

| ಸುರೇಶ್ ಮರಕಾಲ ಸಾಯ್ಬರಕಟ್ಟೆ
ನಾವು ಮನುಷ್ಯರು, “ವಿದ್ಯುತ್ತನ್ನು ಕೃತಕವಾಗಿ ತಯಾರಿಸುತ್ತಿದ್ದೇವೆ!” ಎಂದು ಬೀಗಿದರೆ, ನಮ್ಮನ್ನು ನೋಡಿ ಕೆಲವು ಪ್ರಾಣಿಗಳು ನಕ್ಕಾವು! ಏಕೆಂದರೆ, ಅವು ಈ ವಿಚಾರದಲ್ಲಿ ಎಷ್ಟು ಮುಂದಿವೆ ಎಂದರೆ, ‘ವಿದ್ಯುತ್ತನ್ನು’ ತಾವೇ ಸ್ವತಃ ತಯಾರಿಸುತ್ತವೆ! ಅದನ್ನು ಕೆಲವು ಕತ್ತಲೆಯಲ್ಲಿ ದಾರಿ ಹುಡುಕಲು ಬಳಸಿದರೆ, ಇನ್ನು ಕೆಲವು ತಮ್ಮ ಆಹಾರ ಸಂಪಾದನೆಗೋ, ಶತ್ರುವನ್ನು ಓಡಿಸಲೋ ಈ ‘ಕರೆಂಟ’ನ್ನು ಬಳಸುತ್ತವೆ! ಇನ್ನು ಕೆಲವಂತೂ ತಮ್ಮ ಒಂದೇ ಶಾಕ್‍ಗೆ ಎದುರಿಗಿರುವ ದೈತ್ಯಾಕಾರದ ಜೀವಿಗಳನ್ನೂ ಪ್ರಜ್ಞಾಶೂನ್ಯರನ್ನಾಗಿ ಮಾಡಿಬಿಡುವಷ್ಟು ಶಕ್ತಿಶಾಲಿಗಳಾಗಿವೆ! ಅಂಥ ಪ್ರಾಣಿಗಳಲ್ಲಿ ಎಂದಿಗೂ ಮುಂಚೂಣಿಯಲ್ಲಿ ನಿಲ್ಲುವಂಥದ್ದು ‘ಶಾಕ್ ಕಿಂಗ್’ ಇಲೆಕ್ಟ್ರಿಕ್ ಈಲ್!
ಈಲ್‍ಗಳು ಮೀನಿನ ಜಾತಿಯಲ್ಲಿಯೇ ದೊಡ್ಡ ಗಾತ್ರಕ್ಕೆ, ಉದ್ದಕ್ಕೆ ಹಾವಿನ ಹಾಗೆ ಇರುವ ಜೀವಿಗಳು. ಉಪ್ಪುನೀರಿನಲ್ಲಿ ಇವುಗಳ ಸಾಮಾನ್ಯ ವಾಸ. ಬಾಯಿ ತುಂಬಾ ನೂರಾರು ಹಲ್ಲುಗಳು, ಕಿವಿರುಳ ಮೂಲಕ ಉಸಿರಾಟ. ಈಗ ಇಲೆಕ್ಟ್ರಿಕ್ ಈಲ್‍ಗಳ ಪ್ರಸ್ತಾಪಕ್ಕೆ ಬಂದರೆ, ಮೊದಲಿಗೆ ಇವುಗಳು ಈಲ್‍ಗಳೇ ಅಲ್ಲ! ನೋಡಲು ತದ್ರೂಪಿ ಈಲ್‍ಗಳ ಹಾಗೆ ಕಾಣಿಸಿದರೂ, ತಮ್ಮ ಹೆಸರಿನ ಕೊನೆಯಲ್ಲಿ ಈಲ್ ಎಂಬ ಪದನಾಮ ಹೊಂದಿದ್ದರೂ, ಇವುಗಳಿಗೂ ಈಲ್‍ಗಳಿಗೂ ಯಾವುದೇ ಸಂಬಂಧವಿಲ್ಲ! ಹೆಚ್ಚೇಕೆ, ಈಲ್‍ಗಳಂತೆಯೇ ಇಲೆಕ್ಟ್ರಿಕ್ ಈಲ್‍ಗಳೂ ಮೀನುಗಳೆಂಬುದನ್ನು ಹೊರತುಪಡಿಸಿದರೆ, ಇವೆರಡರ ನಡುವೆ ಯಾವುದೇ ಸಾಮ್ಯತೆಗಳಿಲ್ಲ! ಈಲ್‍ಗಳು ಉಪ್ಪುನೀರಿನ ಆಳದಲ್ಲಿ ವಾಸ ಮಾಡಿದರೆ, ಇಲೆಕ್ಟ್ರಿಲ್ ಈಲ್‍ಗಳು ವಾಸ ಮಾಡುವುದು ಸಂಪೂರ್ಣವಾಗಿ ಸಿಹಿ ನೀರನಲ್ಲಿ, ಅದೂ ಆಳವೇ ಇಲ್ಲದ, ಹೆಚ್ಚು ಹರಿಯದ ನಿಂತ ನೀರಿನಲ್ಲಿ ಮಾತ್ರ! ಅದರಲ್ಲೂ ಇವುಗಳಿಗೆ ಮಡುಗಟ್ಟಿದ ಕೆಸರಿನಂತಹ ನೀರಾದರೆ ಪಂಚಪ್ರಾಣ! ಇಂಥ ಮಡುಗಟ್ಟಿದ ಕೆಸರಿನಲ್ಲಿ ಈಲ್‍ಗಳು ಬದುಕುವುದನ್ನು ಕಲ್ಪನೆ ಕೂಡ ಮಾಡಲಾಗದು! ಇನ್ನು ಉಸಿರಾಟದ ವಿಚಾರಕ್ಕೆ ಬಂದರೆ, ಈಲ್‍ಗಳು ಎಲ್ಲಾ ಸಾಮಾನ್ಯ ಮೀನುಗಳಂತೆ ತಮ್ಮ ಕಿವಿರಿನ ಮೂಲಕ ಉಸಿರಾಡಿದರೆ, ಇಲೆಕ್ಟ್ರಿಕ್ ಈಲ್‍ಗಳಿಗೆ ಉಸಿರಾಡಲು ಕಿವಿರುಗಳೇ ಇಲ್ಲ! ಅವುಗಳೇನಿದ್ದರೂ ಗಾಳಿಯನ್ನು ಮಾತ್ರ ಉಸಿರಾಡುತ್ತವೆ! ಹೀಗಾಗಿ ಇಲೆಕ್ಟ್ರಿಕ್ ಈಲ್‍ಗಳು ಉಸಿರು ತೆಗೆದುಕೊಳ್ಳುವ ಇಪ್ಪತ್ತರಿಂದ ಮೂವತ್ತು ನಿಮಿಷಗಳಿಗೊಮ್ಮೆ ಆಗಾಗ ನೀರಿನ ಮೇಲ್ಮೈಗೆ ಬರುತ್ತಲೇ ಇರುತ್ತವೆ. ಅದಕ್ಕಿಂತ ಹೆಚ್ಚು ಅವಧಿಗೆ ನೀರಿನೊಳಗೆ ಅವುಗಳು ಮುಳುಗಿಕೊಂಡಿದ್ದರೆ, ಈಜಾಡಲು ಬಾರದೆ ನೀರಿಗೆ ಬಿದ್ದ ನಮ್ಮ-ನಿಮ್ಮ ಸ್ಥಿತಿಯೇ ಅವುಗಳಿಗೂ ಆಗುತ್ತದೆ! ಈಲ್ ಮೀನುಗಳಲ್ಲಿ ಯಾವ ಜಾತಿಗೂ ಕರೆಂಟ್ ಹೊಡೆಯುವ ಅಭ್ಯಾಸವೂ ಇಲ್ಲ, ಆ ಶಕ್ತಿಯೂ ಇಲ್ಲ! ಅದೇ ಇಲೆಕ್ಟ್ರಿಕ್ ಈಲ್‍ಗಳಿಗೆ -ಹೆಸರೇ ಹೇಳುವಂತೆ- ಅವುಗಳ ಬಂಡವಾಳವೇ ‘ಶಾಕ್ ನೀಡುವ’ ವಿಶಿಷ್ಟ ಶಕ್ತಿ! ಇನ್ನು ಸಂತಾನೋತ್ಪತ್ತಿ ವಿಚಾರದಲ್ಲಿ -ಗಂಡು ಇಲೆಕ್ಟ್ರಿಕ್ ಈಲ್‍ಗಳು ಹೆಣ್ಣಿಗಾಗಿ- ಮೀನುಗಳ ವಂಶದಲ್ಲೇ ಅತ್ಯಂತ ವಿಶೇಷವಾದ ತಮ್ಮ ಜೊಲ್ಲಿನಿಂದ ಗೂಡು ಕಟ್ಟುತ್ತವೆ! ಇದು ಸಾಮಾನ್ಯ ಈಲ್‍ಗಳಿಗೆ ಗೊತ್ತೇ ಇಲ್ಲ! ಹೀಗೆ ಈಲ್‍ಗಳಿಗೂ ಇಲೆಕ್ಟ್ರಿಕ್ ಈಲ್‍ಗಳಿಗೂ ಯಾವುದೇ ಸಂಬಂಧವಿಲ್ಲ. ಇಲೆಕ್ಟ್ರಿಕ್ ಈಲ್‍ಗಳು ಸಂಪೂರ್ಣವಾಗಿ ಈಲ್ ಮೀನುಗಳ ಹಾಗೆ ಕಾಣುತ್ತವೆ ಎಂಬೊಂದು ಕಾರಣಕ್ಕಾಗಿ ಇವುಗಳಿಗೂ ‘ಈಲ್’ ಎಂದು ಕರೆಯುತ್ತಾರೆ, ಅಷ್ಟೇ! ಹಾಗೆ ನೋಡಿದರೆ, ಇಲೆಕ್ಟ್ರಿಕ್ ಈಲ್‍ಗಳು ಚಾಕುಮೀನುಗಳೆಂಬ ಮೀನಿನ ಜಾತಿಯವುಗಳು. ನಮ್ಮೂರ ಕೆರೆಕೊಳ್ಳಗಳಲ್ಲಿ ಸಿಗುವ ಮುಗುಡು ಮೀನಿಗೆ ಹತ್ತಿರದ ಸಂಬಂಧಿ!
