

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಹಿರಿಯ ನಟ ಬಾಲಯ್ಯ ಎಂದೇ ಖ್ಯಾತರಾಗಿರುವ ನಟಸಿಂಹ ನಂದಮೂರಿ ಬಾಲಕೃಷ್ಣ ಅಭಿನಯದ ಸೂಪರ್ ಹಿಟ್ ಚಿತ್ರವೊಂದು ಇದೀಗ ಚಿತ್ರಮಂದಿರದಲ್ಲಿ ಮರು ಬಿಡುಗಡೆಯಾಗುವ ಮುಖೇನ ಮತ್ತೊಮ್ಮೆ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಜ್ಜಾಗಿದೆ.
ಹೆಸರಾಂತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ರಚಿಸಿ, ನಿರ್ದೇಶನದ 1994ರ ಬ್ಲಾಕ್‌ಬಸ್ಟರ್ 'ಭೈರವ ದ್ವೀಪಂ' ಚಿತ್ರವನ್ನು ಈ ಹಿಂದೆಯೇ ಆಗಸ್ಟ್ 5, 2023 ರಂದು 4K ಸ್ವರೂಪದಲ್ಲಿ ಮರು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿತ್ತು. ಆದ್ರೆ, ಅನಿರೀಕ್ಷಿತ ಸಮಸ್ಯೆಗಳಿಂದಾಗಿ, ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಹೊಸ ಡೇಟ್ ಬಗ್ಗೆ ಚಿತ್ರ ತಯಾರಕರು ಅಧಿಕೃತವಾಗಿ ದೃಢಪಡಿಸಿದ್ದು, ಸಿನಿಮಾವನ್ನು ಆಗಸ್ಟ್ 30, 2023 ರಂದು ರಿ- ರಿಲೀಸ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
4K ಗುಣಮಟ್ಟದೊಂದಿಗೆ ಮೂಡಿಬರಲು ಸಜ್ಜಾಗಿರುವ ಕ್ಲಾಸಿಕ್ ಸಿನಿಮಾ 'ಭೈರವ ದ್ವೀಪಂ' ರಿ-ರಿಲೀಸ್ ಆಗಲಿರುವ ಸುದ್ದಿ ಇದೀಗ ಬಾಲಯ್ಯ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ. ಚಿತ್ರದಲ್ಲಿ ರೋಜಾ ಮತ್ತು ಕೆ.ಆರ್. ವಿಜಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೈಕಲಾ ಸತ್ಯನಾರಾಯಣ, ವಿಜಯಕುಮಾರ್, ರಂಭಾ, ವಿಜಯ ರಂಗರಾಜು, ಶುಭಲೇಖಾ ಸುಧಾಕರ್, ಗಿರಿ ಬಾಬು, ಬಾಬು ಮೋಹನ್, ಮತ್ತಿತರರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಂದಮಾಮ ವಿಜಯ ಕಂಬೈನ್ಸ್‌ನ ಬಿ. ವೆಂಕಟರಾಮಿ ರೆಡ್ಡಿ ನಿರ್ಮಿಸಿದ ಈ ಸಿನಿಮಾ, ಬರೋಬ್ಬರಿ 9 ನಂದಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಅತ್ಯಧಿಕ ಯಶಸ್ಸನ್ನು ಗಳಿಸಿದ ಭೈರವ ದ್ವೀಪಂ, ಚಿತ್ರರಸಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಈಗ ಮತ್ತೊಮ್ಮೆ ರಿಲೀಸ್ ಆಗುವ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿರುವುದು ಬಾಲಯ್ಯ ಅಭಿಮಾನಿಗಳಿಗೆ ಸಂತಸ ತಂದಿದೆ.
ಸದ್ಯ ಅನಿಲ್ ರವಿಪುಡಿ ನಿರ್ದೇಶನದ 'ಭಗವಂತ ಕೇಸರಿ' ಚಿತ್ರವು ಅಕ್ಟೋಬರ್ 19, 2023 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಬಾಲಯ್ಯ ಮತ್ತು ನಟಿ ಕಾಜಲ್ ಅಗರ್ವಾಲ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ರಿಲೀಸ್ಗಾಗಿ ಪ್ರೇಕ್ಷಕರು ಮತ್ತು ನಟನ ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ,(ಏಜೆನ್ಸೀಸ್).