿಗೆ ಅಪಘಾತವಾಗಿದೆ. ಕರೆದುಕೊಂಡು ಹೋಗಿ ಎಂದು ಸುಳ್ಳು ಹೇಳಿದ್ದ. ಸ್ಥಳಕ್ಕೆ ಬಂದ ಯುವತಿ ಪಾಲಕರು ಆಕೆಯನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಆಕೆ ಸಾವನ್ನಪ್ಪಿದ್ದಾಳೆ.
ಹಲ್ಲೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೋನಿಕಾಳ ಮಾಜಿ ಪ್ರಿಯಕರ ಬಬಿತ್ ಹಾಗೂ ಹಾಲಿ ಪ್ರಿಯಕರ ರಾಹುಲ್ ಮೇಲೆ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.