'ಪತಿಯ ಕೊಂದ ಅಪ್ಪ-ಅಮ್ಮನಿಗೆ ಘೋರ ಶಿಕ್ಷೆಯಾಗುವವರೆಗೂ ವಿರಮಿಸಲಾರೆ'

maryada hatye
Published on

ಕೊಯಮತ್ತೂರು: ಬೇರೆ ಜಾತಿ ಎನ್ನುವ ಕಾರಣಕ್ಕೆ ಹತ್ಯೆಗೊಳಗಾದ ತನ್ನ ಪತಿಯ ಆತ್ಮಕ್ಕೆ ಶಾಂತಿ ಸಿಗುವವರೆಗೂ ನಾನು ವಿರಮಿಸಲಾರೆ. ಅವರನ್ನು ಕೊಂದ ನನ್ನ ತಂದೆ-ತಾಯಿಗೆ ಕಠಿಣ ಶಿಕ್ಷೆಯಾಗುವವರೆಗೂ ನಾನು ಹೋರಾಡುವೆ ಎಂದು ಕೌಸಲ್ಯ ಎಂಬ ಯುವತಿ ಶಪಥ ಮಾಡಿದ್ದಾಳೆ.

ಕೊಯಮತ್ತೂರಿನ ಉಡುಮಲ್​ಪೇಟ್​ ನಿವಾಸಿಯಾಗಿರುವ ಕೌಸಲ್ಯ, ಈ ಕುರಿತು ತನ್ನ ಫೇಸ್​ಬುಕ್​ನಲ್ಲಿ ಆಕೆ ಬರೆದುಕೊಂಡಿದ್ದಾಳೆ. ಕೆಳಹಂತದ ಕೋರ್ಟ್​ನಲ್ಲಿ ಗಲ್ಲುಶಿಕ್ಷೆಗೆ ಒಳಗಾಗಿದ್ದ ತಂದೆಯನ್ನು ಮದ್ರಾಸ್​ ಹೈಕೋರ್ಟ್​ ಬಿಡುಗಡೆ ಮಾಡಿದ್ದರೆ, ಈಕೆಯ ತಾಯಿ ಅನ್ನಲಕ್ಷ್ಮಿ ಅವರನ್ನು ಕೆಳಹಂತದ ಕೋರ್ಟೇ ಖುಲಾಸೆಗೊಳಿಸಿದೆ. ಈ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾ ಮಾಡಿದೆ.

ಇದರಿಂದ ಸಂತ್ರಸ್ತೆ ಕೌಸಲ್ಯ ಅಪಾರವಾಗಿ ನೊಂದುಕೊಂಡಿದ್ದಾಳೆ. ತನ್ನ ಪತಿಯ ಕೊಲೆಗೆ ಅಮ್ಮ-ಅಪ್ಪನೇ ಕಾರಣವಾಗಿದ್ದು, ಅವರಿಗೆ ಶಿಕ್ಷೆ ಆಗಬೇಕಿದೆ. ನನಗೆ ಇನ್ನೂ ನ್ಯಾಯಾಂಗದ ಬಗ್ಗೆ ನಂಬಿಕೆ ಇದೆ. ಹೈಕೋರ್ಟ್​ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್​ಗೆ ಹೋಗುವೆ ಎಂದಿದ್ದಾಲೆ.

ಈ ಪ್ರಕರಣದಲ್ಲಿ ಸರ್ಕಾರದ ಪರ ವಕೀಲರು ಸರಿಯಾಗಿ ವಾದ ಮಂಡಿಸಲಿಲ್ಲ. ಪ್ರಕರಣದ ಬಗ್ಗೆ ಸರ್ಕಾರ ಯಾವುದೇ ಆಸಕ್ತಿ ತೋರಲಿಲ್ಲ.

ಕೆಳಹಂತದ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ ನನ್ನ ಬಳಿ ವಿಷಯ ಕಲೆ ಹಾಕಿದ್ದರೇ ವಿನಾ ಹೈಕೋರ್ಟ್​ನಲ್ಲಿ ಬಂದಾಗ ಈ ಪ್ರಕರಣದ ಬಗ್ಗೆ ಯಾರೂ ಅಷ್ಟು ಆಸಕ್ತಿ ತೋರಲಿಲ್ಲ. ಹಾಗೆಂದು ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಕಾನೂನು ಹೋರಾಟ ಮುಂದುವರೆಸುತ್ತೇನೆ. ತಂದೆ-ತಾಯಿಗೆ ಶಿಕ್ಷೆ ಕೊಡಿಸುತ್ತೇನೆ ಎಂದು ಕೌಸಲ್ಯ ಹೇಳಿದ್ದಾಳೆ.

ಕೌಸಲ್ಯ 2015ರಲ್ಲಿ ಶಂಕರ್ ಅವರನ್ನು ವಿವಾಹವಾಗಿದ್ದಳು. ತೇವರ್ ಸಮುದಾಯಕ್ಕೆ ಸೇರಿದ ಕೌಸಲ್ಯ, ದಲಿತ ಸಮುದಾಯದ ಶಂಕರ್​ನನ್ನು ಮದುವೆಯಾಗಿದ್ದಕ್ಕೆ ಪಾಲಕರ ವಿರೋಧವಿತ್ತು. 2016ರ ಮಾರ್ಚ್ 13 ರಂದು ಗುಂಪೊಂದು ಶಂಕರ್​ನನ್ನು ಬರ್ಬರವಾಗಿ ಹತ್ಯೆ ಮಾಡಿತು. ಈ ಸಂದರ್ಭದಲ್ಲಿ ಕೌಸಲ್ಯ ಕೂಡ ಗಾಯಗೊಂಡಿದ್ದಳು.

ಪೊಲೀಸರು ಕೇಸು ದಾಖಲಿಸಿದ್ದರು. ಕೋರ್ಟ್​ನಲ್ಲಿ ವಿಚಾರಣೆ ವೇಳೆ ತಂದೆ-ತಾಯಿ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳು ಇಲ್ಲ ಎಂಬ ಕಾರಣಕ್ಕೆ ಖುಲಾಸೆ ಮಾಡಲಾಗಿದೆ. ಗಲ್ಲುಶಿಕ್ಷೆಗೆ ಒಳಗಾಗಿದ್ದ ಇತರ ಐವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net