ಇದೇ ನೋಡಿ ಜಗತ್ತಿನ ನಂ. 1 ಯೂಟ್ಯೂಬ್​ ಚಾನೆಲ್: ಸಬ್​ಸ್ಕ್ರೈಬರ್ಸ್​ ಸಂಖ್ಯೆ ಕೇಳಿದ್ರೆ ಹುಬ್ಬೇರೋದು ಗ್ಯಾರಂಟಿ! ​

MrBeast
Published on

ನವದೆಹಲಿ: ಮಿಸ್ಟರ್​ ಬೀಸ್ಟ್​ (MrBeast) ಹೆಸರಿನ ಯೂಟ್ಯೂಬ್​ ಚಾನೆಲ್​ ವಿಶ್ವದಲ್ಲೇ ಅತಿ ಹೆಚ್ಚು ಸಬ್​ಸ್ಕ್ರೈಬ್​ ಹೊಂದುವ ಮೂಲಕ ಜಗತ್ತಿನ ನಂಬರ್​ 1 ಯೂಟ್ಯೂಬ್​ ಚಾನೆಲ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಿಸ್ಟರ್ ಬೀಸ್ಟ್ ಭಾರತೀಯ ಮ್ಯೂಸಿಕ್​ ಕಂಪನಿ ಟಿ-ಸೀರೀಸ್ ಯೂಟ್ಯೂಬ್ ಚಾನೆಲ್ (ಟಿ-ಸಿರೀಸ್) ಅನ್ನು ಹಿಂದೆ ಸರಿಸಿ ಈ ಸಾಧನೆ ಮಾಡಿರುವುದು ಗಮನಾರ್ಹ. ಮಿಸ್ಟರ್ ಬೀಸ್ಟ್ ಚಾನೆಲ್ ಅನ್ನು ನಿರ್ವಹಿಸುವ ಅಮೆರಿಕದ ಜೇಮ್ಸ್ ಸ್ಟೀಫನ್ ಡೊನಾಲ್ಡ್​ಸನ್ ತಮ್ಮ ಎಕ್ಸ್​ ಖಾತೆಯ ಮೂಲಕ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಸದ್ಯ ಮಿಸ್ಟರ್ ಬೀಸ್ಟ್ ಯೂಟ್ಯೂಬ್ ಚಾನೆಲ್ 26.6 ಕೋಟಿಗೂ ಹೆಚ್ಚು ಸಬ್​ಸ್ಕ್ರೈಬರ್ಸ್​ ಹೊಂದಿದೆ. ಟಿ-ಸೀರೀಸ್​ ಸಬ್​ಸ್ಕ್ರೈಬರ್ಸ್​ ಸಂಖ್ಯೆಯು ಅದಕ್ಕಿಂತ ಕೇವಲ 1,608 ಕಡಿಮೆಯಾಗಿದೆ.

ಜನಪ್ರಿಯ ವಿಡಿಯೋ ಪ್ಲಾಟ್‌ಫಾರ್ಮ್ ಯೂಟ್ಯೂಬ್​ ಅನ್ನು 2005, ಫೆಬ್ರವರಿ 14ರಂದು ಚಾಡ್ ಹರ್ಲಿ, ಸ್ಟೀವನ್ ಚಿನ್ ಮತ್ತು ಜಾವೇದ್ ಕರೀಮ್ ಎಂಬುವರು ಪ್ರಾರಂಭಿಸಿದರು. ಈ ಮೂವರು ಪೇಪಾಲ್‌ನ ಮಾಜಿ ಉದ್ಯೋಗಿಗಳು. 2006ರಲ್ಲಿ ಯೂಟ್ಯೂಬ್ ಅನ್ನು ಗೂಗಲ್ ಖರೀದಿಸಿತು. ಗೂಗಲ್ ಕಂಪನಿಯು ಯೂಟ್ಯೂಬ್ ಅನ್ನು ಸ್ವಾಧೀನಪಡಿಸಿಕೊಂಡಾಗ, ಜಾವೇದ್ ಕರೀಮ್ ಅವರಿಗೆ 1,37,443 ಷೇರುಗಳನ್ನು ಈಕ್ವಿಟಿಯಾಗಿ ನೀಡಲಾಯಿತು. ಇವುಗಳಲ್ಲಿ ಕೆಲವು ಷೇರುಗಳನ್ನು ಕರೀಮ್ ಅವರು 2006ರಲ್ಲಿ ಮಾರಾಟ ಮಾಡಿದರು.

ಪ್ರಸ್ತುತ ತಂತ್ರಜ್ಞಾನದ ಯುಗದಲ್ಲಿ YouTube ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದೆ. ಸ್ಮಾರ್ಟ್​ಫೋನ್ ಹೊಂದಿರುವ ಬಹುತೇಕ ಎಲ್ಲರೂ YouTube ಅನ್ನು ಬಳಸುತ್ತಾರೆ. ಜಗತ್ತಿನ ಎಲ್ಲ ವಿಡಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಯೂಟ್ಯೂಬ್‌ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ ಎಂದು ಹೇಳುವುದು ಅತಿಶಯೋಕ್ತಿಯಲ್ಲ. ಸಣ್ಣ ವಿಷಯಗಳಿಂದ ಹಿಡಿದು ಬಾಹ್ಯಾಕಾಶದವರೆಗೆ ಅನೇಕ ವಿಷಯಗಳಿಗೆ ಸಂಬಂಧಿಸಿದ ವಿಡಿಯೋಗಳಿಗೆ 'ಯೂಟ್ಯೂಬ್' ಗೋ-ಟು ಸ್ಥಳವಾಗಿದೆ ಎಂಬುದು ಗಮನಾರ್ಹವಾಗಿದೆ.

ಇದಿಷ್ಟೇ ಅಲ್ಲದೆ, ಅನೇಕ ಕ್ರಿಯೆಟರ್ಸ್​ಗಳು ತಮ್ಮ ಸೃಜನಶೀಲತೆಯೊಂದಿಗೆ ಉತ್ತಮ ಆದಾಯವನ್ನು ಗಳಿಸಲು YouTube ಅನ್ನು ವೇದಿಕೆಯಾಗಿ ಬಳಸುತ್ತಿದ್ದಾರೆ. ಅದಕ್ಕಾಗಿಯೇ ಯೂಟ್ಯೂಬ್‌ನಲ್ಲಿ ಕೋಟಿಗಟ್ಟಲೆ ವಿಡಿಯೋಗಳು ಕಾಣಸಿಗುತ್ತವೆ. ಅನೇಕರಿಗೆ ಉದ್ಯೋಗವನ್ನು ನೀಡಿದ್ದು, ಜೀವನಕ್ಕೆ ದಾರಿಯನ್ನು ಮಾಡಿಕೊಡುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net