ಇಲೆಕ್ಟ್ರಿಕ್ ಈಲ್‍ಗಳು ನಮ್ಮ ದೇಶದಲ್ಲಿಲ್ಲ. ಅವುಗಳ ವಾಸ ದಕ್ಷಿಣ ಅಮೆರಿಕಾದ ಅಮೆಜಾ಼ನ್ ಹಾಗೂ ಒರಿನೋಕೋ ಪ್ರದೇಶಗಳ ಸಿಹಿನೀರ ಮಡುಗಟ್ಟಿದ ಆಳವಿಲ್ಲದ ಕೊಳ್ಳಗಳಲ್ಲಿ. ಹೆಸರಲ್ಲಿ ‘ಇಲೆಕ್ಟ್ರಿಕ್’ ಪದವೇನೋ ಇದೆ, ಆದರೆ ಇವುಗಳು ಉತ್ಪಾದಿಸುವ ವಿದ್ಯುತ್ ಏನೂ ನಮಗೆ ಅಪಾಯಕಾರಿಯಾಗಲಾರದು ಎಂದೇನಾದರೂ ಈ ‘ಉಗ್ರಪ್ರತಾಪಿ’ಗಳನ್ನು ಮುಟ್ಟಿದರೆ, ಕಥೆ ಅರ್ಧ ಮುಗಿದ ಹಾಗೆಯೇ!! ಕೋಪ ಅಥವಾ ಭಯಗೊಂಡಾಗ, ಈ ಮೀನುಗಳು- ನೀವು ನಂಬಲಾರಿರಿ!- ಬರೋಬ್ಬರಿ 600 ವೋಲ್ಟ್ಗಳವರೆಗೆ ಅತ್ಯಂತ ಶಕ್ತಿಶಾಲಿಯಾದ ವಿದ್ಯುತ್ ಶಾಕ್ ನೀಡಬಲ್ಲವು!! ಮನೆಯ ಕರೆಂಟ್ ವಯರ್ ಅನಿರೀಕ್ಷಿತವಾಗಿ ತಾಗಿ, ಅದು ನೀಡುವ ಶಾಕ್‍ಗೆ ಇಡೀ ಮನೆಯ ಮಾಡಿನ ಹಂಚುಗಳೇ ಹಾರಿಹೋಗುವಂತೆ ಆರ್ತನಾದ ಮಾಡುವುದು ಇದ್ದೇ ಇದೆ! ನಮ್ಮೆಲ್ಲರ ಮನೆಯ ವಯರ್‍ಗಳಲ್ಲಿ ಹರಿಯುವ ವಿದ್ಯುತ್ ಕೇವಲ 230 ರಿಂದ 240 ವೋಲ್ಟ್ಸ್ ಮಾತ್ರವೆಂದರೆ, ಇಲೆಕ್ಟ್ರಿಕ್ ಈಲ್‍ಗಳು ಝಳಪಿಸುವ ವಿದ್ಯುತ್ ಎಷ್ಟು ದೊಡ್ಡ ಪ್ರಮಾಣದ್ದು ಎಂದು ನಮಗೆ ಸ್ಪಷ್ಟವಾಗುತ್ತದೆ! ಇಲೆಕ್ಟ್ರಿಕ್ ಈಲ್‍ಗಳು ಹೊಡೆಯುವ ವಿದ್ಯುತ್ತು, ಹತ್ತಿರತ್ತಿರ ಇಸ್ತ್ರಿ ಪೆಟ್ಟಿಗೆಗಳಂತೆ ಕಾಣುವ- ಹೃದಯಾಘಾತವಾದಾಗ ಹೃದಯದ ಡೀಫಬ್ರಿಲೇಟರ್ಗಳಲ್ಲಿ ಬಳಸುವ ವಿದ್ಯುತ್‍ನಷ್ಟು ಶಕ್ತಿಶಾಲಿ ಆಗಿರುತ್ತದೆ! ಎಲ್ಲಿಯವರೆಗೆಂದರೆ ಈ ಇಲೆಕ್ಟ್ರಿಕ್ ಈಲ್‍ಗಳ ಶಾಕ್‍ಗೆ ಎಷ್ಟೋ ಬಾರಿ ಅಮೆಜಾ಼ನ್‍ನ ದೈತ್ಯ ಮೊಸಳೆಗಳೇ ಪ್ರಜ್ಞೆ ಕಳೆದುಕೊಂಡದ್ದಿದೆ! ಇಷ್ಟಾಗುವಾಗ ನಮಗೊಂದು ಸಂಶಯ ಬರಬಹುದು!, ‘ಅಷ್ಟೊಂದು ಪ್ರಬಲ ಶಾಕ್ ಹೊಡೆಯುವಾಗ ತಾನು ಕೂಡಡ ಸ್ವತಃ ನೀರಿನೊಳಗೇ ಇರುವುದರಿಂದ ಇಲೆಕ್ಟ್ರಿಕ್ ಈಲ್‍ಗಳಿಗೆ ಶಾಕ್ ಹೊಡೆಯುವುದಿಲ್ಲವೆ?’ ಎಂದು! ಅವುಗಳ ಚರ್ಮ ಎಷ್ಟೊಂದು ದಪ್ಪವಿದೆಯೆಂದರೆ, ಅವುಗಳಿಗೆ ಸ್ವತಃ ಕರೆಂಟ್ ಶಾಕ್ ತಗುಲಲಾರದು. ಆದರೆ ಒಂದೊಮ್ಮೆ ಶಾಕ್ ಹೊಡೆಯುವ ಇಲೆಕ್ಟ್ರಿಕ್ ಈಲ್ ಗಾಯಗೊಂಡಿದೆ ಅಂದುಕೊಳ್ಳೋಣ, ಆಗ ಮಾತ್ರ ತಾನು ಹೊಡೆದ ಕರೆಂಟು ಅದಕ್ಕೇ ತಿರುಗಿ ಶಾಕ್ ನೀಡುತ್ತದೆ!!
