

ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, 16 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿ ಇದೀಗ 17ನೇ ಆವೃತ್ತಿಗೆ ಕಾಲಿಟ್ಟಿದೆ. ಲೀಗ್ನಲ್ಲಿ ಇದುವರೆಗೆ ನಡೆದಿರುವ 16 ಆವೃತ್ತಿಗಳಲ್ಲೂ ಒಂದಿಲ್ಲೊಂದು ಮುರಿಯಲಾಗದಂತಹ ಅಪರೂಪದ ದಾಖಲೆಗಳು ನಿರ್ಮಾಣವಾಗಿವೆ. ಅದರಲ್ಲಿ ಪ್ರಮುಖವಾಗಿ ಮೂರು ದಾಖಲೆಗಳು ಆರ್ಸಿಬಿ ಹೆಸರಿನಲ್ಲಿರುವುದು ಮತ್ತಷ್ಟು ವಿಶೇಷವೆನ್ನಿಸಿದೆ.
2013 ರ ಐಪಿಎಲ್ನಲ್ಲಿ ಆರ್ಸಿಬಿಯ ಅಂದಿನ ಆರಂಭಿಕ ಆಟಗಾರನಾಗಿದ್ದ ಗೇಲ್, ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 66 ಎಸೆತಗಳಲ್ಲಿ 13 ಬೌಂಡರಿ ಮತ್ತು 17 ಸಿಕ್ಸರ್ ಸಹಿತ 175 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಬ್ಯಾಟರ್ ಒಬ್ಬ ಕಲೆಹಾಕಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿ ಉಳಿದಿದೆ. ಈ ಪಂದ್ಯದಲ್ಲಿ ಅತ್ಯಧಿಕ ಸ್ಕೋರ್ (263) ದಾಖಲಾಗಿದ್ದು ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಎಂದು ಹೇಳಲಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ, ರನ್ ಮೆಷಿನ್ ವಿರಾಟ್ ಕೊಹ್ಲಿ 2016ರಲ್ಲಿ ತಾವು ಆಡಿದ 16 ಪಂದ್ಯಗಳಲ್ಲಿ 4 ಶತಕ ಮತ್ತು 7 ಅರ್ಧ ಶತಕಗಳು ಒಳಗೊಂಡಂತೆ 973 ಗಳಿಸಿದ್ದರು. ಕೊಹ್ಲಿ ಕಲೆಹಾಕಿರುವ 973 ರನ್ ಇದುವರೆಗೆ ಐಪಿಎಲ್ ಸೀಸನ್ವೊಂದರಲ್ಲಿ ಆಟಗಾರನೊಬ್ಬ ಕಲೆಹಾಕಿರುವ ಅತ್ಯಧಿಕ ಸ್ಕೋರ್ ಆಗಿದೆ. ಈವರೆಗೆ ಯಾವೊಬ್ಬ ಆಟಗಾರನ್ನು ಈ ಮೈಲಿಗಲ್ಲನ್ನು ತಲುಪಲು ಸಾಧ್ಯವಾಗಿಲ್ಲ.
2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ಪರ ವಿರಾಟ್ ಕೊಹ್ಲಿ (109 ರನ್, 55 ಎಸೆತ), ಎಬಿ ಡಿವಿಲಿಯರ್ಸ್ (129 ರನ್, 52 ಎಸೆತ) ಎರಡನೇ ವಿಕೆಟ್‌ಗೆ ದಾಖಲೆಯ 229 ರನ್‌ಗಳ ಜೊತೆಯಾಟವನ್ನಾಡಿದ್ದರು. ಇಲ್ಲಿಯವರೆಗೆ ಈ ಜೊತೆಯಾಟವನ್ನು ಬೇರೆ ಯಾವ ಜೋಡಿಗೂ ಮುರಿಯಲು ಸಾಧ್ಯವಾಗಿಲ್ಲ. 17ನೇ ಆವೃತ್ತಿಯ ಐಪಿಎಲ್ನಲ್ಲಿ ಈ ದಾಖಲೆಯನ್ನು ಯಾವ ಆಟಗಾರರು ಮುರಿಯಲಿದ್ದಾರೆ ಎಂದು ಕಾದು ನೋಡಬೇಕಿದೆ.