ಕಷ್ಟಕಾಲದಲ್ಲಿ ಜೊತೆಗಿದ್ದ ವ್ಯಕ್ತಿ ಇವರು! ಮುಂಬೈ ಇಂಡಿಯನ್ಸ್​ ಸ್ಟಾರ್ ಆಟಗಾರನ ಸಹಾಯ ನೆನೆದ ಶತಕವೀರ | Abhishek Sharma

ವಿಜಯವಾಣಿ - 2025-04-13T160138.006
Published on

Abhishek Sharma: ನಿನ್ನೆ (ಏಪ್ರಿಲ್​ 12) ರಾತ್ರಿ ಹೈದರಾಬಾದ್​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮ, ತಮ್ಮ ಬ್ಯಾಟಿಂಗ್​ ಮೂಲಕ ಅಬ್ಬರಿಸಿದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್​ಗಳ ಸುರಿಮಳೆಗೈದರು. ಕೇವಲ 40 ಎಸೆತಗಳಲ್ಲಿ ಶತಕ ಗಳಿಸಿದ ಅಭಿಶೇಕ್​, ಒಟ್ಟು 55 ಎಸೆತಗಳನ್ನು ಎದುರಿಸಿ 14 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಾಯದಿಂದ 141 ರನ್ ಗಳಿಸಿ ಐಪಿಎಲ್​ನಲ್ಲಿ ತಮ್ಮ ಹೆಸರಿಗೆ ದಾಖಲೆಯನ್ನು ಸೇರ್ಪಡೆಗೊಳಿಸಿದರು.

ಐಪಿಎಲ್​ ಇತಿಹಾಸದಲ್ಲಿ ಐದನೇ ಅತಿ ವೇಗದ ಶತಕ ದಾಖಲಿಸಿದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅಭಿಷೇಕ್​, ತಮ್ಮ ತಂಡದ ಮಾಲೀಕರಾದ ಕಾವ್ಯ ಮಾರನ್​, ಪೋಷಕರು ಮತ್ತು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳಿಂದ ಮೆಚ್ಚುಗೆಗಳ ಮಹಾಪೂರವನ್ನೇ ಸ್ವೀಕರಿಸಿದರು. ಇನ್ನು ಪಂದ್ಯ ಮುಗಿದ ಬಳಿಕ ತನ್ನ ಸಂತಸವನ್ನು ಮಾತಿನಲ್ಲಿ ಹಂಚಿಕೊಂಡ ಅಭಿಷೇಕ್​, "ಕಳೆದ ನಾಲ್ಕು ದಿನಗಳಿಂದ ವಿಪರೀತ ಜ್ವರ ನನ್ನನ್ನು ಕಾಡುತ್ತಿತ್ತು. ಈ ಸಮಯದಲ್ಲಿ ನನಗೆ ಯುವರಾಜ್ ಸಿಂಗ್ ಮತ್ತು ಎಂಐ ಬ್ಯಾಟರ್​ ಸೂರ್ಯಕುಮಾರ್ ಯಾದವ್​ ಪ್ರೋತ್ಸಾಹದ ಮಾತುಗಳನ್ನು ತುಂಬಿದರು" ಎಂದರು.

"ನಿಜ ಹೇಳಬೇಕೆಂದರೆ, ಕಳೆದ ನಾಲ್ಕು ದಿನಗಳಿಂದ ನಾನು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೆ. ನನಗೆ ಜ್ವರವಿತ್ತು. ಆಗ ಯುವರಾಜ್ ಸಿಂಗ್ ಮತ್ತು ಸೂರ್ಯಕುಮಾರ್ ಯಾದವ್ ನನಗೆ ಉತ್ತಮ ಪ್ರೋತ್ಸಾಹ ನೀಡಿದರು. ಆಗಾಗ್ಗೆ ಫೋನ್​ ಮಾಡುತ್ತಲೇ ಇದ್ದರು. ನಾನು ಹೇಗಿದ್ದೀನಿ ಎಂದು ಪರಿಶೀಲಿಸುತ್ತಲೇ ಇದ್ದರು. ಇವರಿಬ್ಬರು ನನ್ನ ಮೇಲೆ ಭಾರೀ ನಂಬಿಕೆ ಇಟ್ಟಿದ್ದಾರೆ" ಎಂದರು.

