

ಚೆನ್ನೈ: ಐಪಿಎಲ್ನ ಅರ್ಧ ಯುದ್ಧವನ್ನು ಹರಾಜು ಟೇಬಲ್ನಲ್ಲೇ ಗೆಲ್ಲಲಾಗುತ್ತದೆ ಎಂಬ ಮಾತಿದೆ. ಆದರೆ ಈ ಬಾರಿ ಚೆನ್ನೈ ಸೂಪರ್ಕಿಂಗ್ಸ್ ಅರ್ಧ ಯುದ್ಧವನ್ನು ಹರಾಜು ಟೇಬಲ್ನಲ್ಲೇ ಸೋತಿದ್ದಂತೆ ಕಾಣಿಸುತ್ತಿದೆ. ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದು, 7ರಲ್ಲಿ ಸೋತಿರುವ ಸಿಎಸ್ಕೆ ತಂಡ ಪ್ಲೇಆ್ ರೇಸ್ನಿಂದ ಬಹುತೇಕ ಹೊರಬಿದ್ದಿದೆ. ಇದರ ಬೆನ್ನಲ್ಲೇ ಸಿಎಸ್ಕೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್, ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆದ ಕಳೆದ ಮೆಗಾ ಹರಾಜಿನಲ್ಲಿ ಆಟಗಾರರನ್ನು ಆಯ್ದುಕೊಳ್ಳುವ ವೇಳೆ ಕೆಲ ಎಡವಟ್ಟುಗಳನ್ನು ಮಾಡಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಸಾಮಾನ್ಯವಾಗಿ ಅನುಭವಿ ಆಟಗಾರರಿಗೆ ಮಣೆ ಹಾಕುವ ಸಿಎಸ್ಕೆ ಈ ಸಲವೂ ಅದನ್ನೇ ಮುಂದುವರಿಸಿದೆ. ಆದರೆ ಅದೇ ಕಾರ್ಯತಂತ್ರ ಈ ಬಾರಿ ಅದಕ್ಕೆ ಕೈಕೊಟ್ಟಿದೆ. ಕಳೆದ ಹರಾಜಿನಲ್ಲಿ ಪಡೆದುಕೊಂಡ ಆರ್. ಅಶ್ವಿನ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ವಿಜಯ್ ಶಂಕರ್ ಅವರಂಥ ಅನುಭವಿ ಆಟಗಾರರು ನೀರಸ ನಿರ್ವಹಣೆಯಿಂದ ನಿರಾಸೆ ಮೂಡಿಸಿದ್ದಾರೆ.
"ಹರಾಜಿನಲ್ಲಿ ಇತರ ತಂಡಗಳು ಉತ್ತಮ ಆಟಗಾರರನ್ನು ಆಯ್ದುಕೊಳ್ಳುವಲ್ಲಿ ಯಶಸ್ವಿಯಾದವು. ಆದರೆ ನಾವು ಸರಿಯಾದ ಆಯ್ಕೆಗಳನ್ನು ಮಾಡಿಕೊಳ್ಳುವಲ್ಲಿ ಎಡವಿದೆವು. ಆದರೆ ಹರಾಜಿನಲ್ಲಿ ಪರಿಪೂರ್ಣವಾದ ತಂಡವನ್ನು ಆಯ್ದುಕೊಳ್ಳುವುದು ಸುಲಭವಾದುದಲ್ಲ. ನಾವು ಉತ್ತಮವಾದ ತಂಡವನ್ನೇ ಆರಿಸಿದೆವು ಎನಿಸಿದರೂ, ನಮಗೆ ಬೇಕಾದ ಫಲಿತಾಂಶವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ' ಎಂದು ಫ್ಲೆಮಿಂಗ್ ಹೇಳಿದ್ದಾರೆ.
ಸಿಎಸ್ಕೆ ತಂಡ ಇದುವರೆಗೆ ತಂಡದಲ್ಲಿರುವ 19 ಆಟಗಾರರನ್ನು ಆಡಿಸಿದೆ. ಆದರೂ ಸಮರ್ಥವಾದ ತಂಡ ಸಂಯೋಜನೆಯನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ನಾಯಕ ಋತುರಾಜ್ ಗಾಯಕ್ವಾಡ್ ಸಹಿತ ಕೆಲ ಆಟಗಾರರ ಗಾಯದ ಸಮಸ್ಯೆಯೂ ಹಿನ್ನಡೆ ತಂದಿತು. ಕೆಲ ಆಟಗಾರರಿಗೆ ಫಾರ್ಮ್ ಕೈಕೊಟ್ಟಿದೆ. ನಮ್ಮ ಕಾರ್ಯತಂತ್ರದಲ್ಲಿ ದೊಡ್ಡ ಸಮಸ್ಯೆ ಕಾಣಿಸುತ್ತಿಲ್ಲ ಎಂದು ಫ್ಲೆಮಿಂಗ್ ತಿಳಿಸಿದ್ದಾರೆ.