

ಮುಂಬೈ: ಹಾಡಹಗಲಲ್ಲೇ ನಡುರಸ್ತೆಯಲ್ಲಿ ವೃದ್ಧದಂಪತಿಯನ್ನು ಯಾಮಾರಿಸಿ ಕಳ್ಳತನ ಮಾಡಿರುವ ಖತರ್ನಾಕ್ ಖದೀಮನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಪುಣೆಯಲ್ಲಿ ಎನ್ನಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ದಿನವಿಡಿ ಹೊರಗಿದ್ದ ವೃದ್ಧದಂಪತಿ ಫಾಸ್ಟ್ಫುಡ್ ಸವಿಯಲು ತೀರ್ಮಾನಿಸಿ ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸುತ್ತಾರೆ. ಬಳಿಕ ಮಹಿಳೆ ಅಲ್ಲೇ ನಿಂತು ಅವರ ಪತಿ ಫಾಸ್ಟ್ಫುಡ್ ಖರೀದಿಸಲು ಅಂಗಡಿಗೆ ಹೋಗುತ್ತಾರೆ. ಅಲ್ಲೆ ನಿಂತಿದ್ದ ಮಹಿಳೆ ಕೆಳಗೆ ಬಿದ್ದ ವಸ್ತುವೊಂದನ್ನು ತೆಗೆದುಕೊಳ್ಳಲು ಬಾಗುತ್ತಾರೆ. ತಕ್ಷಣ ಅಲ್ಲಿದ್ದ ವ್ಯಕ್ತಿಯೊಬ್ಬ ಸ್ಕೂಟರ್ನಲ್ಲಿ ಇಟ್ಟಿದ್ದ ಬ್ಯಾಗ್ ಅನ್ನು ಕದ್ದು ಪರಾರಿಯಾಗುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದಾಗಿದೆ.
ಆ ಬ್ಯಾಗ್ನಲ್ಲಿ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಇತ್ತು ಎನ್ನಲಾಗಿದೆ. ಬ್ಯಾಗ್ ಕದ್ದದ್ದನ್ನು ಕಂಡ ಮಹಿಳೆ ಆತನ ಹಿಂದೆ ಓಡುತ್ತಾರೆ ಹಾಗೂ ಸಹಾಯ ಮಾಡುವಂತೆ ಕಿರುಚುತ್ತಾರೆ. ಆಕೆಯ ಪತಿ ಅಂಗಡಿಯಿಂದ ವಾಪಸಾಗುತ್ತಾರೆ ಜತೆಗೆ ಸುತ್ತಮುತ್ತಲಿನವರೆಲ್ಲಾ ಅಲ್ಲಿ ಸೇರುವುದನ್ನು ವಿಡಿಯೋದಲ್ಲಿ ನೋಡಬಹುದು.
ಬ್ಯಾಗ್ನಲ್ಲಿ ಬ್ಯಾಂಕ್ ದಾಖಲೆಗಳು ಮತ್ತು ಅವರ ಮೊಬೈಲ್ ಫೋನ್ ಕೂಡ ಇತ್ತು. ದಂಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಕೊಂಡು ತನಿಖೆ ಆರಂಭಿಸಿದ್ದಾರೆ. ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅದಕ್ಕೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕಳ್ಳನ ಕುತಂತ್ರವನ್ನು ಕೆಲವು ಟೀಕಿಸಿದರೆ, ಆ ಕಳ್ಳ ಅವರನ್ನು ಬ್ಯಾಂಕ್ನಿಂದಲೇ ಹಿಂಬಾಲಿಸಿ ಬಂದಿದ್ದಾನೆ, ಇದು ಆ ದಂಪತಿಯ ನಿರ್ಲಕ್ಷ್ಯ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ರಸ್ತೆಬದಿಯಲ್ಲಿ ಬೈಕ್ ನಿಲ್ಲಿಸಿ ತಾಯಿಯೊಂದಿಗೆ ಮಾತನಾಡುತ್ತಿದ್ದ ಮಗನನ್ನು ಹಗಲಲ್ಲೆ ಹತ್ಯೆ ಮಾಡಲು ಯತ್ನಿಸಿದ ವಿಡಿಯೋವೊಂದು ವೈರಲ್ ಆಗಿತ್ತು. ಯಾವುದೇ ಭಯವಿಲ್ಲದೆ ನಡುರಸ್ತೆಯಲ್ಲಿ ಅದರಲ್ಲೂ ಹಗಲಿನ ಹೊತ್ತಿನಲ್ಲಿಯೇ ಹತ್ಯೆ ಮಾಡಲು ಯತ್ನಿಸುವುದು ಹಾಗೂ ಕಳ್ಳತನ ಮಾಡುವುದು ನೋಡಿದರೆ ಯಾವ ರೀತಿ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಆತಂಕವಾಗುತ್ತದೆ. ಈ ವೈರಲ್ ವಿಡಿಯೋಗಳನ್ನು ನೋಡಿ ನಾವೆಷ್ಟು ಎಚ್ಚರದಿಂದಿರಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. (ಏಜೆನ್ಸೀಸ್)