

ಔರಂಗಾಬಾದ್: ಭಾರತ ಮಹಿಳಾ ಖೋಖೋ ತಂಡದ ಮಾಜಿ ನಾಯಕಿ ಸಾರಿಕಾ ಕಾಳೆ ಈ ಬಾರಿ ಅರ್ಜುನ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ವೇಳೆ ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿರುವ ಅವರು, ದಶಕದ ಕಾಲ ದಿನಕ್ಕೆ ಒಂದೇ ಹೊತ್ತು ಊಟ ಮಾಡುತ್ತಿದ್ದೆ ಎಂದಿದ್ದಾರೆ. ಅಲ್ಲದೆ ಖೋಖೋ ಆಟವಾಡಲು ಆರಂಭಿಸಿದ ಬಳಿಕ ತಮ್ಮ ಜೀವನ ಬದಲಾಯಿತು ಮತ್ತು ಆರ್ಥಿಕ ಸಮಸ್ಯೆಗಳೆಲ್ಲ ದೂರವಾದವು ಎಂದಿದ್ದಾರೆ.
ಪ್ರಸಕ್ತ ಮಹಾರಾಷ್ಟ್ರ ಸರ್ಕಾರದಲ್ಲಿ ಕ್ರೀಡಾ ಅಧಿಕಾರಿಯಾಗಿ ಉದ್ಯೋಗದಲ್ಲಿರುವ ಸಾರಿಕಾ ಕಾಳೆ, ಆಗಸ್ಟ್ 29ರಂದು ರಾಷ್ಟ್ರಪತಿಗಳಿಂದ ವರ್ಚುವಲ್ ಸಮಾರಂಭದಲ್ಲಿ ಅರ್ಜುನ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅವರು 2016ರ ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ಖೋಖೋ ತಂಡವನ್ನು ಸ್ವರ್ಣ ಪದಕ ಗೆಲುವಿನತ್ತ ಮುನ್ನಡೆಸಿದ್ದರು. ಆ ಟೂರ್ನಿಯಲ್ಲಿ ಅವರು ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಯೂ ಲಭಿಸಿತ್ತು.
‘ನನ್ನ ಕುಟುಂಬದ ಪರಿಸ್ಥಿತಿಯಿಂದಾಗಿ ನಾನು ಖೋಖೋ ಆಡಲಾರಂಭಿಸಿದೆ. ಈ ಕ್ರೀಡೆಯಿಂದ ನನ್ನ ಜೀವನವೇ ಬದಲಾಯಿತು. ಅದರಿಂದಲೇ ನಾನು ಈಗ ಸರ್ಕಾರಿ ಕೆಲಸದಲ್ಲಿರುವೆ’ ಎಂದು 27 ವರ್ಷದ ಸಾರಿಕಾ ಕಾಳೆ ಹೇಳಿದ್ದಾರೆ. ಮಹಾರಾಷ್ಟ್ರದ ಓಸ್ಮಾನ್‌ಬಾದ್ ಜಿಲ್ಲೆಯಲ್ಲಿ 13ನೇ ವಯಸ್ಸಿನಲ್ಲಿ ಮೊದಲ ಬಾರಿ ಖೋಖೋ ಆಡಲು ಮೈದಾನಕ್ಕಿಳಿದಿದ್ದರು.
‘ನನ್ನ ಅಮ್ಮ ಹೊಲಿಗೆ ಮಾಡುತ್ತಿದ್ದರು. ನನ್ನ ತಂದೆ ದೈಹಿಕ ಸಮಸ್ಯೆಯಿಂದಾಗಿ ಹೆಚ್ಚು ದುಡಿಯುತ್ತಿರಲಿಲ್ಲ. ನನ್ನ ಇಡೀ ಕುಟುಂಬ ಅಜ್ಜ-ಅಜ್ಜಿಯ ಸಂಪಾದನೆಯನ್ನು ಅವಲಂಬಿಸಿತ್ತು. ಆ ದಿನಗಳಲ್ಲಿ ನಾನು ದಿನದ ಒಂದು ಹೊತ್ತು ಮಾತ್ರ ಊಟ ಮಾಡುತ್ತಿದ್ದೆ. ನಾನು ಯಾವುದಾದರೂ ಟೂರ್ನಿ ಅಥವಾ ಶಿಬಿರಗಳ ಸಮಯದಲ್ಲಿ ನಾನು ಬೇರೆಯೇ ಡಯೆಟ್ ಪಾಲಿಸುತ್ತಿದ್ದೆ’ ಎಂದು ಸಾರಿಕಾ ಮೆಲುಕು ಹಾಕಿದ್ದಾರೆ.
ಹಲವಾರು ಸಮಸ್ಯೆಗಳ ನಡುವೆಯೂ ನನ್ನ ಕುಟುಂಬ ನನಗೆ ಖೋಖೋ ಆಡಲು ಬೆಂಬಲ ನೀಡಿದೆ. ವಿವಿಧ ಟೂರ್ನಿಗಳಿಗೆ ಹೋಗದಂತೆ ಎಂದೂ ತಡೆದಿಲ್ಲ ಎಂದಿದ್ದಾರೆ. ಈ ಹಿಂದೆ ಸಾರಿಕಾ ಕ್ರೀಡೆಯನ್ನು ತ್ಯಜಿಸಲು ಮುಂದಾಗಿದ್ದರೂ, ಅವರ ಅಜ್ಜಿ ಹಾಗೆ ಮಾಡದಂತೆ ತಡೆದಿದ್ದರು ಎಂದು ಅವರ ಕೋಚ್ ಚಂದ್ರಜಿತ್ ಜಾಧವ್ ಹೇಳಿದ್ದಾರೆ. ಕಳೆದ 10 ವರ್ಷಗಳಲ್ಲಿ ಸಾರಿಕಾ ಕಾಳೆ ಅವರು ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಹಲವಾರು ಪದಕಗಳನ್ನು ಜಯಿಸಿದ್ದಾರೆ.