"ಹಲವೊಮ್ಮೆ ನನ್ನ ಮೇಲೆಯೇ ನನಗೆ ಅನುಮಾನ ಮೂಡಿದೆ. ಆದರೆ, ಈ ಇಬ್ಬರು ಮಾತ್ರ ಎಂದಿಗೂ ನನ್ನ ಮೇಲೆ ಅನುಮಾನ ತೋರಿಲ್ಲ. ಅವರು ಹಾಗೆ ಮಾಡಿದಿದ್ದರೆ ಖಂಡಿತ ನಾನು ಕುಗ್ಗುತ್ತಿದ್ದೆ. ಈ ನಂಬಿಕೆ, ಪ್ರೀತಿ ತುಂಬಾ ಮುಖ್ಯವಾದದ್ದು. ಈ ರೀತಿ ಯಾರಾದರೂ ನಿಮ್ಮಲ್ಲಿ ನಂಬಿಕೆಯಿಟ್ಟಾಗ, ನಿಮಗೆ ನಿಮ್ಮ ಮೇಲೆ ನಂಬಿಕೆ ಇನ್ನಷ್ಟು ಗಟ್ಟಿಯಾಗುತ್ತದೆ. ಅಸಲಿಗೆ ಈ ಒಂದು ಇನ್ನಿಂಗ್ಸ್​ಗಾಗಿ ಕಾಯುತ್ತಿದ್ದೆ. ಅದು ಇಂದಿನ ಪಂದ್ಯದಲ್ಲಿ ಲಭಿಸಿತು" ಎಂದು ಅಭಿಷೇಕ್ ಹೇಳಿದ್ದಾರೆ.

ಪಂದ್ಯದ ವಿವರ

ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 245 ರನ್ ಗಳಿಸಿತು. ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ (82 ರನ್​ 36 ಎಸೆತ, 6 ಬೌಂಡರಿ, 6 ಸಿಕ್ಸರ್), ಪ್ರಿಯಾಂಶ್​ ಆರ್ಯ (36 ರನ್​, 13 ಎಸೆತ, 2 ಬೌಂಡರಿ, 4 ಸಿಕ್ಸರ್​) ಪ್ರಭ್ ಸಿಮ್ರಾನ್ ಸಿಂಗ್ (42 ರನ್​ 23 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ಮಾರ್ಕ್ ಸ್ಟೊಯಿನಿಸ್ (ಔಟಾಗದೆ 34 ರನ್​, 11 ಎಸೆತ, 1 ಬೌಂಡರಿ, 4 ಸಿಕ್ಸರ್) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ತಂಡವು ಬೃಹತ್​ ಮೊತ್ತವನ್ನು ಕಲೆಹಾಕಿತು. ಎಸ್‌ಆರ್‌ಎಚ್ ಬೌಲರ್‌ಗಳಲ್ಲಿ ಹರ್ಷಲ್ ಪಟೇಲ್ ನಾಲ್ಕು ವಿಕೆಟ್ ಪಡೆದರೆ, ಇಶಾನ್ ಮಾಲಿಂಗ ಎರಡು ವಿಕೆಟ್ ಪಡೆದರು.

ಬಳಿಕ ಪಂಜಾಬ್​ ನೀಡಿದ ಗುರಿ ಬೆನ್ನತ್ತಿದ ಎಸ್​ಆರ್​ಎಚ್​ ಪರ ಅಭಿಷೇಕ್ ಶರ್ಮಾ (141 ರನ್​, 55 ಎಸೆತ, 14 ಬೌಂಡರಿ, 10 ಸಿಕ್ಸರ್) ವಿಧ್ವಂಸಕ ಶತಕ ಗಳಿಸಿದರು. ಟ್ರಾವಿಸ್ ಹೆಡ್ (66 ರನ್​, 37 ಎಸೆತ, 9 ಬೌಂಡರಿ, 3 ಸಿಕ್ಸರ್) ನೆರವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ 18.3 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು. ಸತತ ಸೋಲುಗಳಿಂದ ಕಂಗೆಟ್ಟಿದ ಎಸ್​ಆರ್​ಎಚ್​ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net