

JD Vance: ಭಾರತ ಪಾಕಿಸ್ತಾನ ಯುದ್ಧ: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಮತ್ತಷ್ಟು ತೀವ್ರವಾಗಿದೆ. ಭಯೋತ್ಪಾದಕರ ಗುಂಪುಗಳನ್ನು ಪೋಷಿಸುತ್ತಿರುವ ಪಾಕಿಸ್ತಾನವು ದುಸ್ಸಾಹಸಕ್ಕೆ ಕೈಹಾಕಿದ್ದು, ಕ್ಷಿಪಣಿ ಮತ್ತು ಆತ್ಮಾಹುತಿ ಡ್ರೋನ್ಗಳನ್ನು ಭಾರತದ ಮೇಲೆ ಪ್ರತೀಕಾರವಾಗಿ ಪ್ರಯೋಗಿಸುತ್ತಿದೆ. ಗುರುವಾರ ರಾತ್ರಿ (ಮೇ.08) ನಮ್ಮ ದೇಶದ ವಿರುದ್ಧ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಫೈಟರ್ ಜೆಟ್‌ಗಳನ್ನು ಉಡಾಯಿಸಿರುವ ಪಾಕ್, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ ಮತ್ತು ಪಂಜಾಬ್‌ನ ಗಡಿ ರಾಜ್ಯಗಳ ನಾಗರಿಕರನ್ನೇ ಟಾರ್ಗೆಟ್ ಮಾಡಿ ದಾಳಿ ನಡೆಸಿದೆ.
ಆದಾಗ್ಯೂ, ಭಾರತವು ಪಾಕಿಸ್ತಾನ ಸೇನೆಯ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ. ಪಾಕ್ನ ಎಂಟು ಡ್ರೋನ್ ಮತ್ತು ಮೂರು ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿರುವ ಭಾರತೀಯ ಸೇನೆ, ಮತ್ತೊಂದೆಡೆ, ಪಾಕಿಸ್ತಾನಿ ಪೈಲಟ್ ಅನ್ನು ವಶಕ್ಕೆ ಪಡೆದಿದೆ. ಪಾಕಿಸ್ತಾನ ಸೇನೆಯ ಪ್ರಚೋದನಕಾರಿ ಕ್ರಮಗಳಿಂದಾಗಿ ಸದ್ಯ ಭಾರತ ಸರ್ಕಾರವು ದೇಶದ ಹಲವಾರು ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಿದೆ.
ದೇವಾಲಯಗಳು ಸೇರಿದಂತೆ ಹಲವೆಡೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ದೆಹಲಿಯ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಸಂಚಾರವನ್ನು ನಿಷೇಧಿಸಲಾಗಿದೆ. ಜಮ್ಮು- ಕಾಶ್ಮೀರ ಮತ್ತು ಪಂಜಾಬ್ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ದೇಶಾದ್ಯಂತ ಒಟ್ಟು 27 ವಿಮಾನ ನಿಲ್ದಾಣಗಳನ್ನು ಈಗಾಗಲೇ ಬಂದ್ ಮಾಡಲಾಗಿದೆ. ಇದರೊಟ್ಟಿಗೆ ದೆಹಲಿಯಲ್ಲಿ 90ಕ್ಕೂ ಹೆಚ್ಚು ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಈ ಎಲ್ಲ ಬೆಳವಣಿಗೆಯ ಮಧ್ಯೆ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತ-ಪಾಕ್ ದಾಳಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮಾತನಾಡಿದ ಜೆ.ಡಿ. ವ್ಯಾನ್ಸ್, "ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಕುರಿತು ಅಮೆರಿಕ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಎರಡು ಪರಮಾಣು ಶಕ್ತಿಗಳ ನಡುವಿನ ಯುದ್ಧದಲ್ಲಿ ಅಮೆರಿಕ ಮಧ್ಯಪ್ರವೇಶಿಸುವ ಮಾತಿಲ್ಲ. ಪರಮಾಣು ಶಕ್ತಿಗಳು ಘರ್ಷಣೆಯ ಬಗ್ಗೆ ನಮಗೆ ಕಳವಳವಿದೆ. ಈ ಉದ್ವಿಗ್ನತೆಗಳು ಆದಷ್ಟು ಬೇಗ ಇತ್ಯರ್ಥವಾಗಲಿ ಎಂದು ನಾವು ಬಯಸುತ್ತೇವೆ. ಈ ದೇಶಗಳನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ" ಎಂದರು.
"ಇತ್ತ ಭಾರತವು ಪಾಕಿಸ್ತಾನದ ವಿರುದ್ಧ ದೂರುಗಳನ್ನು ಹೊಂದಿದ್ದರೆ, ಅತ್ತ ಪಾಕಿಸ್ತಾನವು ಭಾರತದ ವಿರುದ್ಧ ದೂರುಗಳನ್ನು ಹೊಂದಿದೆ. ಈ ಎರಡೂ ದೇಶಗಳು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಅಮೆರಿಕ ಕೇಳಿಲ್ಲ. ರಾಜತಾಂತ್ರಿಕ ಮಾರ್ಗಗಳ ಮೂಲಕ ಈ ಸಮಸ್ಯೆಯನ್ನು ಪರಿಹರಿಸುವುದು ಏಕೈಕ ಮಾರ್ಗ ಹಾಗೂ ಆಯ್ಕೆಯಾಗಿದೆ" ಎಂದು ತಿಳಿಸಿದರು,(ಏಜೆನ್ಸೀಸ್).