ನಗ್ನ ಚಿತ್ರಕ್ಕಾಗಿ ಕ್ಯಾರವಾನ್​ನಲ್ಲಿ ಹಿಡನ್​ ಕ್ಯಾಮೆರಾ ಅಳವಡಿಸಿದ್ರು; ಸ್ಫೋಟಕ ವಿಚಾರ ಬಿಚ್ಚಿಟ್ಟ ಜನಪ್ರಿಯ ನಟಿ

Untitled-design-12-2
Published on

ಚೆನ್ನೈ: ಹೇಮಾ ಸಮಿತಿಯ ವರದಿ ಬಂದ ಬಳಿಕ ದಕ್ಷಿಣ ಚಿತ್ರರಂಗದಲ್ಲಿ ನಟಿಯರು ಸಿನಿಮಾ ಸೆಟ್​ಗಳಲ್ಲಿ ತಾವು ಅನುಭವಿಸಿದ ಲೈಂಗಿಕ ದೌರ್ಜನ್ಯದ ಅಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸೌತ್​ನ ಜನಪ್ರಿಯ ನಟಿ ರಾಧಿಕಾ ಶರತ್​ ಕುಮಾರ್​ ಸ್ಫೋಟಕ ಮಾಹಿತಿಯೊಂದನ್ನು ನೀಡಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ರಾಧಿಕಾ ಶರತ್​ ಕುಮಾರ್​​​​​, ಮಲಯಾಳಂ ಸಿನಿಮಾ ಸೆಟ್​ನಲ್ಲಿ ತಾವು ಎದುರಿಸಿದ ಸಮಸ್ಯೆಯೊಂದನ್ನು ಹೇಳಿದರು. ನಟಿಯರ ನಗ್ನ ದೃಶ್ಯಗಳನ್ನು ರೆಕಾರ್ಡ್​ ಮಾಡಲು ಕ್ಯಾರವಾನ್​ಗಳಲ್ಲಿ ಹಿಡನ್​ ಕ್ಯಾಮೆರಾ ಅಳವಡಿಸಿದ್ದರು. ರೆಕಾರ್ಡ್​ ಆದ ದೃಶ್ಯಗಳನ್ನು ಸಿನಿಮಾ ಸೆಟ್​ನಲ್ಲಿಯೇ ಕುಳಿತು ಪುರುಷರು ವೀಕ್ಷಿಸಿ ಆನಂದಿಸುತ್ತಿದ್ದರು ಎಂದು ತಿಳಿಸಿದರು.

ಅಲ್ಲದೆ ಕ್ಯಾರವಾನ್​​ನಲ್ಲಿ ಹಿಡನ್​ ಕ್ಯಾಮೆರಾ ಅಳವಡಿಸಿರುವುದು ತಿಳಿದ ಬಳಿಕ ನಾನು ಆ ಸೌಲಭ್ಯವನ್ನು ಎಂದು ಬಳಸಲಿಲ್ಲ. ಬಟ್ಟೆ ಬದಲಾಯಿಸಲು ನಾನು ಇರುತ್ತಿದ್ದ ಹೊಟೇಲ್​ ರೂಮಿಗೆ ಹೋಗಿ ಬದಲಾಯಿಸಿದೆ. ಹಿಡನ್​ ಕ್ಯಾಮೆರಾದಿಂದ ನಟಿಯರಿಗೆ ಅರಿವಿಲ್ಲದೆ ಅವರ ನಗ್ನ ದೃಶ್ಯಗಳನ್ನು ರೆಕಾರ್ಡ್​​ ಮಾಡಿರುತ್ತಾರೆ. ಹಿಡನ್​ ಕ್ಯಾಮೆರಾ ಅಳವಡಿಸಿದ ಪುರುಷರ ಮೊಬೈಲ್​ಗಳಲ್ಲಿ ನಟಿಯರ ಅಂತಹ ದೃಶ್ಯಗಳನ್ನು ಪ್ರತ್ಯೇಕ ಫೋಲ್ಡರ್​​ಗಳಲ್ಲಿ ಉಳಿಸಲಾಗುತ್ತದೆ. ಸೆಟ್​ನಲ್ಲಿ ಒಂದೇ ಮೊಬೈಲ್​ ಉಪಯೋಗಿಸುವುದನ್ನು ನಾನು ನೋಡಿದ್ದೇನೆ ಎಂದು ರಾಧಿಕಾ ಹೇಳಿದರು. ಅಲ್ಲದೆ ಮಲಯಾಳಂ ಚಿತ್ರರಂಗದಲ್ಲಿ ವಿವಿಧ ನಟಿಯರ ಹೋಟೆಲ್​ ರೂಮ್​ಗಳ ಬಾಗಿಲನ್ನು ಇತರ ವ್ಯಕ್ತಿಗಳು ಹೇಗೆ ಬಡಿಯುತ್ತಾರೆ ಎಂಬುದನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಜತೆಗೆ ಸಹಾಯ ಮಾಡುವಂತೆ ನನ್ನನ್ನು ಕೇಳಿದ್ದರು ಎಂದು ಸಂದರ್ಶನದ ವೇಳೆ ನೆನಪಿಸಿಕೊಂಡಿದ್ದಾರೆ.

ಹೇಮಾ ಸಮಿತಿಯ ವರದಿಯ ನಂತರ ನಟಿಯರು ತಮಗಾದ ಲೈಂಗಿಕ ದೌರ್ಜನ್ಯದ ವಿರುದ್ಧ ನೀಡಿರುವ ದೂರಿನ ಆಧಾರದ ಮೇಲೆ ಮಲಯಾಳಂನ ಜನಪ್ರಿಯ ನಟರಾದ ಮುಕೇಶ್, ಸಿದ್ದಿಕ್, ಜಯಸೂರ್ಯ, ಸುಧೀಶ್, ಎಡವೇಲ ಬಾಬು ಮತ್ತು ಮಣಿಯನ್ಪಿಳ್ಳ ರಾಜು, ಮಲಯಾಳಂ ನಿರ್ದೇಶಕರಾದ ರಂಜಿತ್ ಮತ್ತು ವಿಕೆ ಪ್ರಕಾಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಹೇಮಾ ಸಮಿತಿಯ ವರದಿಯನ್ನು ಬಹಿರಂಗಗೊಳಿಸಿದ ನಂತರ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ತಮ್ಮ ಸ್ಥಾನಕ್ಕೆ ನಟ ಮೋಹನ್ ಲಾಲ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರೆ. ಇತರ ಸದಸ್ಯರು ಜಂಟಿಯಾಗಿ ರಾಜೀನಾಮೆ ಸಲ್ಲಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net