ಸಿ.ಟಿ.ರವಿ ಹರಕಲು ಬಾಯಿ ಸಂಸ್ಕೃತಿ ಇದೇ ಮೊದಲಲ್ಲ: DK Shivakumar

dk (38)
Published on

ಬೆಳಗಾವಿ: ಸಿ.ಟಿ. ರವಿ ಅವರ ಹರಕಲು ಬಾಯಿ ಸಂಸ್ಕೃತಿ ಇದೇ ಮೊದಲಲ್ಲ. ಅವರು ಈ ಹಿಂದೆ ಸಿದ್ದರಾಮಯ್ಯ ಸೇರಿದಂತೆ

ಯಾರ ಬಗ್ಗೆ ಏನೆಲ್ಲಾ ಪದ ಪ್ರಯೋಗ ಮಾಡಿದ್ದಾರೆ ಎಂಬುದು ಗೊತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್(DK Shivakumar )ಹೇಳಿದರು.

ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ಶುಕ್ರವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

ಈ ಹಿಂದೆ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದಿದ್ದರು. ಹೀಗೆ ನಮ್ಮ ನಾಯಕರ ವಿರುದ್ಧ ಬಹಳ ಕೀಳು ಮಟ್ಟದ ಪದ ಬಳಕೆ ಮಾಡಿದ್ದಾರೆ. ಇದು ಚಿಕ್ಕಮಗಳೂರು ಸಂಸ್ಕೃತಿಯೇ? ಭಾರತದ ಸಂಸ್ಕೃತಿಯೇ? ಬಿಜೆಪಿ ಸಂಸ್ಕೃತಿಯೇ? ಚಿಕ್ಕಮಗಳೂರಿನಲ್ಲಿ ಇಂತಹ ಸಂಸ್ಕೃತಿಯನ್ನು ನಾನು ಈವರೆಗೂ ನೋಡಿಲ್ಲ. ಇಡೀ ಚಿಕ್ಕಮಗಳೂರಿನಲ್ಲಿ ಇವನೊಬ್ಬನೇ ಇಷ್ಟು ಕೀಳು ಮಟ್ಟದ ಸಂಸ್ಕೃತಿ ಹೊಂದಿರುವ ವ್ಯಕ್ತಿ ಎಂದು ಕಿಡಿಕಾರಿದರು.

ಸದನದಲ್ಲಿ ಅಂಬೇಡ್ಕರ್ ಅವರಿಗೆ ಕೇಂದ್ರ ಗೃಹಸಚಿವರು ಅಪಮಾನ ಮಾಡಿದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಈತ ರಾಹುಲ್ ಗಾಂಧಿ ಅವರನ್ನು ಮಾದಕ ವ್ಯಸನಿ ಎಂದು ನಿಂದಿಸಿದ್ದರು. ಹೀಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಪಕ್ಷದ ನಾಯಕನ ಸಮರ್ಥನೆಗೆ ಮುಂದಾದಾಗ, ಆತ ನಮ್ಮ ಸಚಿವರನ್ನು ಹಲವು ಬಾರಿ ಪ್ರೋಸ್ಟಿ** ಎಂದು ಕರೆದಿದ್ದಾನೆ. ಬಿಜೆಪಿಯವರು ತಮ್ಮ ನಾಯಕನನ್ನು ಹೇಗೆ ಸಮರ್ಥನೆ ಮಾಡಿಕೊಂಡರೋ ಅದೇ ರೀತಿ ನಮ್ಮ ಸಚಿವರು ನಮ್ಮ ನಾಯಕರನ್ನು ಸಮರ್ಥನೆ ಮಾಡಿಕೊಳ್ಳುವುದು ತಪ್ಪೇ? ಅದಕ್ಕಾಗಿ ಇಂತಹ ಪದ ಬಳಸುವುದೇ? ಎಂದು ಪ್ರಶ್ನಿಸಿದರು.

ಒಟ್ಟು 12 ಬಾರಿ ಈ ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ. ಮಾಧ್ಯಮಗಳು ಈ ಎಲ್ಲಾ ಅಂಶಗಳನ್ನು ಸೇರಿ ಸುದ್ದಿ ಪ್ರಕಟಿಸಬೇಕು. ನಿಮ್ಮ ಬಳಿ ದಾಖಲೆ ಇಲ್ಲವಾದರೆ ಹೇಳಿ ನಾನು ನೀಡುತ್ತೇನೆ ಎಂದು ತಿಳಿಸಿದರು.

ಪರಿಷತ್ತಿನಲ್ಲಿ ಗುರುವಾರದಂದು ನನ್ನ ಇಲಾಖೆಗಳಿಗೆ ಸಂಬಂಧಿಸಿದ 12 ಪ್ರಶ್ನೆಗಳಿದ್ದವು. ಅವುಗಳಿಗೆ ಉತ್ತರ ನೀಡಿ ನಾನು ವಿಧಾನಸಭೆಗೆ ಬಂದಾಗ ಈ ಘಟನೆ ನಡೆದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net