ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದ 20 ತಂಡಗಳ ಪಟ್ಟಿ ಪ್ರಕಟ! T20 World Cup 2026

T20 World Cup 2026
Published on

ನವದೆಹಲಿ : ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾ ಆತಿಥ್ಯ ವಹಿಸಲಿರುವ ಟಿ20 ವಿಶ್ವಕಪ್ ( T20 World Cup 2026 ) ಟೂರ್ನಿಯಲ್ಲಿ ಭಾಗವಹಿಸುವ ತಂಡಗಳನ್ನು ಅಂತಿಮಗೊಳಿಸಲಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ಇಂದು (ಅ.17) ಪಟ್ಟಿ ಪ್ರಕಟಿಸಿದೆ.

ಈ ಮೆಗಾ ಟೂರ್ನಮೆಂಟ್‌ನಲ್ಲಿ ಒಟ್ಟು 20 ತಂಡಗಳು ಕಪ್‌ಗಾಗಿ ಸ್ಪರ್ಧಿಸಲಿವೆ. ಈ ಪಟ್ಟಿಯಲ್ಲಿ ಯುಎಇ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಪೂರ್ವ ಏಷ್ಯಾ ಪೆಸಿಫಿಕ್ ಅರ್ಹತಾ ಸುತ್ತಿನಲ್ಲಿ ಜಪಾನ್ ತಂಡವನ್ನು ಸೋಲಿಸುವ ಮೂಲಕ ಯುಎಇ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಓಮನ್ ಮತ್ತು ನೇಪಾಳ ಕೂಡ ಅದೇ ಪ್ರಾದೇಶಿಕ ಅರ್ಹತಾ ಸುತ್ತಿನ ಮೂಲಕ ತಮ್ಮ ವಿಶ್ವಕಪ್ ಸ್ಥಾನವನ್ನು ಪಡೆದುಕೊಂಡಿವೆ.

ಭಾರತ ಈ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿ ಆಡಲಿದೆ. ಇದು ತವರು ನೆಲದಲ್ಲಿ ನಡೆಯುವುದರಿಂದ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿಯುವ ಭರವಸೆಯಲ್ಲಿದೆ. ಇನ್ನು ಇಟಲಿ ತಂಡ ಇದೇ ಮೊದಲ ಬಾರಿಗೆ ಈ ಮೆಗಾ ಟೂರ್ನಿಗೆ ಅರ್ಹತೆ ಪಡೆದಿದೆ.

ನೇರವಾಗಿ ಅರ್ಹತೆ ಪಡೆದ ತಂಡಗಳು

ಭಾರತ ಮತ್ತು ಶ್ರೀಲಂಕಾ ಆತಿಥೇಯರಾಗಿ ನೇರವಾಗಿ ಅರ್ಹತೆ ಪಡೆದಿವೆ. T20 ವಿಶ್ವಕಪ್‌ನ ಸೂಪರ್ 8 ಹಂತವನ್ನು ತಲುಪಿದ ಏಳು ತಂಡಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್, ಅಫ್ಘಾನಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಯುಎಸ್​ಎ ಕೂಡ ನೇರವಾಗಿ ಅರ್ಹತೆ ಪಡೆದಿವೆ. ಐಸಿಸಿ ಶ್ರೇಯಾಂಕಗಳ ಆಧಾರದ ಮೇಲೆ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಐರ್ಲೆಂಡ್ ವಿಶ್ವಕಪ್ ಸ್ಥಾನವನ್ನು ಪಡೆದುಕೊಂಡಿವೆ.

ಅರ್ಹತಾ ಪಂದ್ಯಗಳ ಮೂಲಕ ಅರ್ಹತೆ ಪಡೆದ ತಂಡಗಳು

ಕೆನಡಾವು ಅಮೆರಿಕಾ ಪ್ರಾದೇಶಿಕ ಅರ್ಹತಾ ಪಂದ್ಯಗಳ ಮೂಲಕ ವಿಶ್ವಕಪ್‌ಗೆ ಅರ್ಹತೆ ಪಡೆದಿರೆ, ನೆದರ್‌ಲ್ಯಾಂಡ್ಸ್ ಮತ್ತು ಇಟಲಿ ಯುರೋಪ್ ಅರ್ಹತಾ ಪಂದ್ಯಗಳ ಮೂಲಕ, ನಮೀಬಿಯಾ ಮತ್ತು ಜಿಂಬಾಬ್ವೆ ಆಫ್ರಿಕಾ ಅರ್ಹತಾ ಪಂದ್ಯಗಳ ಮೂಲಕ ಮತ್ತು ಓಮನ್, ನೇಪಾಳ ಮತ್ತು ಯುಎಇ ಪೂರ್ವ ಏಷ್ಯಾ ಪೆಸಿಫಿಕ್ ಅರ್ಹತಾ ಪಂದ್ಯಗಳ ಮೂಲಕ ಅರ್ಹತೆ ಪಡೆದಿವೆ.

2026ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ತಂಡಗಳು

ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಯುಎಸ್ಎ, ವೆಸ್ಟ್ ಇಂಡೀಸ್, ಪಾಕಿಸ್ತಾನ, ನ್ಯೂಜಿಲೆಂಡ್, ಐರ್ಲೆಂಡ್, ಕೆನಡಾ, ಇಟಲಿ, ನೆದರ್ಲ್ಯಾಂಡ್ಸ್, ಜಿಂಬಾಬ್ವೆ, ನಮೀಬಿಯಾ, ನೇಪಾಳ, ಓಮನ್ ಮತ್ತು ಯುಎಇ.

20 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಣೆ

2026 ರ ಟಿ20 ವಿಶ್ವಕಪ್​ನಲ್ಲಿ ಇಪ್ಪತ್ತು ತಂಡಗಳು ಭಾಗವಹಿಸಲಿವೆ. ಅವುಗಳನ್ನು ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 8ಗೆ ಮುನ್ನಡೆಯುತ್ತವೆ. ಸೂಪರ್ 8 ಅನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೆಮಿಫೈನಲ್​ಗೆ ಮುನ್ನಡೆಯುತ್ತವೆ. ಸೆಮಿಫೈನಲ್ ವಿಜೇತರು ಫೈನಲ್​ನಲ್ಲಿ ಟ್ರೋಫಿಗಾಗಿ ಸ್ಪರ್ಧಿಸುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net