

Fatty Liver : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅದರಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಕೂಡ ಒಂದು. ಆಹಾರ ಹಾಗೂ ಜೀವನಶೈಲಿಯಲ್ಲಿನ ಬದಲಾವಣೆಯೇ ಇದಕ್ಕೆ ಕಾರಣ. ಯಕೃತ್ತಿನ ಜೀವಕೋಶಗಳಲ್ಲಿ ಕೊಬ್ಬಿನ ಅತಿಯಾದ ಶೇಖರಣೆಯಿಂದ ಫ್ಯಾಟಿ ಲಿವರ್ ಅಥವಾ ಕೊಬ್ಬಿನ ಯಕೃತ್ ಸಮಸ್ಯೆಗೆ ಕಾರಣವಾಗುತ್ತದೆ. ಈ ಸಮಸ್ಯೆಯನ್ನು ಸರಿಯಾದ ಸಮಯಕ್ಕೆ ನಿಯಂತ್ರಿಸದಿದ್ದರೆ ಲಿವರ್ ಅನ್ನೇ ಡ್ಯಾಮೇಜ್ ಮಾಡಿಬಿಡುತ್ತದೆ.
ಫ್ಯಾಟಿ ಲಿವರ್ ಸಮಸ್ಯೆಯನ್ನು ತಪ್ಪಿಸಲು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಬಹುಮುಖ್ಯವಾಗಿ ಪ್ರತಿದಿನ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಯಾವುದೇ ಚಟುವಟಿಕೆ ಇಲ್ಲದಿದ್ದರೆ ದೇಹಕ್ಕೆ ಅಪಾಯವೇ ಹೆಚ್ಚು. ಕನಿಷ್ಠ 150 ನಿಮಿಷಗಳ ಕಾಲ ನಡೆದರೆ ಫ್ಯಾಟಿ ಲಿವರ್ ಸಮಸ್ಯೆ ಬರುವುದಿಲ್ಲ.
ಇನ್ನು ನೀವೇನಾದರೂ ಧೂಮಪಾನ ಮಾಡುತ್ತಿದ್ದರೆ ಅದನ್ನು ಕೂಡ ತ್ಯಜಿಸಬೇಕು. ಏಕೆಂದರೆ, ಧೂಮಪಾನದಿಂದ ಯಕೃತ್ತಿನ ಸಮಸ್ಯೆಗಳು ಹರಡುತ್ತವೆ. ಧೂಮಪಾನ ಮಾತ್ರವಲ್ಲ ಮದ್ಯಪಾನವನ್ನೂ ತಪ್ಪಿಸಿ. ಆಲ್ಕೋಹಾಲ್ ಕೂಡ ಕೊಬ್ಬಿನ ಯಕೃತ್ತಿಗೆ ಕಾರಣವಾಗಬಹುದು.
ಇನ್ನು ಕರಿದ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ತಿನ್ನಬೇಡಿ. ಪ್ರಸ್ತುತ ಚಳಿಗಾಲ ಇರುವುದರಿಂದ ಕರಿದ ತಿಂಡಿಗಳ ಮೇಲೆ ಬಯಕೆ ಹೆಚ್ಚಾಗುತ್ತಾದೆ. ಹಾಗಂತ ಹೆಚ್ಚಾಗಿ ತಿಂದರೆ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ. ಇದಿಷ್ಟೇ ಅಲ್ಲದೆ ಸಕ್ಕರೆ ಅಂಶ ಹೆಚ್ಚಿರುವ ತಂಪು ಪಾನೀಯಗಳನ್ನು ಸಹ ಸೇವಿಸಬೇಡಿ. ಇವು ಫ್ಯಾಟಿ ಲಿವರ್ಗೆ ಕಾರಣವಾಗಬಹುದು.
ಅತಿಯಾಗಿ ಉಪ್ಪು ಸೇವಿಸಿದರೆ ಫ್ಯಾಟಿ ಲಿವರ್ ಸಮಸ್ಯೆಯೂ ಬರಬಹುದು. ಸಂಸ್ಕರಿಸಿದ ಆಹಾರ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳಿಂದ ದೂರವಿರುವುದು ಉತ್ತಮ. ಅಲ್ಲದೆ, ಯಾವುದನ್ನೇ ಆದರೂ ಅತಿಯಾಗಿ ಸೇವಿಸಿದರೂ ಸಹ ಕೊಬ್ಬಿನ ಲಿವರ್ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಇಂತಹ ಪದಾರ್ಥಗಳಿಂದ ದೂರವಿರಿ ಮತ್ತು ಏನೇ ಸೇವಿಸಿದರು ಮಿತಿಯಲ್ಲಿರಲಿ ಹಾಗೂ ವ್ಯಾಯಾಮವೂ ಕೂಡ ನಿಮ್ಮ ದಿನಚರಿಯ ಭಾಗವಾಗಿರಲಿ ಆಗ ಮಾತ್ರ ಯಾವುದೇ ಆರೋಗ್ಯ ಸಮಸ್ಯೆಗಳು ನಿಮಗೆ ಕಾಡುವುದಿಲ್ಲ.
ಗಮನಿಸಿ: ಈ ಮೇಲಿನ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ. ಇದನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ವಿಜಯವಾಣಿ ಡಾಟ್ ನೆಟ್ ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.