

Popcorn : ಇತ್ತೀಚಿನ ದಿನಗಳಲ್ಲಿ ಏನಾದರೂ ತಿನ್ನುವ ಮುಂಚೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಕಾರಣ ಪ್ರತಿಯೊಂದು ವಸ್ತುವೂ ಕಲಬೆರಕೆಯಾಗುತ್ತಿರುವುದು. ಅದಕ್ಕೆ, ಪಾಪ್‌ಕಾರ್ನ್‌ಗಳು ಕೂಡ ಹೊರತಾಗಿಲ್ಲ. ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುವ ತಿಂಡಿಗಳಲ್ಲಿ ಪಾಪ್‌ಕಾರ್ನ್‌ಗಳು ಕೂಡ ಒಂದು. ಅದರಲ್ಲಿರುವ ರಾಸಾಯನಿಕಗಳು ಮಕ್ಕಳಲ್ಲಿ ಶ್ವಾಸಕೋಶದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಸಾಮಾನ್ಯವಾಗಿ, ನಾವು ಚಿತ್ರಮಂದಿರಗಳಿಗೆ ಹೋದಾಗ ಅಲ್ಲಿ ಲಭ್ಯವಿರುವ ಆಹಾರವನ್ನು ಹೊರತುಪಡಿಸಿ ಬೇರೆ ಯಾವುದೇ ಆಹಾರವನ್ನು ತಿನ್ನಲು ಸಾಧ್ಯವಿಲ್ಲ. ಹೀಗಾಗಿ ಬೇರೆ ದಾರಿ ಇಲ್ಲದೇ ಚಿತ್ರಮಂದಿರಗಳಲ್ಲಿ ಮಾರಾಟವಾಗುವ ಪಾಪ್‌ಕಾರ್ನ್, ಚಿಪ್ಸ್ ಇತ್ಯಾದಿಗಳನ್ನು ಮಾತ್ರ ತಿನ್ನುತ್ತೇವೆ. ಇದಲ್ಲದೆ, ಅವುಗಳನ್ನು ಹೆಚ್ಚಿನ ದರದಲ್ಲಿಯೂ ಖರೀದಿಸುತ್ತೇವೆ.
ಸಿನಿಮಾ ಥಿಯೇಟರ್ಗೆ ಹೋದಾಗ ಮಕ್ಕಳು ಪಾಪ್‌ಕಾರ್ನ್ ಅನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ, ಪಾಪ್‌ಕಾರ್ನ್‌ಗೆ ಬಳಸುವ ಪದಾರ್ಥಗಳಲ್ಲಿರುವ ರಾಸಾಯನಿಕಗಳಿಂದಾಗಿ ಮಕ್ಕಳು ಪಾಪ್‌ಕಾರ್ನ್ ಶ್ವಾಸಕೋಶ ಎಂಬ ಭಯಾನಕ ಕಾಯಿಲೆಯನ್ನು ಬೆಳೆಸಿಕೊಳ್ಳಬಹುದು ಎಂದು ತಜ್ಞರು ಬಹಿರಂಗಪಡಿಸಿದ್ದಾರೆ.