ಇಲೆಕ್ಟ್ರಿಕ್ ಈಲ್‍ಗಳ ಇನ್ನೊಂದು ವಿಶೇಷತೆ ಅವುಗಳ ಗಾತ್ರ! ಹೇಗೆ ಇವುಗಳು ಹೊಡೆಯುವ ಕರೆಂಟ್ ಶಾಕ್ ದೊಡ್ಡ ಪ್ರಮಾಣದ್ದೋ, ಇವುಗಳ ದೇಹದ ಗಾತ್ರವೂ ಅಷ್ಟೇ ದೊಡ್ಡದು! ಸರಿಯಾಗಿ ಬೆಳೆದ ಇಲೆಕ್ಟ್ರಿಕ್ ಈಲ್‍ಗಳು ಸುಮಾರು ಆರರಿಂದ ಎಂಟು ಅಡಿಗಳವರೆಗೆ- ಎಂದರೆ ಅತ್ಯಂತ ಎತ್ತರದ ಮನುಷ್ಯನಿಗಿಂತಲೂ ಉದ್ದವಾಗಿ- ಬೆಳೆಯಬಲ್ಲವು! ಅಷ್ಟೇ ಅಲ್ಲ, ಇವುಗಳ ದೇಹದ ಭಾರವೂ ದೊಡ್ಡದು, ಸುಮಾರು ಇಪ್ಪತ್ತು ಕಿಲೋಗಳವರೆಗೆ ತೂಗುತ್ತವೆ! ಇಲೆಕ್ಟ್ರಿಕ್ ಈಲ್‍ಗಳ ಈ ಬೃಹತ್ ಗಾತ್ರದ ದೇಹದಾದ್ಯಂತ ಸುಮಾರು ಆರು ಸಾವಿರಕ್ಕೂ ಅಧಿಕ ವಿಶೇಷವಾದ ಜೀವಕೋಶಗಳಿವೆ. ಇವುಗಳನ್ನು ‘ಇಲೆಕ್ಟ್ರೋಸೈಟ್ಸ್’ ಎನ್ನುತ್ತಾರೆ. ಈ ಜೀವಕೋಶಗಳೇ ಈ ಮೀನಿನ ವಿದ್ಯುತ್ ಶಕ್ತಿಯ ಅಡುಗೆಮನೆ!! ಇವುಗಳೇ ಇಲೆಕ್ಟ್ರಿಕ್ ಈಲ್‍ಗಳ ವಿದ್ಯುತ್ ಉತ್ಪಾದನೆ ಹಾಗೂ ಶೇಖರಣೆಯ ಚಿಕ್ಕಚಿಕ್ಕ ಬ್ಯಾಟರಿಗಳು!! ಇದರಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ಇಲೆಕ್ಟ್ರಿಕ್ ಈಲ್‍ಗಳು ತಮ್ಮ ಆಹಾರ ಸಂಪಾದನೆಗೆ, ಆಪತ್ತು ಎದುರಾದಲ್ಲಿ ಶತ್ರುವಿಗೆ ‘ಹೊಗೆ ಹಾಕಿಸಲು’ ಕೂಡ ಬಳಸುತ್ತವೆ! ಇಲೆಕ್ಟ್ರಿಕ್ ಈಲ್‍ಗಳ ಮುಖ್ಯ ಆಹಾರ ಮೀನುಗಳು, ಉಭಯವಾಸಿಗಳು, ಸಣ್ಣ ಹಕ್ಕಿಗಳು ಮೊದಲಾದವು. ನೀರಿನ ಆಹಾರ ಬೇಜಾರಾದರೆ, ನೀರಿನಿಂದ ಹೊರಗೆ ಧುಮುಕಿ, ನೆಲದಲ್ಲಿರುವ ಬೇಟೆಯನ್ನೂ ತನ್ನ ವಿದ್ಯುತ್ ಶಾಕ್‍ನಿಂದ ನಿಪ್ಪಗಾಗಿಸಿ, ನೀರೊಳಗೆಳೆದುಕೊಂಡು ಹೋಗಿ ತಿನ್ನುವುದೂ ಉಂಟು!!
ಇಷ್ಟೆಲ್ಲಾ ಬೇಟೆಯಾಡಬೇಕಿದ್ದರೆ, ಇಲೆಕ್ಟ್ರಿಕ್ ಈಲ್‍ಗಳ ದೃಷ್ಟಿ ಬಹಳ ಚುರುಕಿರಬೇಕೆಂದು ನೀವೇನಾದೂ ಊಹೆ ಮಾಡಿದರೆ ಮಾತ್ರ, ವೇಗದ ಮೀನುಗಳನ್ನು, ಕ್ಷಣಮಾತ್ರದಲ್ಲಿ ಚಂಗನೆ ಜಿಗಿಯುವ ಕಪ್ಪೆಗಳನ್ನು, ರೆಕ್ಕೆ ಬೀಸಿ ಮಾಯವಾಗುವ ಹಕ್ಕಿಗಳನ್ನು ಗುರಿಯಿಟ್ಟು ಬೇಟೆಯಾಡುವ ಇಲೆಕ್ಟ್ರಿಕ್ ಈಲ್‍ಗಳಿಗೆ ಸರಿಯಾಗಿ ಕಣ್ಣೇ ಕಾಣುವುದಿಲ್ಲ!! ಅವುಗಳ ದೃಷ್ಟಿ ಅಷ್ಟೊಂದು ಮಂದ! ಹಾಗಿದ್ದೂ ಅವುಗಳು ಹೇಗೆ ತಮ್ಮ ಆಹಾರವನ್ನು ಸಂಪಾದಿಸುತ್ತವೆ?! ಉತ್ತರ ಸರಳ, ಯಾವ ವಿದ್ಯುತ್ತನ್ನು ಬಳಸಿ ತನ್ನ ಬೇಟೆಯನ್ನು ‘ಕರೆಂಟು ಹೊಡೆದ ಕಾಗೆ’ಯನ್ನಾಗಿಸುತ್ತವೋ, ಅದೇ ವಿದ್ಯುತ್ತನ್ನು –ಸಣ್ಣ ಪ್ರಮಾಣದಲ್ಲಿ- ರೇಡಾರ್ಗಳಂತೆ ಬಳಸಿ, ತಾವು ಸಂಚರಿಸಬೇಕಾದ ಮಾರ್ಗವನ್ನು ತಿಳಿಯುತ್ತವೆ! ಹಾಗೂ ಆಹಾರವನ್ನು ಪತ್ತೆ ಹಚ್ಚುತ್ತವೆ! ಒಮ್ಮೆ ಬೇಟೆ ಇರುವುದು ತಿಳಿಯಿತೋ, ಇಲೆಕ್ಟ್ರಿಕ್ ಈಲ್‍ಗಳ ಮುಂದಿನ ಕೆಲಸ ಸಲೀಸು, ಒಂದೇ ಒಂದು ಶಾಕು! ಮುಂದಿನ ಸೆಕೆಂಡ್‍ನಲ್ಲಿ ಆಹಾರ ನೀರಿನಲ್ಲಿ ‘ಡ್ಯಾನ್ಸ್’ ಮಾಡುತ್ತಿರುತ್ತದೆ; ಅರೆಕ್ಷಣದಲ್ಲಿ ಇಲೆಕ್ಟ್ರಿಕ್ ಈಲ್ನ ಬಾಯೊಯೊಳಗೆ ಮಲಗಿರುತ್ತದೆ!! ಮನುಷ್ಯರು ಈ ಮೀನಿನ ಶಾಕ್‍ನ ಆಘಾತದಿಂದ ಸಾವಿಗೀಡಾಗಿರುವು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಆದರೆ ಶಾಕ್‍ಗೆ ಒಳಗಾದ ವ್ಯಕ್ತಿ ಪ್ರಜ್ಞಾಹೀನನಾಗಿ ನೀರಿಗೆ ಬಿದ್ದು, ಉಸಿರುಕಟ್ಟಿ ಸತ್ತಿರುವ ಘಟನೆಗಳು ಮಾತ್ರ ಇದೆ!
ಹೊರನೋಟಕ್ಕೇ ಹೆದರಿಕೆಯುಂಟುಮಾಡಬಲ್ಲ, ಮುಟ್ಟಿದರೆ ನೇರ ಪರಂಧಾಮಕ್ಕೇ ಕಳುಹಿಸಬಲ್ಲ ತಾಕತ್ತಿನ ಇಲೆಕ್ಟ್ರಿಕ್ ಈಲ್‍ಗಳನ್ನು ಸಾಮಾನ್ಯವಾಗಿ ಬೇರೆ ಯಾವ ಪ್ರಾಣಿಗಳೂ ಬೇಟೆಯಾಡುವುದಿಲ್ಲ. ಇದೇ ಕಾರಣಕ್ಕೆ ಇರಬಹುದೇನೋ, ಇಲೆಕ್ಟ್ರಿಕ್ ಈಲ್‍ಗಳಿಗೆ ತಮ್ಮ ವ್ಯಾಪ್ತಿಯೊಳಗೆ ವಿಪರೀತ ಧೈರ್ಯ! ಸಾಮಾನ್ಯವಾಗಿ ಬೇರೆಲ್ಲ ಜೀವಿಗಳು “ಇವನ ಸಹವಾಸವೇ ಬೇಡ ಮರಾಯ್ರೆ” ಎಂದೆನ್ನುಕೊಳ್ಳುವ ಮನುಷ್ಯನನ್ನು ಕಂಡರು ಕೂಡ ಇವುಗಳು ಕ್ಯಾರೇ ಎನ್ನೋದಿಲ್ಲ! ಇವುಗಳನ್ನು ಹಿಡಿಯುವುದು ಅತ್ಯಂತ ಕ್ಲಿಷ್ಟಕರ! ಅವುಗಳನ್ನು ಹಿಡಿಯುವವರು ಕಂಡುಕೊಂಡ ಏಕೈಕ ಮಾರ್ಗವೆಂದರೆ, ಹಿಡಿಯಬೇಕಾದ ಇಲೆಕ್ಟ್ರಿಕ್ ಈಲ್ಅನ್ನು ಸತಾಯಿಸುವುದು. ಆಗ ಸಿಟ್ಟಿಗೇಳುವ ಇಲೆಕ್ಟ್ರಿಕ್ ಈಲ್ ತನ್ನಲ್ಲಿಯ ವಿದ್ಯುತ್ತನ್ನು ಶಾಕ್ ನೀಡಲು ಹೊರಹಾಕುತ್ತದೆ. ಆ ಶಾಕ್ ತಾಗದಂತೆ ಮೀನನ್ನು ಪದೇಪದೇ ವಿದ್ಯುತ್ ಅವಾಹಕ ವಸ್ತುಗಳಿಂದ ಮುಟ್ಟುತ್ತ, ಅದರ ದೇಹದ ಇಲೆಕ್ಟ್ರೋಸೈಟ್‍ಗಳಲ್ಲಿರುವ ಎಲ್ಲಾ ವಿದ್ಯುತ್ತನ್ನು ಖಾಲಿ ಮಾಡಿಸಿ, ಹಿಡಿಯುತ್ತಾರೆ. ಒಮ್ಮೆ ಖಾಲಿಯಾದ ವಿದ್ಯುತ್, ಮೀನಿನ ದೇಹದಲ್ಲಿ ಮತ್ತೊಮ್ಮೆ ತುಂಬಿಕೊಳ್ಳಲು ಗಂಟೆಗಳೇ ಬೇಕಾಗುತ್ತವೆ! ಈ ಅವಧಿಯೊಳಗೆ ಮೀನನ್ನು ಹಿಡಿದು ಅದನ್ನು ತಲುಪಿಸುವ ಜಾಗಕ್ಕೆ ತಲುಪಿಸಬೇಕು! ಈ ಕಾರಣದಿಂದಾಗಿ ಈ ಮೀನುಗಳನ್ನು ಪ್ರಪಂಚದ ಕೆಲವೇ ಕೆಲವು ಮೃಗಾಲಯಗಳಲ್ಲಿ, ಅಕ್ವೇರಿಯಂಗಳಲ್ಲಿ ಮಾತ್ರ ಕಾಣಬಹುದು! ಆದರೆ ಆಶ್ಚರ್ಯವಿರುವುದು ಮುಂದಿನ ವಿಚಾರದಲ್ಲಿ! ಇಷ್ಟೊಂದು ಅಪಾಯಕಾರಿಯಾದ ಮೀನನ್ನೂ ಹಿಡಿದು ತಿನ್ನುವವರಿದ್ದಾರೆ! ಅದಕ್ಕಾಗಿಯೇ ಅನೇಕ ಹೋಟೇಲುಗಳಲ್ಲಿ ಮೆನುಗಳಿವೆ! ಇಲೆಕ್ಟ್ರಿಕ್ ಈಲ್‍ಗಳ ಮಾಂಸದ ರುಚಿ ಕಂಡವರು ಅದರ ಮಾಂಸ ತುಸು ಗ್ರೀಸಿನಂತೆ ಅಂಟಾಗಿ ಸಿಹಿಯಾಗಿರುತ್ತದೆಂದರೆ, ಕೆಲವರು ಅದರ ಮಾಂಸವು ಸಾಲ್ಮನ್ ಮೀನು ಹಾಗೂ ಲಾಬ್ಸ್‍ಸ್ಟರ್‍ಗಳಿಗೆ ಅತ್ಯಂತ ಹತ್ತಿರದ ಹೋಲಿಕೆ ಇದೆಯೆಂದು ಹೇಳುತ್ತಾರೆ. ಇನ್ನು ಇದರ ಮಾಂಸ ಮುಗುಡು ಮೀನಿನಂತೆಯೇ ಇರುತ್ತದೆ ಎಂಬುದು ಕೆಲವರ ಅಂಬೋಣ! ಶಿವ ಶಿವಾ..! ಮನುಷ್ಯನೆಂಬೋ ಪ್ರಾಣಿಯ ನಾಲಗೆ ಯಾವುದನ್ನು ಬಿಟ್ಟಿದೆ ಹೇಳಿ ಮರಾಯ್ರೇ?!!