ಅಂದಹಾಗೆ, ನೀವು ನಿಮ್ಮ ಮಕ್ಕಳಿಗಾಗಿ ಮಾಲ್‌ಗಳು ಮತ್ತು ಚಿತ್ರಮಂದಿರಗಳಲ್ಲಿ ಪಾಪ್‌ಕಾರ್ನ್ ಖರೀದಿಸುತ್ತೀರಾ? ಹೌದು ಎಂದಾದರೆ, ನಿಮ್ಮ ಕೈಯಾರೆ ಮಕ್ಕಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದೀರಿ ಎಂದರ್ಥ. ನೀವು ಎಂದಾದರೂ ಪಾಪ್‌ಕಾರ್ನ್ ಶ್ವಾಸಕೋಶ ಎಂಬ ಕಾಯಿಲೆಯ ಬಗ್ಗೆ ಕೇಳಿದ್ದೀರಾ? ಪಾಪ್‌ಕಾರ್ನ್ ಶ್ವಾಸಕೋಶ ಅಥವಾ ಬ್ರಾಂಕಿಯೋಲೈಟಿಸ್ ಆಬ್ಲಿಟೆರಾನ್ಸ್ ಎಂದು ಕರೆಯಲಾಗುತ್ತದೆ. ಇದು ಪಾಪ್‌ಕಾರ್ನ್‌ಗೆ ಬಳಸುವ ಕೃತಕ ಬೆಣ್ಣೆಯ ಸುವಾಸನೆಗಳಲ್ಲಿ ಕಂಡುಬರುವ ಡಯಾಸಿಟೈಲ್ ಮತ್ತು ಇನ್ನಿತರ ರಾಸಾಯನಿಕಗಳನ್ನು ಉಸಿರಾಡುವುದರಿಂದ ಉಂಟಾಗುವ ಗಂಭೀರ ಶ್ವಾಸಕೋಶದ ಕಾಯಿಲೆಯಾಗಿದೆ. ಈ ರಾಸಾಯನಿಕಗಳು ಶ್ವಾಸಕೋಶದಲ್ಲಿನ ಚಿಕ್ಕ ವಾಯುಮಾರ್ಗಗಳ ಕಿರಿದಾಗಿಸುತ್ತದೆ. ಅದರಿಂದ ಕೆಮ್ಮು, ಉಬ್ಬಸ ಮತ್ತು ಉಸಿರಾಟದ ತೊಂದರೆಯಂತಹ ಲಕ್ಷಣಗಳಿಗೆ ಕಾರಣವಾಗುತ್ತದೆ.
ಇನ್ನು ಈ ರೋಗವು ಕೆಲವು ರಾಸಾಯನಿಕ ಸುವಾಸನೆ ನೀಡುವ ಏಜೆಂಟ್‌ಗಳನ್ನು, ವಿಶೇಷವಾಗಿ ಬೆಣ್ಣೆಯ ಪರಿಮಳವನ್ನು ನೀಡಲು ಬಳಸುವ ಡಯಾಸಿಟೈಲ್ ಅನ್ನು ಉಸಿರಾಡುವುದರಿಂದ ಉಂಟಾಗುತ್ತದೆ. ಡಯಾಸಿಟೈಲ್ ಮತ್ತು ಇತರ ಸಂಬಂಧಿತ ಸಂಯುಕ್ತಗಳು ಶ್ವಾಸಕೋಶದಲ್ಲಿರುವ ಸಣ್ಣ ಗಾಳಿಯ ಚೀಲಗಳನ್ನು, ವಾಯುಮಾರ್ಗಗಳನ್ನು (ಬ್ರಾಂಚಿಯೋಲ್‌ಗಳು) ಹಾನಿಗೊಳಿಸುತ್ತವೆ. ಈ ಹಾನಿಯು ಉರಿಯೂತಕ್ಕೆ ಕಾರಣವಾಗುತ್ತದೆ. ಅಲ್ಲದೆ, ಇದು ವಾಯುಮಾರ್ಗಗಳನ್ನು ಕಿರಿದಾಗಿಸುತ್ತದೆ, ಇದರಿಂದಾಗಿ ಆಳವಾಗಿ ಉಸಿರಾಡಲು ಕಷ್ಟವಾಗುತ್ತದೆ.
ಹೀಗಾಗಿ, ಮೈಕ್ರೋವೇವ್ ಪಾಪ್‌ಕಾರ್ನ್ ಮತ್ತು ಇತರ ಉತ್ಪನ್ನಗಳಂತಹ ಕೃತಕ ಸುವಾಸನೆಗಳನ್ನು ಹೊಂದಿರುವ ಆಹಾರವನ್ನು ಸೇವಿಸುವ ಮೂಲಕ ಮಕ್ಕಳು ಈ ಶ್ವಾಸಕೋಶದ ಕಾಯಿಲೆಗೆ ತುತ್ತಾಗುವ ಅಪಾಯ ಹೆಚ್ಚಾಗಿರುತ್ತದೆ. (ಏಜೆನ್ಸೀಸ್)